ವೀರಮಾರ್ಗ ನ್ಯೂಸ್ ಹುಬ್ಬಳ್ಳಿ : ಮನುಷ್ಯ ಯಾವಾಗಲೂ ಆಶಾವಾದಿಯಾಗಿ ಬದುಕಬೇಕಲ್ಲದೇ ನಿರಾಶಾವಾದಿಗಳಾಗಬಾರದು. ಜೀವನದಲ್ಲಿ ಭರವಸೆ ಎಂಬ ದೀಪ ಎಂದಿಗೂ ಆರಬಾರದು. ಧರ್ಮ ದೀಪದ ಬೆಳಕಿನಿಂದ ಮನುಷ್ಯನ ಅಜ್ಞಾನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ತಾಲೂಕಿನ ತಿರುಮಲಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬರುವ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾರಥೋತ್ಸವ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕಿನ ಚಟುವಟಿಕೆಗಳು ಸಂಪೂರ್ಣ ಸಾಕಾರಗೊಳ್ಳುವುದು ಧಾರ್ಮಿಕ ಮೌಲ್ಯಗಳ ಪರಿಪಾಲನೆಯಿಂದ ಹೊರತು ಜ್ಞಾನ ಬೋಧನೆಯಿಂದಲ್ಲ. ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ಪರಿಸರದಲ್ಲಿ ಪರಿವರ್ತನೆಗೊಂಡಿದ್ದರೂ ಜೀವನ ಮೌಲ್ಯಗಳು ಬದಲಾಗುವುದಿಲ್ಲ. ಸಾಮಾಜಿಕ ವ್ಯವಸ್ಥೆಯ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಜೀವನ ನಿಂತ ನೀರಾಗಬಾರದು. ಹರಿಯುವ ಪವಿತ್ರ ಗಂಗಾಜಲವಾಗಬೇಕು. ಪ್ರಯತ್ನ ಮತ್ತು ಚಲನಶೀಲತೆ ಆದರ್ಶ ಜೀವನದ ಗುಟ್ಟು ಎಂಬುದನ್ನು ಮರೆಯಬಾರದು. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ನಿರರ್ಥಕ. ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಸದ್ವಿದ್ಯೆ ಸಂಬಂಧ ಮತ್ತು ಸ್ನೇಹ ನಮ್ಮೊಂದಿಗೆ ಇದ್ದರೆ ಬಾಳೆಲ್ಲ ಸುಖಮಯವಾಗುತ್ತದೆ ಎಂಬ ಶ್ರೀ ಜಗದ್ಗುರು ರೇಣುಕಾಚಾರ್ಯರ ಸತ್ಯ ಸಂದೇಶ ಮರೆಯಲಾಗದು. ವ್ಯಕ್ತಿತ್ವ ವಿಕಸನಕ್ಕೆ ಧರ್ಮ ಆಧ್ಯಾತ್ಮಗಳ ಕೊಡುಗೆ ಅಪಾರ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಯುಗಪುರುಷರಾಗಿ ಅವತರಿಸಿ ಜಾತಿ ಮತ ಪಂಥ ಮೀರಿ ಸರ್ವರಿಗೂ ಒಳಿತನ್ನು ಉಂಟು ಮಾಡಿದ್ದನ್ನು ಎಂದಿಗೂ ಮರೆಯಲಾಗದು. ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸ ಹೆಸರಿನಿಂದ ಬೆಳೆಸಿ ಭಕ್ತ ಸಂಕುಲಕ್ಕೆ ಮಾರ್ಗದರ್ಶನ ನೀಡಿ ಹರಸಿ ಹಾರೈಸಿದ್ದಾರೆ ಎಂದರು.
ನೇತೃತ್ವ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಾಲು ಜಾರುವುದಕ್ಕಿಂತ ಆಗುವ ಅನಾಹುತಕ್ಕಿಂತ ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು. ಧರ್ಮ ಮಾರ್ಗದಲ್ಲಿ ನಡೆದು ಬದುಕು ಕಟ್ಟಿಕೊಳ್ಳಬೇಕೆಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಆಧುನಿಕತೆಯ ಹೆಸರಿನಲ್ಲಿ ನಿಜವಾದ ಜೀವನ ಮೌಲ್ಯಗಳು ಕಣ್ಮರೆಯಾಗಬಾರದು. ತಾತ್ವಿಕವಾಗಿ ಬಾಳುವ ಶುದ್ಧ ಶಕ್ತಿ ಸಾತ್ವಿಕವಾಗಿ ಬದುಕಬೇಕೆಂಬ ಮನಸ್ಸು ಶುದ್ಧವಾಗಿ ವರ್ತಿಸುವ ಜೀವನ ಬೆಳೆದು ಬಂದಾಗ ಬಾಳು ಸುಂದರಗೊಳ್ಳುತ್ತದೆ ಎಂದರು. ಸ್ವಾಗತಿಸಿ ನಿರೂಪಿಸಿದ ಉಮದಿ ದಾನಯ್ಯ ದೇವರು ಮಾತನಾಡಿ ವಸಂತಾಗಮನದಲ್ಲಿ ಸೃಷ್ಠಿ ಹೊಸ ಚೈತನ್ಯ ಹೊಂದುವಂತೆ ಮಾನವ ಜೀವನ ಆದರ್ಶಗಳ ಪರಿಪಾಲನೆಯಿಂದ ಬದುಕಿಗೆ ಬಲ ತರುವ ಕೆಲಸ ಮಾಡಬೇಕಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ವಿಚಾರ ಧಾರೆಗಳು ಸುಖ ಶಾಂತಿ ಬದುಕಿಗೆ ಆಶಾ ಕಿರಣವಾಗಿವೆ ಎಂದರು. ತಿರುಮಲಕೊಪ್ಪದ ಗುರುಸಿದ್ಧಯ್ಯ ಹಿರೇಮಠ, ಯಲಿವಾಳದ ಶ್ರೀಕಂಠಗೌಡ ಹಿರೇಗೌಡ್ರ, ಸುರಶೆಟ್ಟಿಕೊಪ್ಪದ ಗಂಗಯ್ಯ, ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಕ್ರೋಧಿನಾಮ ಸಂವತ್ಸರದ ಕೊನೆಯ ದಿನವಾದ ಯುಗಾದಿ ಅಮವಾಸ್ಯೆಯಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಸಕಲ ಜೀವಾತ್ಮರಿಗೆ ಒಳಿತಾಗಬೇಕು. ಎಲ್ಲರೂ ಸಾಮರಸ್ಯದಿಂದ ಬಾಳಿ ಬದುಕಬೇಕೆಂಬ ಸದುದ್ದೇಶದಿಂದ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು.

ಶ್ರೀ ರಂಭಾಪುರಿ ಜಗದ್ಗುರುಗಳವರ ಎಪ್ರೀಲ್ ಮಾಹೆಯ ಪ್ರವಾಸ ವಿವರ
ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು) : ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ 2025ನೇ ಸಾಲಿನ ಎಪ್ರೀಲ್ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿರುವುದಾಗಿ ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.
ದಿನಾಂಕ ೧ರಂದು ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, ೨ರಂದು ಹುಬ್ಬಳ್ಳಿ ತಾಲೂಕ ಹಳ್ಳಿಯಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ ಸಮಾರಂಭ, 4ರ ಬೆಳಿಗ್ಗೆ 11 ಗಂಟೆಗೆ ಚಿತ್ತಾಪುರ ತಾಲೂಕ ಹದನೂರು ಗ್ರಾಮದಲ್ಲಿ ನೂತನ ಹಿರೇಮಠದ ಉದ್ಘಾಟನಾ ಸಮಾರಂಭ, ಸಂಜೆ 6 ಗಂಟೆಗೆ ಕಲಬುರ್ಗಿ ತಾಲೂಕ ಸ್ಟೇಷನ್ ಬಬಲಾದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ನಿರ್ಮಿಸಿದ ಸಭಾ ಭವನ ಉದ್ಘಾಟನಾ ಸಮಾರಂಭ, 6 ರಂದು ಸೊರಬ ತಾಲೂಕ ದುಗ್ಲಿ ಕ್ಷೇತ್ರದಲ್ಲಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ವರ್ಧಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ 7 ರಂದು ಮಹಾರಾಷ್ಟ್ರ ರಾಜ್ಯ ಜವಳಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಳಸಾರೋಹಣ ಧರ್ಮ ಸಮಾರಂಭ, 11 ರಂದು ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನಲ್ಲಿ ಶ್ರೀ ಮಹಾಗಣಪತಿ ಸ್ಥಾಪನಾ ಮಂಡಲ ಪೂಜಾ ಸಂದರ್ಭದಲ್ಲಿ ಇಷ್ಟಲಿಂಗ ಮಹಾಪೂಜಾ ನಡೆಸುವರು. ದಿನಾಂಕ ೧೨ರಂದು ಪೌರ್ಣಿಮೆಯ ನಿಮಿತ್ಯ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ವಾಸ್ತವ್ಯ ಇದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು. ದಿನಾಂಕ 15ರಂದು ಹಾವೇರಿ ಜಿಲ್ಲೆ ಗುತ್ತಲದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಹೇಮಿಗಿರಿ ಮಠದ ಉದ್ಘಾಟನಾ ಸಮಾರಂಭ, 16 ರಂದು ಬೈಲಹೊಂಗಲದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಜಾತ್ರಾ ಅಂಗವಾಗಿ ಪ್ರಶಸ್ತಿ ಪ್ರದಾನ ಧರ್ಮ ಸಮಾರಂಭ, 17 ರಂದು ನವಲಗುಂದ ತಾಲೂಕ ಕುಮಾರಕೊಪ್ಪದಲ್ಲಿ ಸಾಮೂಹಿಕ ವಿವಾಹ ಸಮಾರಂಭ, 18 ರಂದು ನೆಲಮಂಗಲ ತಾಲೂಕ ಆದಿಹೊಸಳ್ಳಿಯಲ್ಲಿ ಶ್ರೀ ಈಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭ, 19 ರಂದು ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳವರ ಷಷ್ಠ್ಯಬ್ಧಿ ಧರ್ಮ ಸಮಾರಂಭ, 20ರಂದು ದಾವಣಗೆರೆಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಜತ ಮಹೋತ್ಸವ ಧರ್ಮ ಸಮಾರಂಭ, ೨೧ರಂದು ಮಹಾರಾಷ್ಟ್ರ ರಾಜ್ಯ ಗುಡ್ಡಾಪುರದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಹಿರೇಮಠದ ಶಿಲಾನ್ಯಾಸ ಸಮಾರಂಭ, ೨೨ರಂದು ಕಮಲಾಪುರ ತಾಲೂಕ ತೆಂಗಟಾದಲ್ಲಿ ಶ್ರೀ ಹನುಮಾನ ದೇವಸ್ಥಾನ ಉದ್ಘಾಟನಾ ಸಮಾರಂಭ, 23 ರಂದು ಹುಮನಾಬಾದ ತಾಲೂಕ ಹುಡುಗಿ ಗ್ರಾಮದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಕಟ್ಟಿಮನಿ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದಲ್ಲಿ ಪಾಲ್ಗೊಳ್ಳುವರು. ದಿನಾಂಕ 24 ರಂದು ಬೆಳಿಗ್ಗೆ ಲಕ್ಷ್ಮೇಶ್ವರದಲ್ಲಿ ಬಯಲು ಸಭಾ ಭವನ ಉದ್ಘಾಟನಾ ಸಮಾರಂಭ, ಸಂಜೆ 5 ಗಂಟೆಗೆ ಹೊನ್ನಾಳಿ ತಾಲೂಕ ದೊಡ್ಡೆತ್ತಿನಹಳ್ಳಿಯಲ್ಲಿ ಪುರ ಪ್ರವೇಶ-ಧರ್ಮ ಸಮಾರಂಭ, 25 ರಂದು ದೊಡ್ಡೆತ್ತಿನಹಳ್ಳಿಯಲ್ಲಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಉದ್ಘಾಟನಾ ಧರ್ಮ ಸಮಾರಂಭ, 26 ರಂದು ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 27 ಮತ್ತು 28 ರಂದು ಹಾಸನ ತಾಲೂಕ ಮುಟ್ಟನಹಳ್ಳಿಯಲ್ಲಿ ಪುರ ಪ್ರವೇಶ ಧರ್ಮ ಸಮಾರಂಭ ಹಾಗೂ ಮಹಾಪೂಜಾ, 29 ರಂದು ಚನ್ನಗಿರಿ ತಾಲ್ಲೂಕ ನಲ್ಲೂರಿನಲ್ಲಿ ಲಿಂ.ಶ್ರೀ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳ ಗದ್ದುಗೆ ಪ್ರತಿಷ್ಠಾಪನೆ-ಕಳಸಾರೋಹಣ ಧರ್ಮ ಸಮಾರಂಭ, ೩೦ರಂದು ಹೂವಿನಹಡಗಲಿ ತಾಲೂಕ ಕೆಂಚಮ್ಮನಹಳ್ಳಿಯಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಜನತೆ ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.