ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ರಸ್ತೆಗಿಳಿದ ಸಾರಿಗೆ ಬಸ್​ಗಳು.

ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ರಸ್ತೆಗಿಳಿದ ಸಾರಿಗೆ ಬಸ್​ಗಳು

ತರಾಟೆ, ಅರೆಸ್ಟ್ ಎಚ್ಚರಿಕೆಗೆ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಥಂಡಾ!

ವೀರಮಾರ್ಗ ನ್ಯೂಸ್ : ಕರ್ನಾಟಕದ ಸಾರಿಗೆ ನೌಕರರ ಮುಷ್ಕರವು ಹೈಕೋರ್ಟ್‌ನ ಖಡಕ್ ಎಚ್ಚರಿಕೆಯ ನಂತರ ಅಂತ್ಯಗೊಂಡಿದೆ. ನಾಲ್ಕೂ ಸಾರಿಗೆ ನಿಗಮಗಳ ಬಸ್​ಗಳ ಸಂಚಾರವು ಪುನರಾರಂಭಗೊಂಡಿದೆ. ಪ್ರಯಾಣಿಕರು ಖುಷಿಪಟ್ಟಿದ್ದಾರೆ. ಜೊತೆಗೆ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಮುಂದೂಡಿದ್ದೇವೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್​ ಅನಂತ್ ಸುಬ್ಬರಾವ್​ ಘೋಷಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ಖಡಕ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಷ್ಕರ ಕೈಬಿಟ್ಟ ಸಾರಿಗೆ ನೌಕರರು ಮತ್ತೆ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದು, ರಾಜ್ಯಾದ್ಯಂತ ನಾಲ್ಕೂ ನಿಗಮಗಳ (KSRTC, NWKRTC, KKRTC, BMTC) ಬಸ್​ ಸಂಚಾರ ಆರಂಭವಾಗಿವೆ.

ಬೆಂಗಳೂರಿನ ಕೆಂಪೇಗೌಡ ಬಸ್​ ನಿಲ್ದಾಣ (ಮೆಜೆಸ್ಟಿಕ್​) ಬಸ್​ ನಿಲ್ದಾಣದಿಂದ ಬಸ್‌ಗಳ ಸಂಚಾರ ಶುರುಮಾಡಿವೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಓಡಾಟ ನಡೆಸಿವೆ.
“ನಾವು ಬೆಳಗ್ಗೆ ನಿಮಾನ್ಸ್ ಆಸ್ಪತ್ರೆಗೆ ಖಾಸಗಿ ವಾಹನ ಮಡಿಕೊಂಡು ಬಂದಿದ್ದೇವೆ. ವಾಪಸ್​ ಹೋಗುವುದು ಹೇಗೆ? ಖಾಸಗಿ ವಾಹನದ ಬಾಡಿಗೆ ದುಬಾರಿ ಎಂಬ ಚಿಂತೆಯಲ್ಲಿದ್ವಿ. ಈಗ ಬಸ್​ ಸಂಚಾರ ಆರಂಭವಾಗಿದ್ದು, ನಿರಾಳರಾಗಿದ್ದೇವೆ. ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು ಸರ್ಕಾರವು ನೌಕರರ ಬೇಡಿಕೆಗಳನ್ನು ಪೂರೈಸಬೇಕು ಎಂದು ಪ್ರಯಾಣಿಕರು ಹೇಳಿದರು.

ಕೋರ್ಟ್​ ಸೂಚನೆ ಬೆನ್ನಲ್ಲೇ ಬಸ್ ಸಂಚಾರ ಆರಂಭ
ನಿಮ್ಮ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದನ್ನು ಸಹಿಸುವುದಿಲ್ಲ. ಹೈಕೋರ್ಟ್ ಆದೇಶವಿದ್ದರೂ ನೀವು ಅದನ್ನು ಪಾಲಿಸಿಲ್ಲ. ಎಸ್ಮಾ ಕಾಯ್ದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು ಎಂದು ಸಾರಿಗೆ ಸಂಘಟನೆಗೆ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿತು. ಹೈಕೋರ್ಟ್​ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರವನ್ನು ಮುಂದೂಡಿ, ಕೆಲಸಕ್ಕೆ ಹಾಜರಾಗಿದ್ದಾರೆ. ಎಂದಿನಂತೆ ನಾಲ್ಕೂ ನಿಗಮಗಳ ಬಸ್​ ಸಂಚಾರ ಆರಂಭವಾಗಿದೆ.

ಮುಷ್ಕರ ನಡೆಸಿದ ಸಾರಿಗೆ ಸಂಘಟನೆಗೆ ಹೈಕೋರ್ಟ್ ತರಾಟೆ, ಅರೆಸ್ಟ್ ಎಚ್ಚರಿಕೆಗೆ ಅಧ್ಯಕ್ಷರು ಥಂಡಾ!

ಕರ್ನಾಟಕ ಹೈಕೋರ್ಟ್ (High Court)​ ಖಡಕ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್​ ಸಾರಿಗೆ ನೌಕರರ ಮುಷ್ಕರವನ್ನು (Transport Employees Strike) ಮುಂದೂಡಿದ್ದೇವೆ ಎಂದು ಘೋಷಿಸಿದ್ದಾರೆ. ಒಂದು ದಿನ ಮುಷ್ಕರ ಮುಂದೂಡುವಂತೆ ಹೈಕೋರ್ಟ್​ ಸೂಚನೆ ನೀಡಿದ ನಂತರವೂ ಸಾರಿಗೆ ನೌಕರರು ಮಂಗಳವಾರ ಮುಷ್ಕರ ನಡೆಸಿದರು. ಇದರಿಂದ ಗರಂ ಆದ ಹೈಕೋರ್ಟ್​, ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿತು. ಮುಷ್ಕರ ನಿಲ್ಲಿಸದಿದ್ದರೇ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು. ಎಸ್ಮಾ ಕಾಯ್ದೆಯಡಿ ಸರ್ಕಾರ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು ಎಂದು ಖಡಕ್ ಎಚ್ಚರಿಕೆ ನೀಡಿತು. ಹೈಕೋರ್ಟ್​ ಎಚ್ಚರಿಕೆ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರವನ್ನು ಮುಂದೂಡಿದ್ದಾರೆ.

ಹೈಕೋರ್ಟ್​ ನೀಡಿದ ಸೂಚನೆ ಏನು?
ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್​​ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದು, “ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು.