ವೀರಮಾರ್ಗ ನ್ಯೂಸ್: ಬೆಂಗಳೂರು: ಅತ್ಯಾಚಾರಕ್ಕೊಳಗಾಗಿ 16 ವರ್ಷದ ಅಪ್ರಾಪ್ತ ಬಾಲಕಿ ಧರಿಸಿರುವ 28 ವಾರಗಳ ಗರ್ಭವನ್ನು ತೆಗೆಯಲು ವಾಣಿ ವಿಲಾಸ ಆಸ್ಪತ್ರೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೇ ಸಂತ್ರಸ್ತ ಬಾಲಕಿಯ ವೈದ್ಯಕೀಯ ಗರ್ಭಪಾತದ ವೆಚ್ಚವನ್ನು ಆಸ್ಪತ್ರೆ ಭರಿಸಬೇಕು ಎಂದೂ ಸೂಚಿಸಿದೆ.
ಸಂತ್ರಸ್ತ ಬಾಲಕಿಯ ಪರವಾಗಿ ಯಲಹಂಕ ನಿವಾಸಿಯಾದ ಆಕೆಯ ತಾಯಿ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಸಂತ್ರಸ್ತೆಯ ಜೀವಕ್ಕೆ ಹಾನಿಯಾಗದಂತೆ ಗರ್ಭಪಾತ ಮಾಡುವ ಸಂಬಂಧ ವೈದ್ಯರಿಂದ ಅಗತ್ಯ ಪರೀಕ್ಷೆಗಳ ಬಳಿಕ ನಿರ್ಧರಿಸಿ ಕ್ರಮಕ್ಕೆ ಮುಂದಾಗಬೇಕು. ಈ ಪ್ರಕ್ರಿಯೆಯನ್ನು “ವೈದ್ಯಕೀಯ ಗರ್ಭಪಾತ ಸಮಾಪನ ಅಧಿನಿಯಮ-1971ರ ನಿಯಮಗಳಂತೆ ನಡೆಸಬೇಕು.

ಅಲ್ಲದೆ, ಗರ್ಭಪಾತ ಮಾಡಿದ ಭ್ರೂಣ ವನ್ನು ಡಿಎನ್‌ಎ ಪರೀಕ್ಷೆಗೆ ಅನುಕೂಲವಾಗುವಂತೆ ಸಂರಕ್ಷಿಸಿ ಅದರ ಅಂಗಾಂಶ ಮಾದರಿಯನ್ನು ಡಿಎನ್‌ಎ ಪರೀಕ್ಷೆಗಾಗಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಬೇಕು. ಸಂತ್ರಸ್ತೆಗೆ ಮನೆ ಯಿಂದ ಆಸ್ಪತ್ರೆಗೆ ಹೋಗಿ ಬರುವುದಕ್ಕೆ ವಾಹನ ವ್ಯವಸ್ಥೆ ಮಾಡುವಂತೆ ಯಲಹಂಕ ಪೊಲೀಸರಿಗೆ ನ್ಯಾಯಪೀಠ ನಿರ್ದೇಶನ
ಗರ್ಭಪಾತ ಪ್ರಕ್ರಿಯೆಗೆ ಅರ್ಜಿದಾರರು ಅಥವಾ ಕುಟುಂಬದವರಿಂದ ಯಾವುದೇ ವೆಚ್ಚ ಪಡೆದುಕೊಳ್ಳಬಾರದು. ಪ್ರಕರಣ ಸಂಬಂಧ ನ್ಯಾಯಾಲಯದ ಆದೇಶವನ್ನು ಪಾಲಿಸಿದ ಬಗ್ಗೆ ಎರಡು ವಾರಗಳಲ್ಲಿ ವರದಿ ನೀಡುವಂತೆ ಯಲಹಂಕ ಪೊಲೀಸರು ವಾಣಿ ವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.