ವೀರಮಾರ್ಗ ನ್ಯೂಸ್ : ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ 8ನೇ ಅಖಿಲ ಕರ್ನಾಟಕ ಸಮ್ಮೇಳನವನ್ನು ಮಾ.22, 23ಕ್ಕೆ ಹಮ್ಮಿಕೊಳ್ಳಲಾಗಿದೆ.
12 ವರ್ಷಗಳ ನಂತರ ಹಮ್ಮಿಕೊಳ್ಳಲಾಗಿರುವ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಡಾ.ಎಚ್.ಎಸ್. ಶ್ರೀಮತಿಯವರು ಆಯ್ಕೆಯಾಗಿದ್ದಾರೆ.
ಅರಮನೆ ರಸ್ತೆಯಲ್ಲಿರುವ ಭಾರತ್ ಸೈಟ್ಸ್ ಆ್ಯಂಡ್ ಗೈಡ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣದ ಡಾ.ಕಮಲಾ ಹಂಪನಾ ವೇದಿಕೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಮಾ.22ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಡಾ. ಎಚ್.ಎಲ್.ಪುಷ್ಪ ಪ್ರಸ್ತಾವನ ಮಂಡಿಸಲಿದ್ದು, ಹಿರಿಯ ಚಿಂತನ ರಾಜೇಂದ್ರ ಚೆನ್ನಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕಿ ಡಾ.ಕೆ.ಎಂ.ಗಾಯಿತ್ರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರ.

ಎರಡು ದಿನಗಳ ಸಮ್ಮೇಳನದಲ್ಲಿ ವಿಶೇಷ ಲೇಖಕಿ, ಲೇಖ ಲೋಕ 9, ಕರ್ನಾಟಕ ಲೇಖಕಿಯರ ಸಂಘ ನಡೆದು ಬಂದ ದಾರಿ, ಊರ್ಮಿಳಾ ಸೇರಿ ವಿವಿಧ ಕೃತಿಗಳ ಲೋಕಾರ್ಪಣೆ, ಭಾಷೆಯ ಸಾಧ್ಯತೆ ಮತ್ತು ಸವಾಲುಗಳು, ನನ್ನ ಬದುಕು ನನ್ನ ಆಯ್ಕೆ, ಆಧುನಿಕತೆ ಹಾಗೂ ಅಸ್ಮಿತೆಯ ಅನ್ವೇಷಣಾ ಕ್ರಮಗಳು ಮತ್ತಿತರ ಪುಚಲಿತ ವಿಷಯಗಳ ಕುರಿತು ಚಿಂತನಾ ಗೋಷ್ಠಿ, ಕವಿಗೋಷ್ಠಿ, ಹಲವು ಸಾಧಕರಿಗೆ ಸನ್ಮಾನ, ಗೀತ ಗಾಯನ, ನೃತ್ಯ, ರೂಪಕ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ.23ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾದ ಶಿವರಾಜ ತಂಗಡಗಿ ಸಮಾರೋಪ ಭಾಷಣ ಮಾಡಲಿದ್ದಾರೆ. ಹಿರಿಯ ಲೇಖಕಿ ಭಾನು ಮುಷಾಕ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಲೇಖಕಿಯರ ಸಂಘದ ಮಾಜಿ ಅಧ್ಯಕ್ಷ ಡಾ. ವಸುಂಧರಾ ಭೂಪತಿ, ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.