ಮಲಗಿದ್ದ ಮಹಿಳೆಯೊಬ್ಬಳ ಕತ್ತು ಸೀಳಿ ಬರ್ಬರ ಹತ್ಯೆ.

ವೀರಮಾರ್ಗ ನ್ಯೂಸ್ : ಮನೆಯಲ್ಲಿ ಮಲಗಿದ್ದ ವಿವಾಹಿತ ಮಹಿಳೆಯೊಬ್ಬಳ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ಬಡಾವಣೆಯಲ್ಲಿ ನಡೆದಿದೆ. ದುಷ್ಕರ್ಮಿಗಳು ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರದೊಂದಿಗೆ ಪರಾರಿಯಾಗಿದ್ದಾರೆ. ಮೇಲ್ನೋಟಕ್ಕೆ ಇದು ಸರಗಳ್ಳತನಕ್ಕಾಗಿ ನಡೆದ ಕೊಲೆ ಎಂದು ಬಿಂಬಿತವಾಗುತ್ತಿದ್ದರೂ, ಮೃತಳ ಪೋಷಕರು ಮಾತ್ರ ಇದು ಗಂಡನ ಮನೆಯವರೇ ಸ್ಕೆಚ್ ಹಾಕಿ ಮಾಡಿಸಿರುವ ‘ವ್ಯವಸ್ಥಿತ ಸುಪಾರಿ ಕೊಲೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಧ್ಯರಾತ್ರಿ ನಡೆದಿದ್ದೇನು? ಒಳನುಗ್ಗಿದ ದರೋಡೆಕೋರರು!
ಸ್ಥಳೀಯ ಮೇಸ್ತ್ರಿ ನರಸಿಂಹಮೂರ್ತಿ ಎಂಬುವರ ಮನೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಹತ್ಯೆಯಾದ ದುರ್ದೈವಿಯನ್ನು ಪುಷ್ಪಲತಾ ಎಂದು ಗುರುತಿಸಲಾಗಿದೆ. ಘಟನೆ ನಡೆದ ರಾತ್ರಿ ಗಂಡ ಭರತ್ ಹಾಗೂ ಕುಟುಂಬಸ್ಥರು ಕೇರಳದ ದೇವಸ್ಥಾನಕ್ಕೆ ತೆರಳಿದ್ದರು. ಮನೆಯಲ್ಲಿ ಪುಷ್ಪಲತಾ, ಆಕೆಯ ನಾದಿನಿ ಭವ್ಯ ಹಾಗೂ ಇಬ್ಬರು ಮಕ್ಕಳಿದ್ದರು. ಮಧ್ಯರಾತ್ರಿ ಮನೆಗೆ ನುಗ್ಗಿದ ದರೋಡೆಕೋರರು, ಕೋಣೆಯಲ್ಲಿ ಮಲಗಿದ್ದ ಪುಷ್ಪಲತಾಳ ಕತ್ತು ಸೀಳಿ ಕೊಲೆ ಮಾಡಿ, ಮಾಂಗಲ್ಯ ಸರ ದೋಚಿದ್ದಾರೆ. ಇದೇ ವೇಳೆ ಪಕ್ಕದಲ್ಲೇ ಮಲಗಿದ್ದ ನಾದಿನಿ ಭವ್ಯಳ ಬಾಯಿಗೆ ಬಟ್ಟೆ ತುರುಕಿ, ಪ್ರಜ್ಞೆ ತಪ್ಪಿಸಲು ಕೆಮಿಕಲ್ ಸ್ಪ್ರೇ ಮಾಡಿದ್ದಾರೆ. ತಡರಾತ್ರಿ ಮನೆಯಲ್ಲಿದ್ದ ಅಜ್ಜಿಯೊಬ್ಬರು ಎಚ್ಚರಗೊಂಡು ಕೋಣೆಗೆ ಬಂದಾಗ ಈ ಭೀಕರ ಕೃತ್ಯ ಬೆಳಕಿಗೆ ಬಂದಿದೆ.

ಕಣ್ಣೀರು ಹಾಕುತ್ತಾ ಗಂಭೀರ ಆರೋಪ ಮಾಡಿದ ತಾಯಿ!
ಮೃತ ಪುಷ್ಪಲತಾ ಬೆಂಗಳೂರಿನ ಚುಂಚಘಟ್ಟದ ಮಹೇಶ್ ಮತ್ತು ಲಕ್ಷ್ಮೀ ದಂಪತಿಯ ಒಬ್ಬಳೇ ಮಗಳು. ನಾಲ್ಕು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಭರತ್ ಜೊತೆ ಈಕೆಯ ಮದುವೆಯಾಗಿತ್ತು. ಆದರೆ ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ಸಂಸಾರದಲ್ಲಿ ಕಲಹ ಶುರುವಾಗಿತ್ತು.

ಇದು ದರೋಡೆಗಾಗಿ ನಡೆದ ಕೊಲೆಯಲ್ಲ. ನನ್ನ ಮಗಳನ್ನು ಗಂಡನ ಮನೆಯವರೇ ಸುಪಾರಿ ಕೊಟ್ಟು ಮುಗಿಸಿದ್ದಾರೆ!”

ಲಕ್ಷ್ಮೀ (ಮೃತಳ ತಾಯಿ)
ಗಂಡ ಭರತ್ ಎರಡನೇ ಮದುವೆಗೆ ಸಿದ್ಧನಾಗುತ್ತಿದ್ದ ವಿಷಯ ತಿಳಿದು ಪುಷ್ಪಲತಾ ಈ ಹಿಂದೆ ಆತ್ಮಹತ್ಯೆಗೂ ಯತ್ನಿಸಿದ್ದರು. ಬಳಿಕ ಕೊಣನಕುಂಟೆ ಪೊಲೀಸರು ಇರಡೂ ಕುಟುಂಬಸ್ಥರನ್ನು ಕರೆಸಿ ರಾಜಿ ಸಂಧಾನ ಮಾಡಿ ಪುಷ್ಪಲತಾಳನ್ನು ಗಂಡನ ಮನೆಗೆ ಕಳುಹಿಸಿದ್ದರು. ಇದೀಗ ಸಂಧಾನ ನಡೆದು ಬಂದ ಕೆಲವೇ ದಿನಗಳಲ್ಲಿ ಆಕೆ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆರೋಪ ತಳ್ಳಿಹಾಕಿದ ಅತ್ತೆ ವಿಜಯಲಕ್ಷ್ಮಿ
ಇತ್ತ ಸೊಸೆಯ ಕಡೆಯವರ ಆರೋಪವನ್ನು ಅತ್ತೆ ವಿಜಯಲಕ್ಷ್ಮಿ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ಮದುವೆಯ ಎಲ್ಲಾ ಖರ್ಚನ್ನು ನಾವೇ ಭರಿಸಿ ಮದುವೆ ಮಾಡಿಕೊಂಡಿದ್ದೆವು. ಗಂಡ-ಹೆಂಡತಿ ನಡುವಿನ ಭಿನ್ನಾಭಿಪ್ರಾಯದ ನಂತರ ಅವರಿಗಾಗಿಯೇ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದೆವು. ಹಾಗಿರುವಾಗ ನಾವು ಆಕೆಗೆ ಕಿರುಕುಳ ನೀಡಲು ಹೇಗೆ ಸಾಧ್ಯ? ಅವರು ಮನಸ್ಸಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ತಮಗೂ ಈ ಕೊಲೆಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ಅಧಿಕಾರಿಗಳು ಸಾಕ್ಷ್ಯ ಕಲೆಹಾಕುತ್ತಿದ್ದಾರೆ. ಇದು ಕೇವಲ ಚಿನ್ನದ ಸರಕ್ಕಾಗಿ ನಡೆದ ಕೊಲೆಯೋ ಅಥವಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಸುಪಾರಿ ಹತ್ಯೆಯೋ ಎಂಬ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

ವೃದ್ಧ ತಾಯಿಯ ಪೆನ್ಷನ್ ಹಾಗೂ ಗೃಹಲಕ್ಷ್ಮೀ ಹಣ ಕಸಿದ ಮಗ : ತವರು ಮನೆಯ ಆಸ್ತಿ ತರುವಂತೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹಾಕಿ…!?

ಬೆಳಗಾವಿ : ವಯೋವೃದ್ಧ ತಾಯಿಯ ಪೆನ್ಷನ್ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನು ವಂಚನೆಯ ಮೂಲಕ ಪಡೆದು, ತವರು ಮನೆಯ ಆಸ್ತಿಯಲ್ಲಿ ಪಾಲು ತರುವಂತೆ ಒತ್ತಡ ಹೇರಿ ಮನೆಯಿಂದ ಹೊರಹಾಕಿದ ಆರೋಪ ಮಗನ ವಿರುದ್ಧ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಾಡಲಗಿ ಗ್ರಾಮದ 78 ವರ್ಷದ ಸತ್ಯವ್ವ ಖಾಂಡೆಕರ ಅವರು ತಮ್ಮ ಮಗ ಹಾಲಪ್ಪಾ ಖಾಂಡೆಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತವರು ಮನೆಯ ಆಸ್ತಿಯಲ್ಲಿ ಪಾಲು ತಂದುಕೊಡುವಂತೆ ಒತ್ತಾಯಿಸಿದ ಪುತ್ರ, ಅದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾನೆ ಎಂದು ವೃದ್ಧೆ ಅಳಲು ತೋಡಿಕೊಂಡಿದ್ದಾರೆ. ಇದರ ಜೊತೆಗೆ, ಸತ್ಯವ್ವ ಅವರಿಗೆ ಸರ್ಕಾರದಿಂದ ದೊರೆಯುತ್ತಿದ್ದ ಪೆನ್ಷನ್ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನೂ ವಂಚನೆಯ ಮೂಲಕ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಮತ್ತೊಬ್ಬ ಮಹಿಳೆಯ ಹೆಬ್ಬೆಟ್ಟು ಬಳಸಿಕೊಂಡು ಡ್ರಾ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕುಟುಂಬದ ಮೂಲಗಳು ಒತ್ತಾಯಿಸಿವೆ. ಪ್ರಸ್ತುತ ಸತ್ಯವ್ವ ಅವರು ತಮ್ಮ ತವರು ಮನೆ ಇರುವ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದ ವಡೆರ್ ತೋಟದಲ್ಲಿ ಆಶ್ರಯ ಪಡೆದು ಜೀವನ ಸಾಗಿಸುತ್ತಿದ್ದು, ಮಗನ ವರ್ತನೆಯಿಂದ ತೀವ್ರ ಮಾನಸಿಕ ಹಾಗೂ ದೈಹಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ವೃದ್ಧಾಪ್ಯದಲ್ಲಿ ಆಸರೆಯಾಗಬೇಕಿದ್ದ ಮಗನೇ ಆಸ್ತಿ ಮತ್ತು ಹಣದ ಆಸೆಗೆ ತಾಯಿಯನ್ನು ನಿರ್ಲಕ್ಷಿಸಿರುವ ಆರೋಪ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮೇಕಳಿ ಶಾಖೆಯ ಮೇಲಧಿಕಾರಿಗಳು ಪರಿಶೀಲನೆ ನಡೆಸಿ, ಹಣಕಾಸು ವಂಚನೆ ನಡೆದಿರುವುದು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ: ಚನ್ನೇಶ್ ಕೆ ಎಂ ಬೆಂಗಳೂರು.