ಪ್ರಾರಂಭವಾದ ಮೆಕ್ಕೆಜೋಳ ಖರೀದಿ ನೋಂದಣಿ ಒಂದೇ ದಿನದಲ್ಲಿ ಬಂದ್.

ಬಿಜೆಪಿ ಒತ್ತಡಕ್ಕೆ ಪ್ರಾರಂಭವಾದ ಮೆಕ್ಕೆಜೋಳ ಖರೀದಿ ನೋಂದಣಿ ಒಂದೇ ದಿನದಲ್ಲಿ ಬಂದ್.

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಕುಕ್ಕುವಾಡ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ನೋಂದಣಿ ಒಂದೇ ದಿನದಲ್ಲಿ ಮುಗಿದಿದೆ. ನೋಂದಣಿಗಾಗಿ ಬಂದ ರೈತರು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದುರುಗಿದರು.


ಈ ಸಂದರ್ಭದಲ್ಲಿ ರೈತರೊಂದಿಗೆ ಉಪಸ್ಥಿತರಿದ್ದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಮಾತನಾಡಿ, ಶಾಮನೂರು ಎಸ್ ಎಸ್ ಗಣೇಶ್ ರವರ ಒಡೆತನದ ಕುಕ್ಕುವಾಡ ಶುಗರ್ ಫ್ಯಾಕ್ಟರಿ ಡಿಸ್ಟಿಲರಿಯವರು ಕ್ವಿಂಟಾಲ್ ಒಂದಕ್ಕೆ ₹2400.00ರ ದರದಂತೆ 7295 ಕ್ವಿಂಟಾಲ್ ಖರೀದಿಸಬೇಕು ಮತ್ತು ಇದಕ್ಕಾಗಿ ಶೇ.50 ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಡಿಸ್ಟಿಲರಿಯವರು ಬಿಜೆಪಿ ಹೋರಾಟಕ್ಕೆ ಮಣಿದು ಕೇವಲ 2000 ಕ್ವಿಂಟಾಲ್ ಖರೀದಿಸುವುದಾಗಿ ಹೇಳಿ, 24 ಲಕ್ಷ ರೂಪಾಯಿ ಮುಂಗಡ ಹಣ ಪಾವತಿಸಿದೆ. ಆದ್ದರಿಂದ ನೋಂದಣಿ ಪ್ರಕ್ರಿಯೆ ಕೇವಲ 2000 ಕ್ವಿಂಟಾಲ್ ಸೀಮಿತಗೊಳಿಸಿ 61 ರೈತರ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಇದರಿಂದ ರೋಚಿಗೆದ್ದ ರೈತರು ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಆಗ ಬಿ ಎಂ ಸತೀಶ್ ರವರು ನೋಡಲ್ ಅಧಿಕಾರಿಯಾಗಿರುವ ಅಬಕಾರಿ ಡಿಸಿ ಚಿದಾನಂದ ಜನೈ ರವರೊಂದಿಗೆ ಮಾತನಾಡಿ ನೀವು ಎಲ್ಲಿದ್ದೀರಿ ಸ್ಥಳಕ್ಕೆ ಬನ್ನಿ ಎಂದು ತಾಕೀತು ಮಾಡಿದರು. ಆದರೆ ಅವರು ಮಾತನಾಡಿ ಡಿಸ್ಟಿಲರಿಯವರಿಗೆ ಮನವೊಲಿಸಿ ಇನ್ನುಳಿದ 5295 ಕ್ವಿಂಟಾಲ್ ಖರೀದಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮೆಕ್ಕೆಜೋಳ ಬೆಳೆದ ರೈತರ ಗೋಳು ಹೇಳತೀರದಾಗಿದೆ. ದರ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರೈತರನ್ನು ಅಲೆದಾಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಜಿ ಎಂ ಗಂಗಾಧರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಲೋಕಸಭೆ ಸದಸ್ಯ ಡಾ.ಪ್ರಭಮಲ್ಲಿಕಾರ್ಜುನರವರು ಇದಕ್ಕೂ ತಮಗೂ ಸಂಬಂಧವಿಲ್ಲದವರಂತೆ ನಡೆದುಕೊಳ್ಳುತ್ತಾರೆ ಎಂದು ಬಿ ಎಂ ಸತೀಶ್ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಳೇನಹಳ್ಳಿ ಕೆ.ಜಿ.ಚೆನ್ನಬಸಪ್ಪ, ಎಸ್.ಸಿ.ಸಿದ್ದಪ್ಪ, ಕಾಶೀಪುರದ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.