ಪೊಲೀಸರೊಂದಿಗೆ 30 ವರ್ಷ ಕಣ್ಣಾಮುಚ್ಚಾಲೆ
ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರು
ಮೂರು ತಿಂಗಳ ಹಿಂದಿನ ಮಾತು. ಮಂಗಳೂರು ಪೊಲೀಸರು ಪೆಂಡಿಂಗ್ ಇರುವ ಕೇಸುಗಳ ಕಡತಗಳನ್ನು ವಿಲೇವಾರಿ ಮಾಡುತ್ತಿರುತ್ತಾರೆ. ಆಗ ಸವಾಲಿನಂತೆ ಎದುರು ಕಂಡದ್ದು ಮಿಸ್ಟರ್ ಆಂಟನಿಯ ಕೇಸ್ ಫೈಲು.
2019ರಲ್ಲಿ ಚಾರ್ಜ್‌ಶೀಟ್ ಆಗಿದ್ದ ಕೇಸು ಅದು. ಈ ಬಾರಿ ಏನಾದರೂ ಮಾಡಿ ಆಸಾಮಿಯನ್ನು ಪತ್ತೆ ಮಾಡಲೇಬೇಕು ಅಂತಾಯ್ತು. ಅದಕ್ಕಾಗಿ ಸಿಟಿ ಕ್ರೈಮ್ ಬ್ರಾಂಚ್ ಉಸ್ತುವಾರಿಯಲ್ಲಿ ಮೂರು ತಂಡಗಳ ರಚನೆ ಆಯ್ತು.
ಆತ ಹೇಗೆ ಕಾಣಿಸುತ್ತಾನೆ ಅನ್ನೋದೊಂದನ್ನು ಬಿಟ್ಟು ಪೊಲೀಸರ ಬಳಿ ಮತ್ಯಾವ ಮಾಹಿತಿಯೂ ಇರಲಿಲ್ಲ. ಆತ ಈಗ ಎಲ್ಲಿದ್ದಾನೆ ಅನ್ನೋದಾಗ್ಲೀ ಅಥವಾ ಆತನ ಕಾಂಟಾಕ್ಟ್ ನಂಬರ್ ಆಗ್ಲೀ ಕೈಗೆ ಸಿಕ್ಕಿರ‍್ಲಿಲ್ಲ. ಆದರೂ ಫೀಲ್ಡಿಗಿಳಿದಾಗ ಆತ ಕೇರಳ ಅಥವಾ ತಮಿಳಿನಾಡಿನಲ್ಲಿ ಇರಬಹುದು ಎಂಬ ಮಾಹಿತಿ. ಇದಷ್ಟೇ ಸುಳಿವಿನ ಜಾಡು ಹಿಡಿದ ಮಂಗಳೂರು ಪೊಲೀಸರು, ಆ ಎರಡೂ ರಾಜ್ಯದಲ್ಲಿ ಈ ಹಿಂದೆ ಆತನ ಒಡನಾಟದಲ್ಲಿ ಇದ್ದರು ಎನ್ನಲಾದ ಮಂದಿಯೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಈ ಸಾರ್ತಿ ಏನಾದರೂ ಮಾಡಿ ಹಿಡಿಯುವ ಉಮೇದು.
ಹೀಗಿರ್ತಾ… ಪೊಲೀಸರು ನಿರೀಕ್ಷೆಯೇ ಮಾಡದಿದ್ದ ಮಾಹಿತಿಯೊಂದು ಹುಡುಕಿಬರುತ್ತದೆ. ಆಂಟನಿ ಕೇರಳದಲ್ಲಿ ಇದ್ದಾನೆಂಬ ಸುದ್ದಿ. ಸ್ವಾರಸ್ಯ ಅಂದ್ರೆ, ಆತ ಇದುವರೆಗೂ ಜನರನ್ನು ಯಾಮಾರಿಸಿದ್ದು ಕೇಂದ್ರದ ನಾನಾ ಏಜೆನ್ಸಿಗಳ ಅಧಿಕಾರಿ ಎಂಬ ವೇಷದಲ್ಲಿ. ಆದರೆ ಈ ಬಾರಿ ರಾಜಕಾರಣಿಯ ವೇಷ ಧರಿಸಿದ್ದ. ಅಷ್ಟೇ ಅಲ್ಲ, ಕಾರ್ಯಕ್ರಮವೊಂದರ ಮುಖ್ಯ ಅತಿಥಿಯಾಗಿಯೂ ಭಾಗವಹಿಸಿದ್ದ. ಆ ಕಾರ್ಯಕ್ರಮದ ಫೋಟೊ ಕೈಗೆ ಸಿಗುತ್ತಲೇ ಕಾರ್ಯಾಚರಣೆ ನಡೆದು, ಈಗ ಕರ್ನಾಟಕ ಪೊಲೀಸರ ಅತಿಥಿ.
ಈತನ ನಾಮಧೇಯ ಸ್ಯಾಮ್ ಆಂಟನಿ. ಆದರೆ ಇದೂ ಆತನ ಸ್ವಂತ ಹೆಸರಾ ಎಂಬುದರ ಬಗ್ಗೆ ಈಗ ಪೊಲೀಸರಿಗೂ ಅನುಮಾನ ಇದ್ದಂತಿದೆ. ಯಾಕೆಂದರೆ, ಇದುವರೆಗೂ ಈತ ಆ ಪಾಟಿ ಹೆಸರು ಬದಲಿಸಿದ್ದಾನೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರು; ಸ್ಯಾಮ್ ಪೀಟರ್, ರಾಹುಲ್ ಪೀಟರ್, ಡ್ಯಾನಿ ತಾರಕನ್, ರಾಜೇಶ್ ರಾಬಿನ್‌ಸನ್, ಆಂಟನಿ ಫ್ರಾನ್ಸಿನ್… ಹೀಗೆ! ಬರೀ ಹೆಸರಲ್ಲ, ಅದಕ್ಕೆ ಸೂಕ್ತ ದಾಖಲೆಗಳು ಬೇರೆ! ಇವೆಲ್ಲ ವರಸೆಗಳು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುವಷ್ಟು ಜಬರ್ದಸ್ತ್ ಇದ್ದವು ಅಂದಮೇಲೆ, ಮೋಸ ಹೋಗುವವರ ಪಾಡು ಕೇಳಬೇಕೇ!
ಕೆಲವು ಕಾಲ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ ಅಧಿಕಾರಿ. ಮತ್ತೆ ಕೆಲ ಕಾಲ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ) ಏಜೆಂಟು. ಮತ್ತಷ್ಟು ಕಾಲ ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋ ಅಧಿಕಾರಿ… ಹೀಗೆ 1997ರಿಂದಲೂ ಆಂಟನಿಯದು ತರಹೇವಾರಿ ವೇಷ. ಮೊದಲ ವಂಚನೆ ಕೇಸು ದಾಖಲಾಗಿದ್ದು ಛತ್ತೀಸ್‌ಗಢದಲ್ಲಿ. ಎರಡನೇ ಕೇಸು ನಮ್ಮ ಕುಶಾಲನಗರದಲ್ಲಿ.
2019ರ ಒಂದಿನ. ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋದ ಹಿರಿಯ ಅಧಿಕಾರಿಯೊಬ್ಬರು ಮಂಗಳೂರು ನಗರದಲ್ಲಿದ್ದಾರೆ ಎಂಬ ಸುದ್ದಿ. ಸಾಮಾನ್ಯವಾಗಿ ಸ್ಥಳೀಯ ಪೊಲೀಸರಿಗೆ ಇಂತಹ ಮಾಹಿತಿಗಳು ಮೊದಲೇ ತಿಳಿದಿರುತ್ತವೆ. ಆದರೆ, ಮಾಹಿತಿ ಕೊಡದೆ ಅಚ್ಚರಿಯ ಭೇಟಿ ಕೊಟ್ಟಿರುವ ಅಧಿಕಾರಿ ಯಾರಾಗಿರಬಹುದು ನೋಡುವ ಅಂತ ಹೋದ ಆಗಿನ ಪೊಲೀಸ್ ಅಧಿಕಾರಿ ಎಸ್ ವಿ ಮಾರುತಿ ಅವರಿಗೆ ಮತ್ತೊಂದು ಅಚ್ಚರಿ ಕಾದಿತ್ತು. ಆ ಅಧಿಕಾರಿ ಈ ಆಂಟನಿ ಆಗಿದ್ದ! ಮುಖ್ಯವಾದ ಕೇಸೊಂದರ ತನಿಖೆಗೆ ಬಂದಿರುವುದಾಗಿ ಸಾಧಿಸಿದ್ದ ಕೂಡ. ಲಾಡ್ಜ್‌ಗೆ ಪೊಲೀಸರು ಭೇಟಿ ಕೊಟ್ಟಾಗ ಆಂಟನಿ ತನ್ನ ಗುಂಪಿನೊಂದಿಗಿದ್ದ. ಅವರ ಬಳಿ ಅಸಲಿ ರಿವಾಲ್ವರ್‌ಗಳೂ ಇದ್ದವು! ಹಾಗೆ ಅರೆಸ್ಟು ಮಾಡಿದ ಮೇಲೆಯೇ ಗೊತ್ತಾಗಿದ್ದು, ಈತನ ಮೇಲೆ 2007ರಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಸಹ ಆಗಿತ್ತು!
2023ರಲ್ಲಿ ಜಾಮೀನು ಸಿಗುತ್ತಲೇ ಆಂಟನಿ ಮತ್ತೆ ನಾಪತ್ತೆ. ಕರ್ನಾಟಕ, ತಮಿಳುನಾಡು, ಚೆನ್ನೈ, ಮಹಾರಾಷ್ಟ್ರ, ಉತ್ತರ ಪ್ರದೇಶ… ಹೀಗೆ ಅಲ್ಲಿದ್ದಾನೆ ಇಲ್ಲಿದ್ದಾನೆ ಅನ್ನೋ ಸುದ್ದಿಗಳು. ಆದರೆ, ಯಾರ ಕೈಗೂ ಸಿಕ್ಕಿರಲಿಲ್ಲ. ಈಗ ಎರಡನೇ ಬಾರಿಗೆ ಮಂಗಳೂರು ಪೊಲೀಸರಿಗೇ ಸಿಕ್ಕಿಬಿದ್ದಿರೋದು ವಿಶೇಷ.
ಆಂಟನಿಯ ವಂಚನೆ ಕಾರ್ಯಾಚರಣೆ ಬಹಳ ಸರಳ. ಬ್ಯಾಂಕ್ ಫ್ರಾಡ್, ತೆರಿಗೆ ಕದ್ದ ಆರೋಪ, ಹಣಕಾಸು ಮೋಸದಂತಹ ಕೇಸುಗಳನ್ನು ಹುಡುಕೋದು. ಅದರಲ್ಲಿ ಭಾಗಿಯಾದ ಸಿರಿವಂತರನ್ನು ತನಿಖಾ ಸಂಸ್ಥೆಯ ಅಧಿಕಾರಿಯ ಸೋಗಿನಲ್ಲಿ ಹೆದರಿಸಿ, ಡೀಲ್ ಹೆಸರಿನಲ್ಲಿ ಹಣ ಪಡೆದು ಕಣ್ಮರೆ ಆಗೋದು. 2019ರ ಮಂಗಳೂರು ಕೇಸ್‌ನಲ್ಲಿ ಹೀಗೆ ಆಂಟನಿ ತಂಡ ಬಾಚಿದ್ದು ಬರೋಬ್ಬರಿ 1.13 ಕೋಟಿ ರುಪಾಯಿ.
ಮತ್ತೊಂದು ಸ್ವಾರಸ್ಯ ಅಂದ್ರೆ, ಈತನ ಹೆಸರಿನಲ್ಲಿ ಯಾವುದೇ ಡಿಜಿಟಲ್ ಫುಟ್ ಪ್ರಿಂಟ್ಸ್ ಇಲ್ಲ; ಈತನ ಹೆಸರಿನಲ್ಲಿ ಸಿಮ್ ಖರೀದಿ ಆಗಿಲ್ಲ, ಬ್ಯಾಂಕ್ ಅಕೌಂಟ್ ಇಲ್ಲ, ಟ್ರಾನ್ಸಾಕ್ಷನ್ಸೂ ಇಲ್ಲ! ಎಲ್ಲವೂ ಬೇರೆಯವರ ಹೆಸರಿನಲ್ಲಿ ವ್ಯವಸ್ಥಿತ ಕಾರ್ಯಾಚರಣೆ. ಜೊತೆಗೆ, ಪೊಲೀಸರ ಪ್ರಕಾರ, ಈತನ ನಿರರ್ಗಳ ಇಂಗ್ಲಿಷ್ ಮಾತು ಕೇಳಿದ್ರೆ ಸಾಕು – ಎಂತಹ ಬುದ್ಧಿವಂತರಿಗೂ ಇಂವ ದೊಡ್ಡ ಆಫೀಸರ್ರೇ ಸರಿ ಅನ್ನಿಸುವುದುಂಟಂತೆ!
ಹೀಗೆ, ಸರಿಸುಮಾರು ಮೂವತ್ತು ವರ್ಷ ಪೊಲೀಸರನ್ನು ಕಾಡಿದ ಆಂಟನಿ ಎರಡನೇ ಬಾರಿಗೆ ಅರೆಸ್ಟಾಗಿದ್ದಾನೆ. ಮಜ್ಜಾ ಏನಂದ್ರೆ, ಅರೆಸ್ಟಿನ ನಂತರ ಕೇರಳದಿಂದ ಕರ್ನಾಟಕದ ಪೊಲೀಸ್ ಅಧಿಕಾರಿಗೆ ಸ್ವಾರಸ್ಯಕರ ಕರೆಗಳು ಬಂದಿವೆ; ಅದರಲ್ಲಿ, ಈತ ಪ್ರಾಮಾಣಿಕನೂ ಸತ್ಯಂಸಂಧನೂ ಆದವನೆಂದು ಹೇಳಲಾಗಿದೆಯಂತೆ. ಕರೆ ಮಾಡಿದವರು ವಕೀಲರು, ದೊಡ್ಡ ವ್ಯಾಪಾರಸ್ಥರು, ಸಿಕ್ಕಾಪಟ್ಟೆ ಪ್ರಭಾವಿ ವ್ಯಕ್ತಿಗಳು ಎಂಬುದು ವಿಶೇಷ. ಇವರೆಲ್ಲರ ಪ್ರಕಾರ ಇಂವ ಡೇನಿಯಲ್, ಆಂಟನಿ ಅಲ್ಲ. ಸದ್ಯಕ್ಕೆ ಮಂಗಳೂರು ಪೊಲೀಸರಿಗೆ ಕೇಸಿನ ಜೊತೆಗೆ ಈ ಕರೆಗಳ ಕಾಟ ಭರ್ಜರಿ.
ಇದಕ್ಕೆಲ್ಲ ಕಿಮ್ಮತ್ತು ಕೊಡದ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ದೇಶಾದ್ಯಂತ 17 ಕೇಸುಗಳ ಸಂಬಂಧ ಆಯಾಯ ಪೊಲೀಸ್ ಠಾಣೆಗಳಿಗೆ ಆಂಟನಿ ಅರೆಸ್ಟಿನ ಸುದ್ದಿ ತಲುಪಿಸಿದ್ದಾರೆ. ಇತ್ತ, 2019ರಲ್ಲಿ ಚಾರ್ಜ್‌ಶೀಟ್ ಆಗಿದ್ದ ಕೇಸಿನ ವಿಚಾರಣೆ ಆರಂಭವಾಗಿದೆ. ಮುಂದೇನಾಗುತ್ತೆ ಅನ್ನೋದು ಥ್ರಿಲ್ಲರ್ ಕಾದಂಬರಿಯ ಮತ್ತೊಂದು ಅಧ್ಯಾಯ ಆಗಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
ಮಾಹಿತಿ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್
Image Courtesy: ಮಾತೃಭೂಮಿ