ಅಲ್ಪಸಂಖ್ಯಾತ ಲಿಂಗಾಯತ ಮಾನ್ಯತೆ ಹೋರಾಟ ವೇದಿಕೆ ಸಭೆ.

ಅಲ್ಪಸಂಖ್ಯಾತ ಲಿಂಗಾಯತ ಮಾನ್ಯತೆ ಹೋರಾಟ ವೇದಿಕೆ ಸಭೆ : ಜೂನ್ 7ರ ಸಮಾವೇಶಕ್ಕೆ ಎಲ್ಲ ಒಳಪಂಗಡಗಳ ಬೆಂಬಲ

ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲಾ : ಹುಬ್ಬಳ್ಳಿ : ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ಹಾಗೂ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿರುವ ಅಲ್ಪಸಂಖ್ಯಾತ ಲಿಂಗಾಯತ ಮಾನ್ಯತೆ ಹೋರಾಟ ವೇದಿಕೆ ವತಿಯಿಂದ ನಡೆದ ಸಭೆಯಲ್ಲಿ, ಲಿಂಗಾಯತ ಸಮಾಜದ ವಿವಿಧ ಒಳಪಂಗಡಗಳ ಮುಖಂಡರು ಒಗ್ಗಟ್ಟಿನ ಸಂಕಲ್ಪ ವ್ಯಕ್ತಪಡಿಸಿ, ದಿನಾಂಕ ರವಿ ವಾರ 07/06/2026 ರಂದು ನಡೆಯಲಿರುವ ಮಹತ್ವದ ಸಮಾವೇಶಕ್ಕೆ ಸರ್ವಾನುಮತ ಬೆಂಬಲ ಸೂಚಿಸಿದರು.


ಶ್ರೀ ಚಿಂತಾಮಣಿ ಸಿಂದಗಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಲಿಂಗಾಯತ ಸಮಾಜದ ವಿವಿಧ ಒಳಪಂಗಡಗಳ ಮುಖಂಡರು ಭಾಗವಹಿಸಿ, ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ಪಡೆಯುವ ಹೋರಾಟದ ದಿಕ್ಕು, ಉದ್ದೇಶಗಳು ಮತ್ತು ಮುಂದಿನ ಕಾರ್ಯಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಸಭೆಯಲ್ಲಿ ಚಿಂತಾಮಣಿ ಸಿಂದಗಿ, ಡಿ.ಸಿ. ರಂಗರಡ್ಡಿ,ರಾಜು ಕೊಟಗಿ, ಅಶೋಕ ಅಂಗಡಿ, ವೀರಣ್ಣ ಮಾಳಗಿ, ಎಸ್.ವಿ. ಅಂಗಡಿ, ಆರ್.ಎಸ್. ಅರಣಿ (ವಕೀಲರು), ಸಂದಾನಂದ ತೇರದಾಳ ಸೇರಿದಂತೆ ಅನೇಕ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಸಭೆಯಲ್ಲಿ ಪಂಚಮಸಾಲಿ, ಬಣಜಿಗ, ಜಂಗಮ, ಸಾಧರ, ಶಿವಸಿಂಪಿಗ, ಗಾಣಿಗ, ರೆಡ್ಡಿ (ಲಿಂಗಾಯತ), ಕುಂಬಾರ, ಕುಡಒಕ್ಕಲಿಗ, ಮೇದಾರ ಸೇರಿದಂತೆ ಲಿಂಗಾಯತ ಸಮಾಜದ ವಿವಿಧ ಒಳಪಂಗಡಗಳ ಮುಖಂಡರು ಭಾಗವಹಿಸಿ, “ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಮಾತ್ರ ಸಮುದಾಯದ ಹಕ್ಕುಗಳ ಸಾಧನೆ ಸಾಧ್ಯ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು:

  1. ಲಿಂಗಾಯತರು ಯಾರು?
    ಲಿಂಗಧಾರಣೆ, ಬಸವ ತತ್ವ, ಶರಣ ಸಂಸ್ಕೃತಿ, ಇಷ್ಟಲಿಂಗ ಆರಾಧನೆ ಹಾಗೂ ಸಮಾನತೆಯ ಸಿದ್ಧಾಂತಗಳನ್ನು ಅನುಸರಿಸುವ ಸಮುದಾಯವೇ ಲಿಂಗಾಯತರು ಎಂಬ ಕುರಿತು ಚರ್ಚೆ ನಡೆಯಿತು.
  2. ಲಿಂಗಾಯತರು ಸ್ವತಂತ್ರ ಧರ್ಮವಾಗಲು ಇರುವ ಅರ್ಹತೆಗಳು:
    ಸ್ವತಂತ್ರ ಧಾರ್ಮಿಕ ತತ್ವ, ಆಚರಣೆ, ವಚನ ಸಾಹಿತ್ಯ, ಗುರುಪರಂಪರೆ ಹಾಗೂ ವೈಶಿಷ್ಟ್ಯಪೂರ್ಣ ಆಧ್ಯಾತ್ಮಿಕ ನೆಲೆಗಳ ಆಧಾರದ ಮೇಲೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
  3. ಲಿಂಗಾಯತ ಧರ್ಮ ಮತ್ತು ಹಿಂದೂ ಧರ್ಮದ ನಡುವಿನ ಭಿನ್ನತೆಗಳು:
    ಇಷ್ಟಲಿಂಗ ಪೂಜೆ, ಜಾತಿ ವಿರೋಧಿ ತತ್ವ, ಸಮಾನತೆಯ ಮೌಲ್ಯಗಳು, ಶರಣರ ವಚನಾಧಾರಿತ ಬದುಕು ಸೇರಿದಂತೆ ಹಲವು ವಿಷಯಗಳಲ್ಲಿ ಲಿಂಗಾಯತ ಧರ್ಮದ ವೈಶಿಷ್ಟ್ಯತೆ ಕುರಿತು ಚರ್ಚಿಸಲಾಯಿತು.
    ಅಲ್ಪಸಂಖ್ಯಾತ ಮಾನ್ಯತೆಯಿಂದ ಆಗುವ ಅನುಕೂಲತೆಗಳು:
    ಶೈಕ್ಷಣಿಕ ಅನುಕೂಲತೆಗಳು: ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ವಿದ್ಯಾರ್ಥಿವೇತನ ಹಾಗೂ ಶಿಕ್ಷಣ ಪ್ರೋತ್ಸಾಹ ಯೋಜನೆಗಳ ವಿಸ್ತರಣೆ.

    ಆರ್ಥಿಕ ಅನುಕೂಲತೆಗಳು: ಉದ್ಯಮ, ಸ್ವಯಂ ಉದ್ಯೋಗ, ಆರ್ಥಿಕ ಅಭಿವೃದ್ಧಿ ಯೋಜನೆಗಳ ಸೌಲಭ್ಯ.
    ಧಾರ್ಮಿಕ ಅನುಕೂಲತೆಗಳು: ಧಾರ್ಮಿಕ ಸ್ವಾಯತ್ತತೆ, ಪರಂಪರೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಅವಕಾಶ.
    ಸಭೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ಸಾಕ್ಷ್ಯ-ಪುರಾವೆಗಳು, ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳು, ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿಯ ವರದಿ, ಹಾಗೂ ತಜ್ಞರ ಸಮಿತಿಯ ಶಿಫಾರಸುಗಳ ಕುರಿತೂ ಚರ್ಚೆ ನಡೆಸಲಾಯಿತು.
    ವೇದಿಕೆಯ ಪ್ರಮುಖ ಉದ್ದೇಶಗಳು:
    ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ
    ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸರ್ಕಾರದಿಂದ ಮಾನ್ಯತೆ
    ಲಿಂಗಾಯತರನ್ನು ಅಲ್ಪಸಂಖ್ಯಾತರಾಗಿ ಸರ್ಕಾರದಿಂದ ಗುರುತಿಸುವುದು
    ಎಲ್ಲ ಲಿಂಗಾಯತ ಒಳಪಂಗಡಗಳನ್ನು ಒಕ್ಕೂಟದ
    ಮೂಲಕ ಒಂದುಗೂಡಿಸುವುದು
    ಮೊದಲ ಹಂತದಲ್ಲಿ ಬಣಜಿಗ, ಪಂಚಮಸಾಲಿ, ಜಂಗಮ, ಸಾಧರ, ಬನಗಾರ, ಶಿವಸಿಂಪಿಗ, ಗಾಣಿಗ, ರೆಡ್ಡಿ (ಲಿಂಗಾಯತ), ಕುಂಬಾರ, ಕುಡಒಕ್ಕಲಿಗ, ಮೇದಾರ ಸೇರಿದಂತೆ ಒಳಪಂಗಡಗಳನ್ನು ಒಗ್ಗೂಡಿಸಿ, ಮುಂದಿನ ಹಂತಗಳಲ್ಲಿ ಇತರ ಪಂಗಡಗಳನ್ನೂ ಒಕ್ಕೂಟಕ್ಕೆ ತರಲು ತೀರ್ಮಾನಿಸಲಾಯಿತು.

    “ಎಲ್ಲ ಒಳಪಂಗಡದವರನ್ನು ಒಗ್ಗೂಡಿಸಿ, ಒಗ್ಗಟ್ಟಿನಿಂದ ಹೋರಾಟ ನಡೆಸುವುದೇ ನಮ್ಮ ಗುರಿ. ಶರಣರ ಬರುವೆ ನಮಗೆ ಪ್ರಾಣ ಜೀವಾಳವಯ್ಯ” ಎಂದು ಸಭೆಯಲ್ಲಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.