ಫಾರ್ವರ್ಡ್ ಚಟ ಮತ್ತು ವಿವೇಚನೆ ಇಲ್ಲದ ‘ದೇಶಪ್ರೇಮ’: ಒಂದು ಪಾಠ
ವೀರಮಾರ್ಗ ನ್ಯೂಸ್ :ಮಂಗಳೂರಿನಲ್ಲಿ 70 ವರ್ಷದ ಹಿರಿಯರೊಬ್ಬರು ಬಾಂಗ್ಲಾದೇಶಿಗಳ ಬಗ್ಗೆ ಸುಳ್ಳು ಸುದ್ದಿ ಹರಡಿ ಬಂಧನಕ್ಕೊಳಗಾದ ಘಟನೆ, ಇಂದಿನ ‘ವಾಟ್ಸಾಪ್ ಯೂನಿವರ್ಸಿಟಿ’ ಭಕ್ತರಿಗೆ ಎಚ್ಚರಿಕೆಯ ಗಂಟೆ.
ಧರ್ಮಪಾಲ ಶೆಟ್ಟಿ ಎಂಬ 70 ವರ್ಷದ ವ್ಯಕ್ತಿಯ ಮಂಗಳೂರಿನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇದ್ದಾರೆ ಎಂದು ವ್ಯಕ್ತಿಯೊಬ್ಬರು ವ್ಯಾಪಾರ ಮಾಡುವ ಅಂಗಡಿ ಬಗ್ಗೆ ಸುಳ್ಳು ಸಂದೇಶವನ್ನು ಫಾರ್ವರ್ಡ್ ಮಾಡಿದರು.
ಕುಟುಂಬದ ಹಿನ್ನೆಲೆಯನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಅವರ ಹೆಸರಿನಲ್ಲಿ 2014ರಲ್ಲಿ ಖರೀದಿಸಲಾದ ಆಸ್ತಿ ಇದೆ. ಅವರು ಭಾರತೀಯರಲ್ಲ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಲ್ಲಿ ಪ್ರಶ್ನೆ ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಬದಲಾಗಿ ನಮ್ಮ ಹಿರಿಯರು ಯಾವ ರೀತಿಯ ಮಾಹಿತಿಗಳನ್ನು ಕುರುಡಾಗಿ ನಂಬುತ್ತಿದ್ದಾರೆ ಎಂಬ ಆತಂಕದ್ದು.
ಇಲ್ಲಿ ಕೇವಲ ಮುಗ್ಧತೆಯಷ್ಟೇ ಅಲ್ಲ, ಅಸಲಿ-ನಕಲಿ ತಿಳಿಯದ ಅವಿವೇಕ ಮತ್ತು ಕಂಡದ್ದನ್ನೆಲ್ಲ ಹಂಚುವ ‘ಡಿಜಿಟಲ್ ಚಟ’ ಎದ್ದುಕಾಣುತ್ತಿದೆ.
ನಿಮಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ನೇರವಾಗಿ ಪೊಲೀಸ್ ಕಮಿಷನರ್ ಅವರ ವಾಟ್ಸಪ್ ನಂಬರ್ ಗೆ ಅಥವಾ ಕಂಟ್ರೋಲ್ ರೂಮಿಗೆ ಕರೆ ಮಾಡಿ ತಿಳಿಸಬಹುದು ಅವರು ಖಂಡಿತ ವಿಚಾರಣೆ ನಡೆಸಿ ಶೋಧನೆ ನಡೆಸಿ ಸತ್ಯಾಸತ್ಯತೆಯನ್ನು ಹೊರಗೆ ತೆಗೆಯುತ್ತಾರೆ.
ಅದು ಬಿಟ್ಟು ಅಮಾಯಕರು ಯಾರು ಅಂಗಡಿ ಮಾಡ್ತಾ ಇದ್ದರೆ ಇನ್ಯಾರೋ ತಳ್ಳು ಗಾಡಿ ಅಂಗಡಿ ನಡೆಸುತ್ತಿದ್ದರೆ ಕೆಲವೊಮ್ಮೆ ಜೊತೆ ಇದ್ದವರೇ ಹೊಟ್ಟೆ ಉರಿಯಿಂದ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಯಾವನೋ ಅಮಾಯಕ ಜನ ಶೇರ್ ಮಾಡಿ ಕ್ರಿಮಿನಲ್ ಪ್ರಕರಣ ಎದುರಿಸುವಂತ ಪರಿಸ್ಥಿತಿಯು ಬರಬಹುದು.
ಹಾಗಾಗಿ ಜಾಲತಾಣದಲ್ಲಿ ಫಾರ್ವರ್ಡ್ ಮಾಡುವ ಮುನ್ನ ಎಚ್ಚರ!
ಗಮನಿಸಬೇಕಾದ ಅಂಶಗಳು:
ವಿವೇಚನೆಯ ಕೊರತೆ: ದೇಶ ಅಥವಾ ಧರ್ಮದ ಹೆಸರಿನಲ್ಲಿ ಬರುವ ಸಂದೇಶಗಳನ್ನು ಕಂಡ ತಕ್ಷಣ, ಅವುಗಳ ಸತ್ಯಾಸತ್ಯತೆ ಪರಿಶೀಲಿಸದೆ ಹಂಚುವುದು ರಾಷ್ಟ್ರ ಸೇವೆಯಲ್ಲ, ಬದಲಾಗಿ ಅಕ್ಷಮ್ಯ ಅಪರಾಧ.
ಸುಳ್ಳು ಸುದ್ದಿಯ ಭ್ರಮೆ: ವೃತ್ತಿಪರ ಮಾಧ್ಯಮಗಳಿಗಿಂತ ಜಾಲತಾಣದ ಸುಳ್ಳುಗಳನ್ನೇ ಸತ್ಯವೆಂದು ನಂಬುವ ಹಿರಿಯರು, ಸಮಾಜ ರಕ್ಷಣೆ ಮಾಡುತ್ತಿದ್ದೇವೆಂಬ ಭ್ರಮೆಯಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ.
ಕಾನೂನಿನ ಪೆಟ್ಟು: ಪೊಲೀಸರು ಇಂದು ತಂತ್ರಜ್ಞಾನದ ಮೂಲಕ ಸುಳ್ಳಿನ ಮೂಲವನ್ನು ಸುಲಭವಾಗಿ ಪತ್ತೆಹಚ್ಚುತ್ತಾರೆ. ವಯಸ್ಸಿನ ಗೌರವವನ್ನೂ ಮರೆತು ಹಂಚುವ ದ್ವೇಷದ ಸಂದೇಶಗಳು ನೇರವಾಗಿ ಜೈಲು ಪಾಲಾಗುವಂತೆ ಮಾಡುತ್ತವೆ.
ಜಾಗೃತಿ ಸಂದೇಶ: ಮಾಧ್ಯಮಗಳು ಸುದ್ದಿ ಮಾಡುವ ಮೊದಲು ಮೂಲಗಳನ್ನು ನೂರಾರು ಬಾರಿ ಪರಿಶೀಲಿಸುತ್ತವೆ. ಆದರೆ ಕೇವಲ ಮೊಬೈಲ್ ಇದೆ ಎಂಬ ಕಾರಣಕ್ಕೆ ಸಿಕ್ಕ ಸಿಕ್ಕ ಮೆಸೇಜ್ ಫಾರ್ವರ್ಡ್ ಮಾಡುವುದು ನಿಮ್ಮ ವ್ಯಕ್ತಿತ್ವಕ್ಕೆ ಹಾಗೂ ಸಮಾಜಕ್ಕೆ ಅಪಾಯಕಾರಿ.
ನೆನಪಿಡಿ: ನಿಮ್ಮ ಒಂದು ‘Forward’ ಕ್ಲಿಕ್ ಮಾಡುವ ಮುನ್ನ ವಿವೇಚನೆ ಬಳಸಿ. ಸತ್ಯ ತಿಳಿಯದ ಪ್ರಚಾರ ದೇಶಪ್ರೇಮವಲ್ಲ, ಅದು ಸಮಾಜಕ್ಕೆ ಮಾಡುವ ದ್ರೋಹ.
ಕೃಪೆ :- ಜಿತೇಂದ್ರ ಕುಂದೇಶ್ವರ