ವಿದ್ಯುತ್ ಕಂಬದಲ್ಲೇ ನೇತಾಡುತ್ತಾ ‘ಕಾಪಾಡಿ ಕಾಪಾಡಿ’ ಎಂದು ನರಳಾಡಿ ಪ್ರಾ*ಣಬಿಟ್ಟ ಕಾರ್ಮಿಕ; ಬಳ್ಳಾರಿಯಲ್ಲಿ ಭಯಾನಕ ಘಟನೆ
ವೀರಮಾರ್ಗ ನ್ಯೂಸ್ : ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಅತ್ಯಂತ ದಾರುಣ ಮತ್ತು ಜೀವರೇಗಿಸುವ ಘಟನೆಯೊಂದು ನಡೆದಿದೆ. ವಿದ್ಯುತ್ ಲೈನ್ ಸರಿಪಡಿಸಲು ಕಂಬ ಏರಿದ್ದ ದಿನಗೂಲಿ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶಿಸಿ ಕಂಬದ ಮೇಲೆಯೇ ಪ್ರಾ*ಣಬಿಟ್ಟಿದ್ದಾನೆ.
ಮೃತರನ್ನು ಹುಲಗಪ್ಪ ಎಂದು ಗುರುತಿಸಲಾಗಿದ್ದು, ಇವರು ತೀವ್ರ ವಿದ್ಯುತ್ ಆಘಾತದಿಂದಾಗಿ ಕಂಬದಲ್ಲೇ ನೇತಾಡುತ್ತಾ ನರಳಾಡಿ ಮೃತಪಟ್ಟಿದ್ದಾರೆ.
ದಿನಗೂಲಿ ಕೆಲಸಕ್ಕಾಗಿ ಬಂದಿದ್ದ ಹುಲಗಪ್ಪ ಅವರನ್ನು ಯಾವುದೇ ಸೂಕ್ತ ಸುರಕ್ಷತಾ ಪರಿಕರಗಳಿಲ್ಲದೆ ಕಂಬ ಹತ್ತಿಸಲಾಗಿತ್ತು ಎನ್ನಲಾಗಿದೆ. ದುರಸ್ತಿ ಕಾರ್ಯದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿದ್ದರಿಂದ ಅವರು ಕಂಬಕ್ಕೆ ಸಿಲುಕಿಕೊಂಡಿದ್ದಾರೆ. ಕಂಬದ ಮೇಲೆಯೇ ಇರಕಲಾಗಿ ಸಿಲುಕಿ ‘ಕಾಪಾಡಿ, ಕಾಪಾಡಿ’ ಎಂದು ಜೋರಾಗಿ ಕಿರುಚುತ್ತಾ, ಜೀವ ಉಳಿಸಿಕೊಳ್ಳಲು ಅವರು ನಡೆಸಿದ ಕೊನೆಯ ಹೋರಾಟದ ದೃಶ್ಯ ನೆರೆದವರ ಎದೆ ಝಲ್ಲೆನಿಸುವಂತಿತ್ತು.
ಈ ಭೀಕರ ದುರಂತಕ್ಕೆ ಜೆಸ್ಕಾಂ (GESCOM) ಅಧಿಕಾರಿಗಳು ಹಾಗೂ ಸ್ಥಳೀಯ ಲೈನ್‌ಮ್ಯಾನ್ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸದೆ ಕಾರ್ಮಿಕನನ್ನು ಕಂಬಕ್ಕೆ ಹತ್ತಿಸಿರುವುದು ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಈ ಘಟನೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ: ಚನ್ನೇಶ್ ಕೆ ಎಂ
ಬೆಂಗಳೂರು
ಬೆಂಗಳೂರಿಗರೇ ಗಮನಿಸಿ… ಗಮನಿಸಿ!
ರಸ್ತೆ ಬದಿಯಲ್ಲಿ ವರ್ಷಗಟ್ಟಲೆಯಿಂದ ಧೂಳು ತಿನ್ನುತ್ತಾ ಬಿದ್ದಿರುವ ಅನಾಥ ವಾಹನಗಳಿಗೆ ಮುಕ್ತಿ ಹಾಡಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದಾರೆ!
‘ಟ್ರಾಫಿಕ್ ಫ್ರೀ ಬೆಂಗಳೂರು’ ಮತ್ತು ‘ಸೇಫ್ ಫುಟ್‌ಪಾತ್’ ಅಭಿಯಾನದ ಬೆನ್ನಲ್ಲೇ, ಈಗ ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿರುವ ಗುಜರಿ ಹಾಗೂ ಅನಾಥ ವಾಹನಗಳ ಎತ್ತಂಗಡಿಗೆ ಮುಹೂರ್ತ ಫಿಕ್ಸ್ ಆಗಿದೆ.
ಏನಿದು ಹೊಸ ನಿಯಮ? ನೀವೇನು ಮಾಡಬೇಕು?
ಇಂದಿನಿಂದಲೇ ಸ್ಟಿಕ್ಕರ್ ಅಭಿಯಾನ: ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ತೀರಾ ಹಳೆಯದಾದ, ಯಾರೂ ಮುಟ್ಟದ ವಾಹನಗಳನ್ನು ಗುರುತಿಸಿ ಅಧಿಕಾರಿಗಳು ನೋಟಿಸ್/ಸ್ಟಿಕ್ಕರ್ ಅಂಟಿಸಲಿದ್ದಾರೆ.
GBA-ಪೊಲೀಸ್ ಜಂಟಿ ಕಾರ್ಯಾಚರಣೆ: ಜಿಬಿಎ (GBA) ಹಾಗೂ ಸಂಚಾರ ಪೊಲೀಸ್ ಇಲಾಖೆ ಒಟ್ಟಾಗಿ ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿವೆ.
ಕೇವಲ 7 ದಿನಗಳ ಗಡುವು: ನಿಮ್ಮ ವಾಹನಕ್ಕೆ ಒಮ್ಮೆ ನೋಟಿಸ್ ಬಿತ್ತೆಂದರೆ, ಅದನ್ನು ತೆರವುಗೊಳಿಸಲು ನಿಮಗೆ ಕೇವಲ ಒಂದು ವಾರ (7 ದಿನಗಳು) ಮಾತ್ರ ಸಮಯವಿರುತ್ತದೆ.
ತಕ್ಷಣ ನಿಮ್ಮ ಜಾಗಕ್ಕೆ ಸರಿಸಿ: ನಿಮ್ಮ ಮನೆಯ ಹೊರಗೆ, ಬಿಲ್ಡಿಂಗ್ ಬಿಟ್ಟು ಆಚೆ ರಸ್ತೆ ಬದಿಯಲ್ಲಿ ಇಂತಹ ಹಳೆಯ ಬೇಡದ ಬಂಡಿಗಳಿದ್ದರೆ ತಕ್ಷಣವೇ ನಿಮ್ಮ ಸ್ವಂತ ಜಾಗಕ್ಕೆ ಸ್ಥಳಾಂತರಿಸಿ.
ವಾರದಲ್ಲಿ ತೆರವು ಮಾಡದಿದ್ದರೆ ಏನಾಗುತ್ತೆ?
ನೆನಪಿಡಿ: 7 ದಿನಗಳ ಒಳಗಾಗಿ ಮಾಲೀಕರು ವಾಹನವನ್ನು ಸರಿಸದಿದ್ದರೆ, ಕಾರ್ಯಾಚರಣೆ ತಂಡವು ಅದನ್ನು ನೇರವಾಗಿ ಟೋಯಿಂಗ್ (Towing) ಮಾಡಿಕೊಂಡು ಹೋಗಲಿದೆ. ಅಷ್ಟೇ ಅಲ್ಲ, ಕಾನೂನು ಪ್ರಕ್ರಿಯೆಗಳ ನಂತರ ಆ ವಾಹನಗಳನ್ನು ಹರಾಜು ಹಾಕಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ!
ನಿಮ್ಮ ವಾಹನ ಹರಾಜಾಗುವುದು ಬೇಡ ಎಂದರೆ ಇಂದೇ ಎಚ್ಚೆತ್ತುಕೊಳ್ಳಿ. ಅನಗತ್ಯವಾಗಿ ರಸ್ತೆ ಬದಿಯಲ್ಲಿ ಗಾಡಿಗಳನ್ನು ನಿಲ್ಲಿಸಿ ದಂಡ ಹಾಗೂ ಕಾನೂನು ಕ್ರಮಕ್ಕೆ ಒಳಗಾಗಬೇಡಿ.
ನಮ್ಮ ಬೆಂಗಳೂರು, ಸುಗಮ ಬೆಂಗಳೂರು
ಫುಟ್‌ಪಾತ್‌ಗಳು ಪಾದಚಾರಿಗಳಿಗಾಗಿ, ರಸ್ತೆಗಳು ಸುಗಮ ಸಂಚಾರಕ್ಕಾಗಿ. ಟ್ರಾಫಿಕ್ ಫ್ರೀ ಬೆಂಗಳೂರಿಗೆ ಜಿಬಿಎ (GBA) ಪಣ ತೊಟ್ಟಿದ್ದು, ಈ ಅಭಿಯಾನಕ್ಕೆ ಕೈಜೋಡಿಸಿ, ಬೆಂಗಳೂರನ್ನು ಮುಕ್ತವಾಗಿಡಲು ಸಹಕರಿಸಿ.
ವರದಿ: ಚನ್ನೇಶ್ ಕೆ ಎಂ
ಬೆಂಗಳೂರು