ಎಲ್ಲಿದೆ ಅಸ್ಪೃಶ್ಯತೆ,,,?
ಜಾತಿ ನಿಂದನೆಗೆ ಶಿಕ್ಷೆಯಾಗಲಿ, ಆದರೆ ಅಮಾಯಕರ ಶಿಕ್ಷಿಸುವ ಅಸ್ತ್ರವಾಗದಿರಲಿ…
ನಾವೀಗ 2026ರ ಕಾಲಘಟ್ಟದಲ್ಲಿದ್ದೇವೆ. ಸುಮಾರು ವರ್ಷಗಳ ಹಿಂದೆ ಇದ್ದ ಅಸ್ಪೃಶ್ಯತೆ ಬಹುತೇಕ ಇಲ್ಲವಾಗಿದೆ. ಕಾನೂನು ಕಟ್ಟಳೆಗಳು ಇಂಥ ಪ್ರಕರಣಗಳಿಗೆ ಕಠಿಣ ಶಿಕ್ಷೆ ನೀಡುವುದರಿಂದ ಜಾತಿ ನಿಂದನೆ ಮಾಡುವ ಪ್ರಕರಣಗಳು ಕಡಿಮೆಯೇ ಎನ್ನಬಹುದು. ಆದರೆ ಈ ಜಾತಿ ನಿಂದನೆ ಮತ್ತು ಅಸ್ಪೃಶ್ಯತೆ ಎನ್ನುವುದು ಕೆಲವರ, ಕೆಲವು ಸಂಘಟನೆಗಳ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ಮಾತ್ರ ಸುಳ್ಳಲ್ಲ. ಇಂಥ ಕೆಲ ಪ್ರಕರಣಗಳಲ್ಲಿ ಅಮಾಯಕರು ಮಾನಕ್ಕೆ ಅಂಜಿ ಪ್ರಾಣ ಕಳೆದುಕೊಂಡ ನಿದರ್ಶನಗಳೂ ಇವೆ. ಮೊದಲು ಇದು ಗ್ರಾಮೀಣ ಪರಿಸರದಲ್ಲಿ ಹೆಚ್ಚಾಗಿ ಕಾಣುತ್ತಿತ್ತು. ಈಗ ನಗರಪ್ರದೇಶ, ಅದರಲ್ಲೂ ಸರಕಾರಿ ಕಚೇರಿಗಳಿಗೂ ಕಾಲಿಟ್ಟಿರುವುದು ದುರಂತವೇ ಸರಿ.
ಸಮುದಾಯವೊಂದರ ಮಹಿಳೆಯೊಬ್ಬರು ಹಣ್ಣು ಮಾರಾಟದ ಉದ್ಯೋಗದಲ್ಲಿದ್ದಳು. ಅದು ಸಣ್ಣ ಸಮುದಾಯವಾಗಿದ್ದರೂ ಕಾನೂನಿನ ದೊಡ್ಡ ಬಲ ಹೊಂದಿರುವ ಸಮುದಾಯ. ಹಾಗಾಗಿ ಆ ಮಹಿಳೆ ಗ್ರಾಹಕರೊಂದಿಗೆ ಒರಟಾಗಿಯೇ ವರ್ತಿಸುತ್ತಿದ್ದಳು. ಅಂಗಡಿ ಬಳಿ ಬಂದವರು ಆಕೆ ಹೇಳಿದ ದರಕ್ಕೆ ಹಣ್ಣು ಖರೀದಿಸಿಯೇ ಹೋಗಬೇಕು ಎಂದು ಸದಾ ಬಯಸುತ್ತಿದ್ದಳು. ಸರಕಾರದ ಸಣ್ಣ ನೌಕರಿ ಮಾಡುವ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಆಕೆಯ ಅಂಗಡಿಗೆ ಹೋದ. ಹಣ್ಣಿನ ದರ ಹೆಚ್ಚೆನೆಸಿದ್ದಕ್ಕೆ ಬೇರೊಂದು ಅಂಗಡಿಗೆ ಹೊರಟು ನಿಂತ. ಆ ಮಹಿಳೆಯ ಬಾಯಿ ಜೋರಾಯಿತು. ಅವನು ಮೆಲುದನಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿದ. ಆ ಮಹಿಳೆಗೆ ಇಷ್ಟು ಸಾಕಿತ್ತು, ತೀರಾ ಆವಾಚ್ಯ ಪದಗಳಿಂದ ಆ ವ್ಯಕ್ತಿಯನ್ನು ನಿಂದಿಸಿದ್ದಲ್ಲದೇ ನನ್ನ ಜಾತಿಯನ್ನೇ ತೆಗಳುತ್ತಿಯಾ ಎಂದು ಸುಳ್ಳು ತಗಾದೆ ತೆಗೆಯುತ್ತಿದ್ದಂತೆ ಜನ ಸೇರಿದರು. ಭೀತಿಗೊಳಗಾದ ವ್ಯಕ್ತಿ, ಸಮಜಾಯಿಷಿ ನೀಡಲು ಮುಂದಾಗುತ್ತಿದ್ದಂತೆ ನೆರೆದವರು ಧರ್ಮದೇಟು ನೀಡಿ ಬಿಟ್ಟರು.
ವಿಷಯ ಪಸರಿಸುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಯವರು ಜಗಳ ಬಿಡಿಸಲು ಮುಂದಾಗಿ ಆತನನ್ನು ಹೋಗುವಂತೆ ಹೇಳಿದ್ದೇ ತಡ, ಆ ಮಹಿಳೆಯ ಕೆಂಗಣ್ಣು ಜಗಳ ಬಿಡಿಸಲು ಬಂದವರ ಮೇಲೆ ಬಿತ್ತು. ನನ್ನ ವ್ಯಾಪಾರ ಹಾಳು ಮಾಡಲೆಂದೇ ಬಂದವರು ನೀವು ಎಂದು ಹೊಸ ತಗಾದೆ ತೆಗೆಯುತ್ತಿದ್ದಂತೆ ಮಹಿಳೆಯ ತಪ್ಪನ್ನು ವಿನಯಪೂರ್ವಕವಾಗಿ ತಿಳಿಸಿದರೂ ವ್ಯಕ್ತಿಯ ಪರ ನಿಂತ ಸುತ್ತಲಿನ ವ್ಯಾಪಾರಸ್ಥರ ಜಾತಿ ಮೇಲೆ ಮೊದಲು ತೆಗಳಿ, ಪುನಃ ಅವರ ವಿರುದ್ಧವೂ ನನ್ನ ಜಾತಿ ಬೈದರೆಂದು ರಾದ್ಧಾಂತ ಸೃಷ್ಟಿಸಿದಳು. ಅಷ್ಟೊತ್ತಿಗೆ ಅವಳ ಮಗ ಬಂದವನೇ ಪಕ್ಕದ ಅಂಗಡಿಯವನಿಗೆ ಕಪಾಳಮೋಕ್ಷ ಮಾಡಿದ. ಕೆರಳಿದ ಪಕ್ಕದ ಅಂಗಡಿಕಾರ ತಿರುಗಿ ಕಪಾಳಕ್ಕೆ ಕೈ ಮಾಡುತ್ತಿದ್ದಂತೆ ಜಗಳ ಮೂಲ ಹಾದಿ ಬಿಟ್ಟು ಬೇರೊಂದು ಮಗ್ಗುಲಿಗೆ ಹೊರಳಿತು. ಅಷ್ಟರಲ್ಲಿ ಕೆಲ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಬಂದು ಮಹಿಳೆ ಮತ್ತು ಮಹಿಳೆಯ ಮಗನಿಗೆ ಬೆಂಬಲ ಸೂಚಿಸಿದ್ದರಲ್ಲದೇ ಅಕ್ಷರಶಃ ಗೂಂಡಾ ವರ್ತನೆ ತೋರಿದರು. ಅವರದ್ದೇ ಸಮುದಾಯದ ವಕೀಲನೊಬ್ಬ ಬಂದು ಜಗಳವನ್ನು ನೇರವಾಗಿ ಪೊಲೀಸ್ ಠಾಣೆಗೆ ರವಾನಿಸಿಬಿಟ್ಟ.
ಠಾಣೆಗೆ ಹೋದ ಮೇಲೆ ಸುಮಾರು ಒಂದೆರಡು ಗಂಟೆಗಳ ಬಳಿಕ ಆಕ್ರೋಶ ತಣ್ಣಗಾಗಿತ್ತು. ಆದರೆ ಅವರಲ್ಲಿದ್ದ ಆಸೆಯೇ ಬೇರೆ. ಘಟನೆ ಕುರಿತು ಕೇಸ್ ಮಾಡಬಾರದೆಂದರೆ ಲಕ್ಷ ರೂಪಾಯಿ ನೀಡುವಂತೆ ಪಕ್ಕದ ಅಂಗಡಿಯ ವ್ಯಾಪಾರಿಗೆ ಬೇಡಿಕೆ ಇಟ್ಟರು. ಅಮಾಯಕನಾಗಿದ್ದ ಅವನು ಜಗಳ ಬಿಡಿಸಲು ಬಂದ ನನಗೆ ಹೀಗೆ ಬೇಡಿಕೆ ಇಟ್ಟರೆ ಹೇಗೆ? ಎಂದು ಅಲವತ್ತುಕೊಂಡರೂ ಆ ಗ್ಯಾಂಗ್ ಬೇಡಿಕೆಯಿಂದ ಹಿಂಜರಿಯಲಿಲ್ಲ. ದಿನಕ್ಕೆ ನೂರಾರು ರೂಪಾಯಿ ದುಡಿಯುವ ಆ ವ್ಯಾಪಾರಿಗೆ ಲಕ್ಷ ರೂಪಾಯಿ ಬರುವುದಾದರೂ ಎಲ್ಲಿಂದ? “ಏನಾದರೂ ಮಾಡಿಕೊಳ್ಳಿ, ದೇವರಿದ್ದಾನೆ” ಎಂದು ಸುಮ್ಮನಾಗಿಬಿಟ್ಟ.
ಮಹಿಳೆಯ ಬೆಂಬಲಕ್ಕೆ ಬಂದಿದ್ದ ವಕೀಲ ಹಾಗೂ ಇತರರು ಜಾತಿ ನಿಂದನೆ ಪ್ರಕರಣವನ್ನು ಅಮಾಯಕವ ವಿರುದ್ಧ ದಾಖಲಿಸಿಬಿಟ್ಟರು. ಆ ಸಣ್ಣ ವ್ಯಾಪಾರಸ್ಥ ನ್ಯಾಯಾಂಗ ಬಂಧನಕ್ಕೊಳಗಾದ. ಆತನ ಮನೆಯವರು ಬೇರೊಬ್ಬ ವಕೀಲರಿಂದ ನಿರೀಕ್ಷಣಾ ಜಾಮೀನು ಪಡೆದರು. ಆ ವ್ಯಾಪಾರಿ ಊರು ಬಿಟ್ಟು ಹೋದರೂ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ. ಇದು ಈಚೆಗೆ ರಾಜ್ಯದಲ್ಲಿ ನಡೆದ ಘಟನೆಯೊಂದರ ಉದಾಹರಣೆಯಷ್ಟೇ. ಆ ಅಮಾಯಕ ವ್ಯಾಪಾರಿ ಊರು ಬಿಟ್ಟು, ಪ್ರಕರಣವನ್ನು ಎದುರಿಸುತ್ತಿದ್ದಾನೆ. ಕೆಲ ಅಮಾಯಕರಿಗೆ ಇಂಥ ಪರಿಸ್ಥಿತಿ ಬಂದಿದ್ದರೆ ಮಾನಕ್ಕೆ ಹೆದರಿ ಪ್ರಾಣವನ್ನೇ ಬಿಟ್ಟ ಪ್ರಸಂಗಗಳು ಇವೆ.
ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆದು ತೀರ್ಪು ಅಮಾಯಕನ ಪರ ಬರುವ ಹೊತ್ತಿಗೆ ಉರುಳಿದ ವರ್ಷಗಳು, ಕಳೆದುಕೊಂಡ ನೆಮ್ಮದಿಯನ್ನು ವಾಪಾಸ್ ಕೊಡುವುದು ಸುಲಭಸಾಧ್ಯವಲ್ಲ. ಒಂದೊಮ್ಮೆ ತೀರ್ಪು ಆ ಮಹಿಳೆ ಮತ್ತು ಮಗನ ಪರ ಬಂದರೆ ಅಮಾಯಕ ಇದ್ದೂ ಸತ್ತಂತೆ. ಜೊತೆಗೆ ಸಣ್ಣ ಸಮುದಾಯದ ಮಹಿಳೆಗೆ ಗೆದ್ದ ಖುಷಿ ಒಂದೆಡೆಯಾದರೆ ಜಾತಿ ನಿಂದನೆ ಪ್ರಕರಣ ನಡೆಸುವುದಕ್ಕಾಗಿಯೇ ಸರಕಾರದ ಇಲಾಖೆ ಸುಮಾರು 75 ಸಾವಿರ ರೂಪಾಯಿ ಸಹಾಯಧನ ನೀಡುತ್ತದೆ.
ಈಚೆಗೆ ಸರಕಾರದ ಇಲಾಖೆಯೊಂದರಲ್ಲಿ ಕೆಲಸ ಮಾಡುವ ಸಣ್ಣ ಸಮುದಾಯದ ಮಹಿಳೆಯೊಬ್ಬರು ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಅಸ್ಪೃಶ್ಯತೆ ಹಾಗೂ ಜಾತಿ ನಿಂದನೆ ಆರೋಪ ಮಾಡಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ ಕೆಲ ಸಮುದಾಯದ ರಕ್ಷಣೆಗೆ ಕಾನೂನು ನೀಡಿದ ಬಲವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಅಮಾಯಕರ ವಿರುದ್ಧ ಸಮರ ಸಾರುವುದು ಸರಿಯೂ ಅಲ್ಲ, ಇದಕ್ಕೆಲ್ಲ ಕಾರಣ ಸರಕಾರದ ಸಹಾಯ ಧನ. ಸರಕಾರ ಮೊದಲು ಇದಕ್ಕೆ ಕಡಿವಾಣ ಹಾಕುವಂತಾಗಲಿ. ಜಾತಿ ನಿಂದನೆ ಪ್ರಕರಣಗಳಲ್ಲಿ ಶೇಕಡಾ 70ಕ್ಕೂ ಅಧಿಕ ಪ್ರಕರಣಗಳು ಖೊಟ್ಟಿ ಎಂದು ಸಾಬೀತಾದ ಉದಾಹರಣೆಗಳು ಇವೆ. ಸುಳ್ಳು ಪ್ರಕರಣ ದಾಖಲಿಸಲು ಸಾವಿರ ಸಲ ಯೋಚಿಸುವಂಥ ಕಾನೂನು ಕಟ್ಟಳೆಗಳು ಜಾರಿ ಬಂದರೆ ವೈಯಕ್ತಿಕ ದ್ವೇಷವೂ ಜಾತಿಯ ಸುತ್ತ ಗಿರಕಿ ಹೊಡೆಯುವುದು ನಿಲ್ಲುತ್ತದೆ. ಇಲ್ಲದಿದ್ದರೆ ಅಮಾಯಕರು ಬಲಿ ಮುಂದುವರಿಯುತ್ತಲೇ ಇರುತ್ತದೆ
ಸಮಾಜ ಸುಧಾರಕರಾದ ಬಾಬಾಸಾಹೇಬ್ ಅಂಬೇಡ್ಕರ್, ಬುದ್ಧ, ಬಸವಣ್ಣ ಸೇರಿದಂತೆ ಹಲವು ದಾರ್ಶನಿಕರು ಇಂದು ಒಂದೊಂದು ಜಾತಿ/ ಸಮುದಾಯಕ್ಕೆ ಸೀಮಿತವಾದಂತೆ ಭಾಸವಾಗಿರುವುದು ಶೋಚನೀಯ ಸಂಗತಿ. ಆ ದಾಶರ್ನಿಕರ ಸನ್ಮಾರ್ಗದ ಹಾದಿಯಲ್ಲಿ ಮನುಜಪಥ ಸೃಷ್ಟಿಯಾಗಬೇಕಿದೆ. ದೇಶದೊಳಗಿರುವ ನಾವೆಲ್ಲ ಗಡಿಯಾಚೆಗಿನ ವೈರಿಗಳನ್ನು ಹೊಡೆದುರುಳಿಸಬೇಕೇ ಹೊರತು ನಾವು ನಾವು ಕಚ್ಚಾಡಿಕೊಂಡು ದೇಶವನ್ನು ಅಶಾಂತಿಯ ಗೂಡಾಗುವಂತೆ ಮಾಡಬಾರದು.
ಬರಹ : ರಾಜ ಮಾರ್ಗ-55
-ಬಸವರಾಜ ಕರುಗಲ್, ಹಿರಿಯ ಪತ್ರಕರ್ತರು, ಕೊಪ್ಪಳ
ಮೊಬೈಲ್-9380605892