ಹಳೇ ಪಿಂಚಣಿ(OPS) ಮರು ಜಾರಿಗೆ ಆಗ್ರಹಿಸಿ ಪ್ರತಿಭಟನೆ ಜಾಥಾ
ವೀರಮಾರ್ಗ ನ್ಯೂಸ್ : ಹಾವೇರಿ : ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಹಳೇ ಪಿಂಚಣಿ(OPS) ಮರು ಜಾರಿಗೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಆರ್,ಎಚ್. ಬೆಟ್ಟೇಳ್ಳೇರ ಮಾತನಾಡಿ, ರಾಜ್ಯದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ನಿವೃತ್ತಿಯ ನಂತರ ಆರ್ಥಿಕ ಭದ್ರತೆಯಿಂದ ವಂಚಿತರಾಗಿದ್ದಾರೆ. ನೆಮ್ಮದಿಯ ಬದುಕು ನಡೆಸಲು ಹಳೆಯ ಪಿಂಚಣಿ ಯೋಜನೆ (OPS) ಸೇರಿದಂತೆ, ಯಾವುದೇ ವಿಶೇಷ ಸೌಲಭ್ಯಗಳಿಲ್ಲ. ಪಿಂಚಣಿ ಎಂಬುದು ಸರ್ಕಾರಿ ಸೇವೆ ಸಲ್ಲಿಸಿದ ಪ್ರತಿಯೊಬ್ಬ ನೌಕರನಿಗೂ ದೊರೆಯಬೇಕಾದ ಸಾಮಾಜಿಕ ಭದ್ರತೆ ಹಾಗೂ ನ್ಯಾಯಸಮ್ಮತ ಹಕ್ಕಾಗಿದೆ. ಆದರೆ ನಾವು ಈ ಹಕ್ಕಿನಿಂದ ವಂಚಿತರಾಗಿದ್ದೇವೆ. ಆದ್ದರಿಂದ, ರಾಜ್ಯ ಸರ್ಕಾರವು ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ದಿನಾಂಕ 01-04-2006 ರ ಮೊದಲು ಮತ್ತು ನಂತರ ನೇಮಕಗೊಂಡಿರುವ ಎಲ್ಲಾ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ, ನಿವೃತ್ತಿಯ ನಂತರ ಗೌರವಯುತ ಹಾಗೂ ನೆಮ್ಮದಿಯ ಜೀವನ ನಡೆಸಲು ಅವಕಾಶ ಕಲ್ಪಿಸಬೇಕೆಂದು ಹೇಳಿದರು.
ಜಿಲ್ಲಾ ಗೌರವಾಧ್ಯಕ್ಷ ಎಚ್.ಪಿ. ಬಣಕಾರ ಮಾತನಾಡಿ, ಪ್ರಸ್ತುತ ಅನೇಕ ಅನುದಾನಿತ ಶಾಲಾ ನಿವೃತ್ತ ನೌಕರರು ಕುಟುಂಬ ನಿರ್ವಹಣೆಗಾಗಿ ಕೃಷಿ ಕಾರ್ಮಿಕರಾಗಿ, ಬ್ಯಾಂಕ್ಗಳಲ್ಲಿ ಹೋಂ ಗಾರ್ಡ್ಗಳಾಗಿ ಹಾಗೂ ಬೀದಿ ಬದಿ ವ್ಯಾಪಾರಿಗಳಾಗಿ ಜೀವನ ಸಾಗಿಸಬೇಕಾದ ದುಃಸ್ಥಿತಿಯಲ್ಲಿದ್ದಾರೆ. ಅನುದಾನಿತ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸಹ ಸಮರ್ಪಕವಾಗಿ ಜಾರಿಯಾಗಿಲ್ಲ. ಪರಿಣಾಮವಾಗಿ, ನೌಕರರು ಕೊನೆಯ ತಿಂಗಳ ವೇತನದೊಂದಿಗೆ ಯಾವುದೇ ಸಾಮಾಜಿಕ ಭದ್ರತೆಯಿಲ್ಲದೆ ನಿವೃತ್ತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಪಿಂಚಣಿ ವಂಚಿತ ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ ಮಾತನಾಡಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಒಂದೇ ರೀತಿ ಸೇವೆ ಸಲ್ಲಿಸುತ್ತಿದ್ದರೂ, ಅನುದಾನಿತ ಶಾಲಾ ನೌಕಕರ ವಿಷಯದಲ್ಲಿ ಸರ್ಕಾರ ಮಲತಾಯಿ ಧೋರಣೆ ತಾಳಿದೆ. ಈಗಿನ ಸರ್ಕಾರವು ತನ್ನ ಪ್ರಳಾಣಿಕೆಯಲ್ಲಿ ಘೋಷಿಸಿದಂತೆ, ಕೋಡಲೇ ಹಳೇ ಪಿಂಚಣಿ ಯೋಜನೆ ಜಾರಿ ಮಾಡಬೇಕೆಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಪಿಂಚಣಿಯು ಅತ್ಯಂತ ಜ್ವಲಂತ ಸಮಸ್ಯೆಯಾಗಿದ್ದು, ಸರ್ಕಾರವು ಸಹನುಭೂತಿಯಿಂದ ಈ ಸಮಸ್ಯೆಯನ್ನು ಬಗೆಹರಿಸುತ್ತದೆ ಎಂದರು.
ಹುಕ್ಕೇರಿಮಠದಿಂದ ಪ್ರತಿಭಟನೆ ಜಾಥಾ ಆರಂಭವಾಯಿತು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹರಸೂರು ಬಣ್ಣದಮಠ ಸ್ವಾಮೀಜಿ ಜಾಥಾಕ್ಕೆ ಚಾಲನೆ ನೀಡಿದರು. ಎಂ.ಜಿ ರಸ್ತೆ ಮೂಲಕ ಮೈಲಾರ ಮಹಾದೇವ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎನ್.ಎನ್. ಕುಂದೂರ, ವಿವಿಧ ಸಂಘಟನೆಯ ಎ.ಐ. ಗಚ್ಚಿನಮನಿ, ಮಲ್ಲಿಕಾರ್ಜುನ ಶಾಂತಗಿರಿ, ಮಲ್ಲೇಶ ಕರಿಗಾರ, ನಾಗರಾಜ ಹಲವಾಗಲು, ಬಿ.ಎಂ. ಜಗಾಪುರ, ರಮೇಶ ಎಂ.ಬಿ. ಎಫ್.ಎಚ್. ಮರಡೂರ, ಗೀತಾ ಸುತ್ತಕೋಟಿ, ಜಿ.ಪಿ. ಹೊಸಗೌಡ್ರ, ಮಾಲತೇಶ ಮುದಕಪ್ಪನವರ, ಸುರೇಶ ಕಲ್ಮನಿ ಸೇರಿದಂತೆ ನೂರಾರು ಶಿಕ್ಷಕರು ಭಾಗವಹಿಸಿದ್ದರು.