ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ..

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿ ಯುವಜನರ ಐಕ್ಯ ಹೋರಾಟಕ್ಕೆ ಸಂದ ಜಯ – ಡಿವೈಎಫ್ಐ

ವೀರಮಾರ್ಗ ನ್ಯೂಸ್ : ಹಾವೇರಿ: ನೀಟ್ ಹಗರಣವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಕೊನೆಗೂ ಒಪ್ಪಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದಿರುವುದು ದೇಶದ ಲಕ್ಷಾಂತರ ವಿದ್ಯಾರ್ಥಿ ಯುವಜನರ ಐಕ್ಯ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯವಾಗಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಣ್ಣಿಸಿದ್ದಾರೆ.

ಶನಿವಾರ ಈ ಕುರಿತು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಈ ದಿನವು ಭಾರತದ ಪ್ರಜಾಪ್ರಭುತ್ವದಲ್ಲಿ ಯುವಜನರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ದೇಶದಾದ್ಯಂತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಉತ್ತರದಾಯಿತ್ವವನ್ನು ಒತ್ತಾಯಿಸಿ ಹೋರಾಟ ನಡೆಸಿದ ಹಾಗೂ ಆ ದುರ್ಘಟನೆಗಳಿಂದ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾದ ಪರಿಸ್ಥಿತಿಗೆ ನ್ಯಾಯ ಕೋರಿ ಹೋರಾಡಿದ ದೇಶದ ವಿದ್ಯಾರ್ಥಿ-ಯುವಜನರಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಡಿಎಸ್ಎಸ್, ಡಿಎಚ್ಎಸ್, ಕರ್ನಾಟಕ ರಾಜ್ಯ ರೈತ ಸಂಘ, ಸಿಐಟಿಯು‌, ಬಿಎಸ್ಪಿ, ಕರವೇ, ಸಾಹಿತಿ ಕಲಾವಿದರ ಬಳಗ ಸೇರಿದಂತೆ ಜಿಲ್ಲೆಯ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತವೆ ಎಂದಿದ್ದಾರೆ.

ದೇಶದ ವಿದ್ಯಾರ್ಥಿ-ಯುವಜನರು ಪ್ರದರ್ಶಿಸಿದ ಅಚಲ ಸಂಕಲ್ಪ, ತ್ಯಾಗ ಮತ್ತು ಹೋರಾಟದ ಮನೋಭಾವವಿಲ್ಲದೆ ಈ ಜಯ ಸಾಧ್ಯವಾಗುತ್ತಿರಲಿಲ್ಲ. ವಿವಿಧ ಜನವರ್ಗಗಳ ಬೆಂಬಲದೊಂದಿಗೆ, ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಆಡಳಿತವು ಲಾಠಿಚಾರ್ಜ್ ಸೇರಿದಂತೆ ಹಲವು ದಮನಕಾರಿ ಕ್ರಮಗಳನ್ನು ಕೈಗೊಂಡಾಗಲೂ ಅವರು ಹೋರಾಟದಿಂದ ಹಿಂದೆ ಸರಿಯಲಿಲ್ಲ. ಯುವಜನರು ಪ್ರದರ್ಶಿಸಿದ ಧೈರ್ಯ ಮತ್ತು ದೃಢ ನಿಶ್ಚಯವು ದೇಶದ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಹೊಸ ಆಶಾಭಾವನೆಯನ್ನು ಮೂಡಿಸಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದಷ್ಟೇ ಸಾಕಾಗುವುದಿಲ್ಲ. ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆಗೆ ಮುಖ್ಯ ಹೊಣೆಗಾರಿಕೆಯನ್ನು ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯನ್ನು ವಿಸರ್ಜಿಸಬೇಕು. ನೀಟ್ ಪರೀಕ್ಷೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನಾ ನಿರತ ವಿದ್ಯಾರ್ಥಿ-ಯುವಜನರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು, ಪರೀಕ್ಷಾ ಅಕ್ರಮದಿಂದಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಒಂದು ಕೋಟಿ ಪರಿಹಾರ ಒದಗಿಸುವುದು ಸೇರಿದಂತೆ ಉಳಿದ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ನಮ್ಮ ಹಕ್ಕೊತ್ತಾಯಗಳು ಮುಂದುವರಿಯಲಿವೆ.

ಡಿವೈಎಫ್ಐ ಈ ಹಿಂದೆಯೆ ಇಟ್ಟಿರುವ, ಪರೀಕ್ಷಾ ವ್ಯವಸ್ಥೆಯನ್ನು ವಿಕೇಂದ್ರೀಕರಿಸಬೇಕು ಎಂಬ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸುತ್ತದೆ. ವ್ಯಾಪಾರೀಕರಣ, ಕೇಂದ್ರೀಕರಣ ಮತ್ತು ಕೋಮುವಾದವನ್ನು ತನ್ನ ಮೂಲ ತತ್ವಗಳನ್ನಾಗಿ ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ–2020 ಅನ್ನು ಸಹ ರದ್ದುಗೊಳಿಸಬೇಕು. ಈ ಕ್ರಮಗಳನ್ನು ಕೈಗೊಳ್ಳದಿದ್ದರೆ ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಅನ್ಯಾಯ ಹಾಗೂ ವಂಚನೆಯ ದುಷ್ಟಚಕ್ರ ಮುಂದುವರಿಯುತ್ತಲೇ ಇರುತ್ತದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಯುವಜನರ ಉದ್ಯೋಗ-ಶಿಕ್ಷಣ ಸೇರಿದಂತೆ ಅವರ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದ ಬೇಡಿಕೆಗಳಿಗಾಗಿ ಮುಂದೆಯೂ ವ್ಯಾಪಕ ಹಾಗೂ ಐಕ್ಯ ಜನಾಂದೋಲನಗಳನ್ನು ವಿದ್ಯಾರ್ಥಿ-ಯುವಜನ ಚಳವಳಿಗಳಾದ ಡಿವೈಎಫ್ಐ-ಎಸ್ಎಫ್ಐ, ಡಿಎಸ್ಎಸ್, ಡಿಎಚ್ಎಸ್, ಕರ್ನಾಟಕ ರಾಜ್ಯ ರೈತ ಸಂಘ, ಸಿಐಟಿಯು‌, ಬಿಎಸ್ಪಿ, ಕರವೇ, ಸಾಹಿತಿ ಕಲಾವಿದರ ಬಳಗ ಸೇರಿದಂತೆ ಜಿಲ್ಲೆಯ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ನಡೆಸುತ್ತವೆ ಎಂಬುದನ್ನು ಸರಕಾರಗಳಿಗೆ ಎಚ್ಚರಿಸುತ್ತವೆ.