ಕನಕಗಿರಿಯಲ್ಲಿ ಕೆಆರ್‌ಎಸ್ ಪಕ್ಷದಿಂದ ಲಂಚಮುಕ್ತ ಅಭಿಯಾನ.

ಕನಕಗಿರಿಯಲ್ಲಿ ಕೆಆರ್‌ಎಸ್ ಪಕ್ಷದಿಂದ ಲಂಚಮುಕ್ತ ಅಭಿಯಾನ: ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆಗಳ ಪರಿಶೀಲನೆ.

ವೀರಮಾರ್ಗ ನ್ಯೂಸ್ : ಕನಕಗಿರಿ : ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ವತಿಯಿಂದ ಅಕ್ಟೋಬರ್ 12,2026ರಂದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಲಂಚಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಈ ಅಭಿಯಾನದ ಭಾಗವಾಗಿ ಮಾತನಾಡಿದ ಪಕ್ಷದ ಮುಖಂಡ ನಿರುಪಾದಿ ಕೆ ಗೋಮರ್ಸಿ ಕನಕಗಿರಿ ತಾಲೂಕಿನ ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ತಾಲೂಕು ಪಂಚಾಯತ್ ಕಾರ್ಯಾಲಯ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಸರ್ಕಾರಿ ಸೇವೆಗಳ ಕಾರ್ಯವೈಖರಿ, ಸಾರ್ವಜನಿಕರಿಗೆ ದೊರೆಯುತ್ತಿರುವ ಸೇವೆಗಳು ಮತ್ತು ಕಚೇರಿಗಳಲ್ಲಿನ ಆಡಳಿತಾತ್ಮಕ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಲಾಯಿತು.
ಸರ್ಕಾರಿ ಕಚೇರಿಗಳು ಜನಸಾಮಾನ್ಯರಿಗೆ ಸುಲಭವಾಗಿ, ಪಾರದರ್ಶಕವಾಗಿ ಮತ್ತು ನಿಗದಿತ ಸಮಯದಲ್ಲಿ ಸೇವೆ ಒದಗಿಸಬೇಕು. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಯಾವುದೇ ಸರ್ಕಾರಿ ಸೇವೆ ಪಡೆಯಲು ಲಂಚ ನೀಡಬೇಕಾದ ಅನಿವಾರ್ಯತೆ ಇರಬಾರದು ಎಂಬ ಉದ್ದೇಶದಿಂದ ಕೆಆರ್‌ಎಸ್ ಪಕ್ಷವು ಲಂಚಮುಕ್ತ ಅಭಿಯಾನವನ್ನು ನಡೆಸುತ್ತಿದೆ.

ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ, ಅನಗತ್ಯ ವಿಳಂಬ ಅಥವಾ ಲಂಚದ ಬೇಡಿಕೆಯಂತಹ ಸಮಸ್ಯೆಗಳು ಕಂಡುಬಂದಲ್ಲಿ ಸಾರ್ವಜನಿಕರು ಸೂಕ್ತ ದಾಖಲೆ ಹಾಗೂ ಮಾಹಿತಿಯೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು.ಅಧಿಕಾರಿಗಳು ಸಹ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ, ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದು ಪಕ್ಷವು ಒತ್ತಾಯಿಸುತ್ತದೆ.
ಸರ್ಕಾರಿ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು, ಸಾರ್ವಜನಿಕರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸುವುದು ಹಾಗೂ ಭ್ರಷ್ಟಾಚಾರರಹಿತ ಆಡಳಿತಕ್ಕೆ ಉತ್ತೇಜನ ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
“ಲಂಚ ನೀಡುವುದಿಲ್ಲ, ಲಂಚ ಪಡೆಯುವುದಿಲ್ಲ — ಪ್ರಾಮಾಣಿಕ ಆಡಳಿತಕ್ಕಾಗಿ ಜನಜಾಗೃತಿ ಮೂಡಿಸುತ್ತೇವೆ” ಎಂಬ ಆಶಯದೊಂದಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ಲಂಚಮುಕ್ತ ಅಭಿಯಾನವನ್ನು ಮುಂದುವರಿಸಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್ ಸಿ, ಎಸ್ ಟಿ ಘಟಕದ ರಾಜ್ಯಾಧ್ಯಕ್ಷರಾದ ಪಾ.ಯ ಗಣೇಶ್ ,ರಾಜ್ಯ ರೈತ ಘಟಕದ ಕಾರ್ಯದರ್ಶಿಗಳಾದ ಕನಕಪ್ಪ ಉಡೆಜಾಲಿ, ಕೊಪ್ಪಳ ಜಿಲ್ಲಾಧ್ಯಕ್ಷ ಗಣೇಶ ಅಮೃತ್,ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಮೈನುದ್ದೀನ್, ಶಾಮಿದ ಅಲಿ,ಕನಕಗಿರಿ ತಾಲೂಕ ಅಧ್ಯಕ್ಷ ರಾಜೇಶ್ ಚಿನ್ನೂರು, ಉಪಾಧ್ಯಕ್ಷರಾದ ಹನುಮಂತಪ್ಪ ವಾಲೆಕಾರ್ ಸೇರದಂತೆ ಕನಕಗಿರಿ ,ಗಂಗಾವತಿ,ಕುಷ್ಟಗಿ,ಕಾರಟಗಿ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಪಕ್ಷದ ಅನೇಕರು ಭಾಗವಹಿಸಿದ್ದರು.