ಮೇಲ್ಮಣ್ಣು ಸಂರಕ್ಷಣೆಯ ಪ್ರಾಮುಖ್ಯತೆ – ಮಣ್ಣು ಹೊದಿಕೆ ಇತ್ಯಾದಿ . . . .

ವೀರಮಾರ್ಗ ನ್ಯೂಸ್ : AGRICULTURE NEWS : ಮಳೆ ಬೇಸಾಯದಲ್ಲಿ ಮೇಲ್ಮಣ್ಣಲ್ಲಿನ ತೇವಾಂಶದ ಪಾತ್ರ – ಅದರಲ್ಲಿ ಏರುಪೇರಾದಾಗ ಆಗುವ ಬರಗಾಲ ಮತ್ತು ಪ್ರವಾಹ ದಂತಹ ದುರಂತಗಳು – ಮೇಲ್ಮಣ್ಣು ಸಂರಕ್ಷಣೆಯ ಪ್ರಾಮುಖ್ಯತೆ – ಮಣ್ಣು ಹೊದಿಕೆ ಇತ್ಯಾದಿ . . . .

ಮಣ್ಣಲ್ಲಿನ ತೇವಾಂಶ ಎಂದರೆ , ಸಾವಯವ ವಸ್ತು ಮತ್ತು ಇನ್ನಿತರ ಅಂಶಗಳನ್ನೊಳಗೊಂಡ ಹೊಲದ ಮೇಲ್ಮಣ್ಣಿನಲ್ಲಿ ಲಭ್ಯವಿರುವ ನೀರಿನ ಪ್ರಮಾಣ. ಕೆಲವರು ಅದನ್ನು ಮೇಲ್ಮಣ್ಣಲ್ಲಿನ ತಂಪಿನ ಅಂಶ ಎಂದೂ ಗುರುತಿಸುತ್ತಾರೆ.

ಇದು ಅಂತರ್ಜಲಕ್ಕಿಂತಾ ಮೇಲಿರುವ ಮೇಲ್ಮಣ್ಣಲ್ಲಿ ಇರುವ ತೇವ. ಇದನ್ನೇ “vadose zone” ಎನ್ನುತ್ತಾರೆ. ಮೇಲ್ಮಣ್ಣಿನ ಈ ಪದರದಲ್ಲೇ, ಅಂದರೆ ಮೇಲ್ಮಣ್ಣಿನಿಂದ ಸುಮಾರು 1 ಅಡಿ ಆಳದಲ್ಲಿ ಇರುವ ಮಣ್ಣಲ್ಲಿ ತೇವ – ಗಾಳಿ – ಸಾವಯವ ಅಂಶ ಇತ್ಯಾದಿ ಅಂಶಗಳು ಇರುತ್ತವೆ.

ಮಣ್ಣಲ್ಲಿನ ತೇವಾಂಶದ ಪ್ರಮಾಣ ಮಳೆಯಾಧಾರಿತ ಬೇಸಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಲದಲ್ಲಿ ಬೀಳುವ ಮಳೆನೀರು ಹಾಗೂ ಆ ಪ್ರದೇಶದಲ್ಲಿ ಸಿಗುವ ಹಿಮದ ಅಂಶವೇ ಮಳೆಯಾಧಾರಿತ ಬೇಸಾಯಕ್ಕೆ ಮೂಲಾಧಾರ.

ಬೆಳೆಗಳು ಮಳೆನೀರು ಮತ್ತು ಮಣ್ಣಲ್ಲಿನ ತೇವಾಂಶವನ್ನೇ ಹೀರುತ್ತಾ ತಮ್ಮ ಬೆಳವಣಿಗೆ ಮಾಡಿಕೊಳ್ಳುತ್ತವೆ.

ಒಂದು ಹೊಲದ ಮೇಲ್ಮಣ್ಣಿನ ಸ್ಥಿತಿ ಮತ್ತು ಅಲ್ಲಿ ನಡೆಯುವ ಘಟನೆಗನ್ನು ಅರ್ಥಮಾಡಿಕೊಳ್ಳಲು ಮೇಲ್ಪದರದ ಮಣ್ಣಲ್ಲಿನ ತೇವಾಂಶದ ಪ್ರಮಾಣ ನೋಡುವುದು ಸಾಮಾನ್ಯ. ಇಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಕೆಲವು ನಮ್ಮ ಬರಿಗಣ್ಣಿಗೆ ಕಾಣುತ್ತವೆ. ಉಳಿದವು ಅಗೋಚರವಾಗಿಯೇ ಜರುಗುತ್ತವೆ.

ಸಾಮಾನ್ಯವಾಗಿ ನೀರಾವರಿ ಸೌಕರ್ಯ ಹೊಂದಿರುವ ರೈತರು ಬೆಳೆಗಳಿಗೆ ನೀರುಣಿಸುವಾಗ, ಅದನ್ನೇ ಮಣ್ಣಿನ ತೇವಾಂಶ ಎಂದು ಭಾವಿಸುತ್ತಾರೆ. ಕೆಲವರು ಹನಿ ನೀರಾವರಿ ಮೂಲಕವೂ ತಮ್ಮ ಬೆಳೆಗಳಿಗೆ ನೀರುಣಿಸುತ್ತಾರೆ.

ಇಲ್ಲಿ ಒಂದು ಗಮನಿಸಬೇಕಾದ ವಿಷಯವಿದೆ. ಅದೇ ಮಣ್ಣು ಮತ್ತು ನೀರಿನ ನಡುವಿನ ಸಮತೋಲನೆ. ಬೆಳೆಗಳು ಬೆಳೆಯಲು ನೀರು ಬೇಕು ನಿಜ. ಆದರೆ ಅದು ಕೂಡಾ ಸರಿಯಾದ ಪ್ರಮಾಣದಲ್ಲಿರಬೇಕು. ಮಣ್ಣಲ್ಲಿ ತೇವಾಂಶ ಹೆಚ್ಚಾದರೂ ಸಹ, ರೈತರಿಗೆ ಬೆಳೆ ನಿರ್ವಹಣೆ ಕಷ್ಟ.

ಹೊಲದಲ್ಲಿ ಹೆಚ್ಚು ನೀರಿದ್ದಾಗ, ಟ್ರ್ಯಾಕ್ಟರ್ ಮೂಲಕ ಉಳುಮೆ ಅಥವಾ ಬಿತ್ತನೆ ಮಾಡಲಾಗದು. ಇದರಿಂದ ಬಿತ್ತನೆ ಕೆಲಸ ಮುಂದೂಡಲಾಗುತ್ತದೆ. ಇದನ್ನೇ prevented planting ಎನ್ನುತ್ತಾರೆ. ಹಾಗೆಯೇ, ಮಣ್ಣಲ್ಲಿ ಹೆಚ್ಚು ನೀರು ತುಂಬಿರುವಾಗ, ಬೆಳೆಗಳ ಖಟಾವಿನ ಕೆಲಸವೂ ಕಷ್ಟವೇ. ಇದನ್ನೇ delayed harvest ಎನ್ನುತ್ತಾರೆ.

ಸಕಾಲದಲ್ಲಿ ಆಗುವ ಬಿತ್ತನೆ ಮತ್ತು ಸಕಾಲದಲ್ಲಿ ಆಗುವ ಖಟಾವು ಯಾವುದೇ ಬೆಳೆಯ ಇಳುವರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳಲ್ಲಿ ಸ್ವಲ್ಪ ಏರುಪೇರಾದರೂ ಅದು ರೈತನಿಗೆ ನಷ್ಟವೇ.

ನಾವು ಆಗಾಗ್ಗೆ ಅನುಭವಿಸುವ ಬರಗಾಲ ಮತ್ತು ಪ್ರವಾಹಗಳು ಮಣ್ಣು ತೇವಾಂಶದ ಮೇಲೆ ನಡೆಯುವ ಅತಿರೇಕದ ಘಟನೆಗಳೇ. ವಿಪರೀತ ಮಳೆಯಾದಾಗ, ನಮ್ಮ ಹೊಲಗಳು ಪ್ರವಾಹಕ್ಕೊಳಗಾಗುತ್ತವೆ. ಇಲ್ಲಿ ಪ್ರವಾಹ ಆಗಲು ಕಾರಣಗಳನ್ನು ತಿಳಿದುಕೊಳ್ಳುವುದು ಮುಖ್ಯ.

ಮೊದಲೇ ನಮ್ಮ ಹೊಲಗಳು ಬಿರುಮಳೆಗೆ ಸಿಕ್ಕು, ಹೊಲದಲ್ಲಿನ ಮಣ್ಣಲ್ಲಿ ನೀರು ಸಂಪೂರ್ಣ ತುಂಬಿಹೋಗಿದೆ. ಮತ್ತೆ ಭಾರೀ ಮಳೆಯಾದಾಗ, ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈಗ ನಮ್ಮಲ್ಲಿನ ಮಣ್ಣುಗಳಲ್ಲಿ ಇಲ್ಲ. ಹಾಗಾಗಿ ಹೊಲದಲ್ಲಿ ಬಿದ್ದ ಮಳೆನೀರಿಗೆ ಮಣ್ಣೊಳಗೆ ಇಳಿಯಲು ಸಾಧ್ಯವಾಗದಿರುವಾಗ, ಇನ್ನೆಲ್ಲಿ ಹೋಗುವುದು? ಅವು ಹೊಲದ ಮೇಲೆಲ್ಲಾ ಹರಡಿಕೊಳ್ಳುತ್ತದೆ. ಮಳೆನೀರಿನಿಂದ ಮೇಲ್ಮಣ್ಣು ಕೊಚ್ಚಿಹೋಗುವುದು ಹೀಗೆಯೇ.

ಇದು ನಮ್ಮ ಹೊಲದಲ್ಲಾದ ಪ್ರವಾಹದ ಮೊದಲ ಲಕ್ಷಣ. ಇಂತಹ ಪ್ರವಾಹಗಳು ಆದಾಗ, ನೀರು ಹೊಲದಿಂದ ಹೊರಗೂ ಹರಿದುಹೋಗುತ್ತದೆ. ಹೀಗೆ ಹೋಗುವಾಗ, ತನ್ನೊಂದಿಗೆ ಮೇಲ್ಮಣ್ಣನ್ನೂ, ಆ ಮಣ್ಣಲ್ಲಿದ್ದ ತೇವಾಂಶವನ್ನೂ, ಅದರೊಂದಿಗಿದ್ದ, ಪೋಷಕಾಂಶವನ್ನೂ ಹಾಗೂ ಜೀವಾಂಶವನ್ನೂ ಕೊಚ್ಚಿಕೊಂಡು ಹೋಗಿಬಿಡುತ್ತದೆ.

ಇದೇ ರೀತಿಯಲ್ಲಿ ಮಣ್ಣಲ್ಲಿನ ತೇವಾಂಶ ಕಡಿಮೆಯಾಗಿರುವಾಗ, ಗಿಡಗಳು ಒಣಗಿ ಸಾಯುತ್ತವೆ. ಚಿಗುರದ, ಬೆಳೆಯದ ಗಿಡಗಳಿಂದಾಗಿ ಮಣ್ಣಿನ ಮೇಲೆ ನೆರಳು ಕಡಿಮೆಯಾಗುತ್ತದೆ. ಮಣ್ಣು ನೇರ ಬಿಸಿಲಿಗೆ ಈಡಾಗುತ್ತದೆ . ಬೀಸುವ ಗಾಳಿಗೆ ಮೇಲ್ಮಣ್ಣು ಚದುರುತ್ತದೆ. ಗಾಳಿಗೆ ತೂರಿಹೋಗುತ್ತದೆ.

ಇನ್ನು ವಾತಾವರಣದ ಪ್ರಭಾವವೂ ಸಹ ಮಣ್ಣಿನ ತೇವಾಂಶದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಮೇಲ್ಮಣ್ಣ ಮೇಲೆ ನೇರವಾಗಿ ಬೀಳುವ ಬಿರುಬಿಸಿಲಿಗೆ ಮಣ್ಣಲ್ಲಿನ ತೇವಾಂಶ ಆವಿಯಾಗಿ ಮಣ್ಣು ಬಿಸಿಯಾಗುತ್ತದೆ. ಮಣ್ಣಿನ ಮೇಲೆ ಹೊದಿಕೆ (mulch) ಇರಬೇಕೆನ್ನುವುದು ಈ ಕಾರಣಕ್ಕಾಗಿಯೇ.

ಮಣ್ಣಲ್ಲಿನ ತೇವಾಂಶದ ಸ್ಥಿತಿ ನಮ್ಮ ಆರೋಗ್ಯದ ಮೇಲೂ ಸಹ ಪರಿಣಾಮ ಬೀರುತ್ತದೆ. ಬರಗಾಲವಿರುವ ಸ್ಥಿತಿಯಲ್ಲಿ, ಬೀಸುವ ಗಾಳಿ ಮಣ್ಣನ್ನು ಚದುರಿಸುವುದರಿಂದ, ಮಣ್ಣಿನ ಸಣ್ಣ ಕಣಗಳು ಗಾಳಿಗೆ ಹಾರುತ್ತವೆ. ಇದರಿಂದ ನಾವು ಉಸಿರಾಡುವ ಗಾಳಿಯ ಗುಣಮಟ್ಟ ಕಡಿಮೆಯಾಗುತ್ತದೆ. ಇದು ನಮ್ಮಲ್ಲಿ ಅಸ್ತಮಾ, ಬ್ರಾಂಕೈಟಿಸ್ ಇನ್ನಿತರ ಖಾಯಿಲೆಗಳನ್ನು ತರುತ್ತವೆ.

ಇದು ಮಣ್ಣಲ್ಲಿನ ತೇವಾಂಶ ಪ್ರಮಾಣದಲ್ಲಿ ಏರುಪೇರಾದರೆ ಆಗುವ ಅನಾಹುತಗಳ ಒಂದು ಸಣ್ಣ ವಿವರವಷ್ಟೇ. ಆದ್ದರಿಂದಲೇ ಮಣ್ಣಿನ ತೇವಾಂಶ ನಿರ್ವಹಣೆ ಬಹು ಮುಖ್ಯ ಎನ್ನುವುದು.