ಸಮರ್ಥ್ ಗೆ ಮುತ್ತಿಟ್ಟು ಜಮೀರ್ ಹೇಳಿದ್ದೇನು..?

ವೀರಮಾರ್ಗ ನ್ಯೂಸ್ : ದಾವಣಗೆರೆ : ಉಪ ಕದನ ರಂಗು ಪಡೆಯುತ್ತಿದ್ದು ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಿಂದ ಮುನಿಸಿಕೊಂಡಿದ್ದ ಸಚಿವ ಜಮೀ‌ರ್ ಅಹಮ್ಮದ್ ಖಾನ್ ಕೊನೆಗೆ ದಾವಣಗೆರೆ ಪ್ರಚಾರ ಅಖಾಡಕ್ಕೆ ಇಳಿದಿದ್ದಾರೆ.

ಈ ವೇಳೆ ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದು ಅಸಮಾಧಾನ ಹೊಂದಿದ್ದ ಜಮೀರ್ ಕೊನೆಗೂ ಮುನಿಸು ಮರೆತು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಕೇಳಿಕೊಂಡಿದ್ದಾರೆ.
ಈ ವೇಳೆ ಸಚಿವ ಮಲ್ಲಿಕಾರ್ಜುನ ಪುತ್ರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್ ಅವರಿಗೆ ಮುತ್ತು ಕೊಡುವ ಮೂಲಕ ಜಮೀರ್ ಗೆಲುವಿಗೆ ಹರಿಸಿದ್ದಾರೆ.

ದಾವಣಗೆರೆ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಬೆಂಬಲಿಗರಿಗೆ ಅಥವಾ ತಮ್ಮ ಆಪ್ತರಿಗೆ ಟಿಕೆಟ್ ಸಿಗದ ಕಾರಣ ಜಮೀರ್ ಅಹಮದ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿತ್ತು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದಾವಣಗೆರೆ ಟಿಕೆಟ್ ವಿಚಾರದಲ್ಲಿ ನಾನು ಯಾವತ್ತೂ ಮುನಿಸಿಕೊಂಡಿರಲಿಲ್ಲ. ಪಕ್ಷದ ಹೈಕಮಾಂಡ್ ಮತ್ತು ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಅಸಮಾಧಾನ ಎಂಬುದೆಲ್ಲಾ ಕೇವಲ ಸೃಷ್ಟಿಸಿದ ವದಂತಿಗಳು ಅಷ್ಟೇ” ಎಂದು ತಿಳಿಸಿದ್ದಾರೆ.

ಟಿಕೆಟ್ ಯಾರಿಗೆ ಸಿಕ್ಕಿದೆ ಎಂಬುದು ಮುಖ್ಯವಲ್ಲ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಮೊದಲ ಆದ್ಯತೆ ಎಂದು ಅವರು ಹೇಳಿದ್ದಾರೆ. “ಚುನಾವಣಾ ಸಂದರ್ಭದಲ್ಲಿ ಹಲವು ಆಕಾಂಕ್ಷಿಗಳು ಇರುವುದು ಸಹಜ. ಆದರೆ ಅಂತಿಮವಾಗಿ ಪಕ್ಷದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಾವು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುನಿಸಿನ ವದಂತಿಗಳ ನಡುವೆಯೂ ಜಮೀರ್ ಅಹಮದ್‌ ಅವರು ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರಿಸಿದ ಅವರು, “ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ, ಉಪಚುನಾವಣೆಯಲ್ಲಿ ನಾವು ಭರ್ಜರಿ ಜಯ ದಾಖಲಿಸಲಿದ್ದೇವೆ” ಎಂದಿದ್ದಾರೆ.

ಜಮೀ‌ರ್ ಅಹಮದ್ ಅವರ ಈ ಸ್ಪಷ್ಟನೆಯಿಂದ ದಾವಣಗೆರೆ ಕಾಂಗ್ರೆಸ್ ಪಾಳಯದಲ್ಲಿ ಇದ್ದ ಎನ್ನಲಾದ ಸಣ್ಣಪುಟ್ಟ ಗೊಂದಲಗಳು ಬಗೆಹರಿದಂತಾಗಿದ್ದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.