ತಾಲೂಕಿನ ಶೇಷಗಿರಿ ಗ್ರಾಮದ 33ಕೆವಿ ವಿದ್ಯುತ ಉಪಕೇಂದ್ರಕ್ಕೆ ಶಾಸಕ ಮಾನೆ ದಿಢೀರ ಭೇಟಿ
ವೀರಮಾರ್ಗ ನ್ಯೂಜ್ : ಹಾನಗಲ : ಲೈನ್ ಕ್ಲಿಯರನ್ಸ್ ಪಡೆದ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ತಾಲೂಕಿನ ಶೇಷಗಿರಿ ಗ್ರಾಮದಲ್ಲಿನ 33 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ, ಕಾರ್ಯನಿರ್ವಹಣೆಯ ಪರಿಶೀಲನೆ ನಡೆಸಿದರು.
ಕೇಂದ್ರದಲ್ಲಿನ ಫೀಡರ್‌ಗಳ ಸಂಖ್ಯೆ, ವಿದ್ಯುತ್ ಪೂರೈಕೆ ಕುರಿತು ನಿರ್ವಹಿಸಲಾಗುತ್ತಿರುವ ದಾಖಲೆ, ಲೈನ್ ಕ್ಲಿಯರನ್ಸ್ ನೀಡುವ ಸಂದರ್ಭದಲ್ಲಿ ಅನುಸರಿಸಲಾಗುತ್ತಿರುವ ಎಚ್ಚರಿಕೆ ಕ್ರಮಗಳ ಕುರಿತು ಆಪರೇಟರ‍್ಸ್ ಬಳಿ ಮಾಹಿತಿ ಪಡೆದರು. ವಿದ್ಯುತ್ ಪೂರೈಕೆ ಕುರಿತಂತೆ ಎಡಬಿಡದೇ ಒಂದೇ ಸಮನೆ ದೂರವಾಣಿ ಕರೆ ಸ್ವೀಕರಿಸುತ್ತಿದ್ದ ಆಪರೇಟರ್‌ನನ್ನು ಈ ಕುರಿತು ಶಾಸಕ ಮಾನೆ ಪ್ರಶ್ನಿಸಿದಾಗ, ಒಂದು ದಿನಕ್ಕೆ ಕನಿಷ್ಟ 1000-1200 ಕರೆ ಬರುತ್ತವೆ. ಯಾವ ಸಮಯಕ್ಕೆ, ಯಾವ ಭಾಗಕ್ಕೆ ವಿದ್ಯುತ್ ಪೂರೈಸಲಾಗುತ್ತದೆ ಪೂರೈಕೆ ಏಕೆ ಸ್ಥಗಿತಗೊಳಿಸಲಾಗಿದೆ ಎಂದು ನಿರಂತರ ಕರೆಗಳು ಬರುತ್ತಿರುತ್ತವೆ ಎಂದು ಮಾಹಿತಿ ಹಂಚಿಕೊಂಡರು.
ವಿದ್ಯುತ್ ಪೂರೈಕೆಯ ಸಮಯದ ಕುರಿತು ಮೊದಲೇ ಮಾಹಿತಿ ನೀಡಬೇಕು. ಪ್ರಮುಖವಾಗಿ ಲೈನ್ ಕ್ಲಿಯರನ್ಸ್ ನೀಡುವ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಶಾಖಾಧಿಕಾರಿಯ ನಿರ್ದೇಶನ ಪಾಲಿಸಬೇಕು. ಗುತ್ತಿಗೆದಾರರು ಲೈನ್ ಕ್ಲಿಯರನ್ಸ್ ಕೇಳಿದಾಗ ಕೊಡಬಾರದು. ನಿರ್ಲಕ್ಷ್ಯ ವಹಿಸಿದರೆ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಗಮನ ಇರಲಿ ಎಂದು ಸೂಚಿಸಿದರು.
ಬಿಸಿಲಿನ ಪ್ರಭಾವ ಹೆಚ್ಚಿದೆ. ಹಾಗಾಗಿ ಬೆಳೆಗಳಿಗೆ ನೀರಿನ ಅಗತ್ಯವಿದ್ದು, ರೈತರು ವಿದ್ಯುತ್ ಪೂರೈಕೆ ಕುರಿತಂತೆ ಮಾಹಿತಿ ಪಡೆಯಲು ಕರೆ ಮಾಡಿದಾಗ ಬೇಸರ ಮಾಡಿಕೊಳ್ಳದೇ ಸಮಾಧಾನದಿಂದ ಉತ್ತರ ನೀಡಿ. ಲಭ್ಯವಿರುವ ವಿದ್ಯುತ್ ಸದ್ಭಳಕೆ ಮಾಡಿಕೊಂಡು ರೈತರ ಅಗತ್ಯಕ್ಕೆ ಅನುಗುಣವಾಗಿ ಪೂರೈಕೆಗೆ ಗಮನ ಹರಿಸಿ ಎಂದು ಸೂಚನೆ ನೀಡಿದರು.
ತಾಲೂಕಿನ ಶೇಷಗಿರಿ ಗ್ರಾಮದ 33ಕೆವಿ ವಿದ್ಯುತ ಉಪಕೇಂದ್ರಕ್ಕೆ ಶಾಸಕ ಮಾನೆ ದಿಢೀರ ಭೇಟಿ
