ಶಾಕಿಂಗ್ ನ್ಯೂಸ್: ಶಾಲೆಯೇ ಆಯಿತು ಯಮಲೋಕ! ದೈಹಿಕ ಶಿಕ್ಷಕನ ರಾಕ್ಷಸೀ ಪೆಟ್ಟಿಗೆ ಆರನೇ ತರಗತಿ ವಿದ್ಯಾರ್ಥಿ ಬಲಿ?
ವೀರಮಾರ್ಗ ನ್ಯೂಸ್ : ಬೆಂಗಳೂರು : ಮಕ್ಕಳು ಚೆನ್ನಾಗಿ ಓದಿ, ದೊಡ್ಡ ಸಾಧನೆ ಮಾಡಲಿ ಎಂದು ಹೆತ್ತವರು ಸಾಲ-ಸೋಲ ಮಾಡಿ ದೊಡ್ಡ ದೊಡ್ಡ ಶಾಲೆಗಳಿಗೆ ಕಳಿಸುತ್ತಾರೆ. ಆದರೆ, ವಿದ್ಯಾ ಬುದ್ಧಿ ಕಲಿಸಬೇಕಾದ ಗುರುಗಳೇ ಯಮಸ್ವರೂಪಿಗಳಾದರೆ ಆ ಹೆತ್ತವರ ಕರುಳು ಏಗಬೇಡವೇ? ಇಂತಹದ್ದೇ ಒಂದು ಮೈ ಜುಂ ಎನಿಸುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಶಾಲಾ ಆವರಣದಲ್ಲೇ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಪ್ರಾಣ ಕಳೆದುಕೊಂಡಿದ್ದಾನೆ!
ಬೆಂಗಳೂರು ಉತ್ತರ ತಾಲೂಕಿನ ಕಾಡಯರಪ್ಪನಹಳ್ಳಿಯ ‘ಸ್ಟರ್ಲಿಂಗ್ ಇಂಗ್ಲೀಷ್ ವಸತಿ ಶಾಲೆ’ಯಲ್ಲಿ 6ನೇ ತರಗತಿ ಓದುತ್ತಿದ್ದ ಗುರು ಕಿರಣ್ ಎಂಬ ಮುಗ್ಧ ಬಾಲಕನೇ ಮೃತಪಟ್ಟ ದುರ್ದೈವಿ. ದೈಹಿಕ ಶಿಕ್ಷಕ (PT Teacher) ನಾರಾಯಣ್ ಮಾಡಿದ ಭೀಕರ ಹಲ್ಲೆಯೇ ಮಗುವಿನ ಸಾವಿಗೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶೌಚಾಲಯಕ್ಕೆ ಹೋಗಿದ್ದೇ ಮಹಾ ಅಪರಾಧವಾಯಿತೇ? ಘಟನೆ ಬಿಚ್ಚಿಟ್ಟ ಸಹಪಾಠಿ!
ಮೃತ ಗುರುಕಿರಣ್ ಜೊತೆಯಲ್ಲೇ ಓದುತ್ತಿದ್ದ ಸಹಪಾಠಿಯೊಬ್ಬ ಶಾಲೆಯಲ್ಲಿ ನಡೆದ ಆ ದಾರುಣ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ:
“ಬೆಳಗ್ಗೆ 5 ಗಂಟೆಗೆ ಎಲ್ಲರೂ ಎದ್ದಿದ್ದೆವು. ಗ್ರೌಂಡ್‌ಗೆ ಬರುವ ಮುನ್ನ ಗುರು ಕಿರಣ್ ಶೌಚಾಲಯಕ್ಕೆ ಹೋಗಿದ್ದ. ಇದೇ ಕಾರಣಕ್ಕೆ ಕೋಪಗೊಂಡ ಪಿಟಿ ಮಾಸ್ಟರ್ ನಾರಾಯಣ್, ಅವನ ಕುತ್ತಿಗೆಯನ್ನು ಬಗ್ಗಿಸಿ ಮನಬಂದಂತೆ ಹೊಡೆದರು. ಅಷ್ಟಕ್ಕೇ ಬಿಡದೇ, ಗ್ರೌಂಡ್‌ನಲ್ಲಿ ಎರಡು ರೌಂಡ್ ಓಡುವಂತೆ ಶಿಕ್ಷೆ ನೀಡಿದರು. ಓಡುತ್ತಿದ್ದಂತೆಯೇ ಗುರುಕಿರಣ್ ತಲೆತಿರುಗಿ ಅಲ್ಲಿಯೇ ಕುಸಿದು ಬಿದ್ದ!”
— ಶಾಲೆಯ ವಿದ್ಯಾರ್ಥಿ.
ರೂಂನಲ್ಲಿ ಕೂಡಿ ಹಾಕಿ ರಾಡ್, ಬಿದಿರಿನಿಂದ ಟಾರ್ಚರ್!
ಅಷ್ಟೇ ಅಲ್ಲದೆ, ಈ ಶಾಲೆಯಲ್ಲಿ ಸಣ್ಣ ವಿಚಾರಕ್ಕೂ ಮಕ್ಕಳನ್ನು ರೂಂನಲ್ಲಿ ಕೂಡಿ ಹಾಕಿ ಕಬ್ಬಿಣದ ರಾಡ್ ಹಾಗೂ ಬಿದಿರಿನ ಕೋಲುಗಳಿಂದ ದೈಹಿಕ ಶಿಕ್ಷಕರು ಕ್ರೂರವಾಗಿ ಹೊಡೆಯುತ್ತಾರೆ. ಶಾಲೆಯ ಹಾಸ್ಟೆಲ್ ಊಟದಲ್ಲೂ ಕಲ್ಲು, ಕೂದಲು ಸಿಗುತ್ತದೆ ಎಂದು ವಿದ್ಯಾರ್ಥಿಗಳು ಶಾಲಾ ಮ್ಯಾನೇಜ್‌ಮೆಂಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷಕನಿಗೆ ಪೆಟ್ರೋಲ್ ಸುರಿದು ಸುಡಲು ಯತ್ನ: ಸ್ಥಳದಲ್ಲಿ ಉದ್ವಿಗ್ನತೆ!
ಮಗನಿಗೆ ಹುಷಾರಿಲ್ಲ ಎಂದು ಆಸ್ಪತ್ರೆಗೆ ಸೇರಿಸಿರುವುದಾಗಿ ಶಾಲೆ ಕಡೆಯಿಂದ ಪೋಷಕರಿಗೆ ಕರೆ ಹೋಗಿತ್ತು. ಆದರೆ ಹೆತ್ತವರು ಆಸ್ಪತ್ರೆಗೆ ಓಡಿ ಬರುವಷ್ಟರಲ್ಲೇ ಮಗ ಹೆಣವಾಗಿದ್ದ! ಸಹಪಾಠಿಗಳಿಂದ ಸತ್ಯ ತಿಳಿಯುತ್ತಿದ್ದಂತೆ ಆಕ್ರೋಶದ ಜ್ವಾಲೆಯಾಗಿ ಉರಿದ ಪೋಷಕರು ಮತ್ತು ಸಾರ್ವಜನಿಕರು ಶಾಲೆಯ ಎದುರು ಜಮಾಯಿಸಿದ್ದಾರೆ. ಆರೋಪಿ ಶಿಕ್ಷಕ ನಾರಾಯಣ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಲ್ಲದೆ, ಆತನಿಗೆ ಪೆಟ್ರೋಲ್ ಸುರಿದು ಸುಟ್ಟು ಹಾಕಲು ಮುಂದಾಗಿದ್ದಾರೆ. ಸದ್ಯ ಸ್ಥಳದಲ್ಲಿ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ನಿಮ್ಮ ಅಭಿಪ್ರಾಯ ತಿಳಿಸಿ: ಪಾಠ ಕಲಿಸಬೇಕಾದ ಶಿಕ್ಷಕರೇ ಈ ರೀತಿ ರಾಕ್ಷಸರಾದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ? ಈ ಕ್ರೂರ ಶಿಕ್ಷಕನಿಗೆ ಎಂತಹ ಶಿಕ್ಷೆಯಾಗಬೇಕು?
ವರದಿ : ಚನ್ನೇಶ್ ಕೆ ಎಂ
ಬೆಂಗಳೂರು1