Home » ಕರ್ನಾಟಕ ಗ್ರಾಮ ಸ್ವರಾಜ್‌ ಹಾಗೂ ಪಂಚಾಯತ್‌ ರಾಜ್‌ ವಿಧೇಯಕ ವಿಧಾನಸಭೆಯಲ್ಲಿ ಮಂಡನೆ

ಕರ್ನಾಟಕ ಗ್ರಾಮ ಸ್ವರಾಜ್‌ ಹಾಗೂ ಪಂಚಾಯತ್‌ ರಾಜ್‌ ವಿಧೇಯಕ ವಿಧಾನಸಭೆಯಲ್ಲಿ ಮಂಡನೆ

ವೀರಮಾರ್ಗ ನ್ಯೂಸ್ : ಬೆಂಗಳೂರು : ಗ್ರಾಮೀಣ ಭಾಗದಲ್ಲಿ ಕಟ್ಟಡ ನಿರ್ಮಾಣದ ವೇಳೆ ಗ್ರಾಮ ಪಂಚಾಯಿತಿ ಅಥವಾ ಯೋಜನಾ ಪ್ರಾಧಿಕಾರಗಳ ಮೂಲಕ ಲೇಔಟ್‌ ಪ್ಲಾನ್‌ಗೆ ಪೂರ್ವಾನುಮೋದನೆ ಪಡೆದುಕೊಳ್ಳಬೇಕು ಎಂಬ ನಿಯಮವನ್ನೊಳಗೊಂಡ ಕರ್ನಾಟಕ ಗ್ರಾಮ ಸ್ವರಾಜ್‌ ಹಾಗೂ ಪಂಚಾಯತ್‌ ರಾಜ್‌ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಪರವಾಗಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ವಿಧೇಯಕವನ್ನು ಮಂಡಿಸಿದರು.
ಕಟ್ಟಡ ನಿವೇಶನಗಳಿಗೆ ಹೊಸ ಖಾತೆ ಅಥವಾ ಪಿಐಡಿಯನ್ನು ನೀಡುವ ಮೊದಲು ಲೇಔಟ್‌ ಪ್ಲಾನ್‌ಗೆ ಪೂರ್ವಾನುಮತಿ ಪಡೆದುಕೊಂಡಿರಬೇಕು.

ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, ಉಪಬಂಧಗಳ ಮೇರೆಗೆ ಅಧಿಸೂಚಿಸಲಾದ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿರಬೇಕು. ನಿಯಮಗಳನ್ನು ಪಾಲಿಸದೇ ಯಾವುದೇ ಖಾತೆಯನ್ನೂ ನೀಡಬಾರದು. ಒಂದು ವೇಳೆ ನಿಯಮ ಮೀರಿ ಪಿಐಡಿ ಅಥವಾ ಖಾತೆಯನ್ನು ನೀಡಿದರೆ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ದಂಡ ಅಥವಾ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ವಿಧೇಯಕದಲ್ಲಿ ಸೂಚಿಸಲಾಗಿದೆ.
ಈ ಕಾಯಿದೆಯಿಂದ ಗ್ರಾಮೀಣ ಸ್ಥಳೀಯ ಪ್ರಾಧಿಕಾರದಲ್ಲಿರುವ ಸ್ವತ್ತುಗಳನ್ನು ಆರ್ಥಿಕ ಸಂಪನೂಲ ಜಾಲದೊಳಗೆ ತರಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಭೂಮಿಯನ್ನು ಹೊರತುಪಡಿಸಿ ಅನಧಿಕೃತ ವಸತಿ ಪ್ರದೇಶಗಳಲ್ಲಿನ ಆವರಣ, ಕಟ್ಟಡಗಳಿಗೆ ಸ್ವತ್ತು ತೆರಿಗೆಯನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *