೮೨ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್.ಆರ್. ಪಾಟೀಲ ಅಭಿಮಾನ
ಯುವ ಜನಾಂಗ ಸ್ವತಂತ್ರ್ಯ ಯೋಧರ ತ್ಯಾಗಬಲಿದಾನ ಅರಿಯಲಿ
ವೀರಮಾರ್ಗ ನ್ಯೂಸ್ ಹಾವೇರಿ : ಭಾರತ ಸ್ವಾತಂತ್ರ್ಯ ಹೋರಾಟವೇ ರೋಚಕವಾಗಿತ್ತು. ಇಂದಿನ ಯುವ ಜನಾಂಗ ಸ್ವಾತಂತ್ರ್ಯ ಚಳುವಳಿ, ಸ್ವಾತಂತ್ರ್ಯ ಯೋಧರ ತ್ಯಾಗಬಲಿದಾನಗಳನ್ನು ತಿಳಿದುಕೊಳ್ಳಬೇಕು ಹಾಗೂ ದೇಶಾಭಿಮಾನ ಮತ್ತು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ
ಎಸ್.ಪಾಟೀಲ ಅವರು ಹೇಳಿದರು.
ನಗರದ ಹುತಾತ್ಮರ ವೀರಸೌಧದಲ್ಲಿ ಮಂಗಳವಾರ ಹಾವೇರಿ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಟಿ.ಎಂ.ಎ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹುತಾತ್ಮ ಮೈಲಾರ ಮಹದೇವ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರುಗಳ ಜೀವ ಬಲಿದಾನ ಮಾಡಿದ ಸ್ಮರಣೆಯ ೮೨ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮೈಲಾರ
ಮಹದೇವಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಮಾಡಿ ಅವರು ಮಾತನಾಡಿದರು.

ಮೈಲಾರ ಮಹದೇವಪ್ಪನವರು ಒಬ್ಬ ಧೀಮಂತ ನಾಯಕ, ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ಮೂಲಕ ದೇಶದ ಸ್ವಾತಂತ್ರ್ಯ ಸಂಗ್ರಾಮದ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. ಹಾಗಾಗಿ ಇಂದಿನ ಯುವ ಜನಾಂಗ ಓದಿನೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಗಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು, ಅನೇಕ ದೇಶಗಳ ಸ್ವಾತಂತ್ರ್ಯ ಹೋರಾಟದಲ್ಲಿ ರಕ್ತಪಾತಗಳು ನಡೆದಿವೆ. ಆದರೆ ಭಾರತ ದೇಶಕ್ಕೆ
ಮಾತ್ರ ಸತ್ಯ ಹಾಗೂ ಅಹಿಂಸಾ ತತ್ವದಡಿ ಸ್ವಾತಂತ್ರ್ಯದೊರೆತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಾಲಗಂಗಾಧರ ತಿಲಕ್, ಭಗತ್‌ಸಿಂಗ್, ಸುಖದೇವ ಸೇರಿದಂತೆ ಲಕ್ಷಾಂತರ ತ್ಯಾಗ ಬಲಿದಾನ ಮರೆಯುವಂತಿಲ್ಲ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ರಾಜ್ಯದ ಸಹಸ್ರಾರು ದೇಶಭಕ್ತರು ತಮ್ಮ ಹೋರಾಟ ಮಾಡಿದ್ದಾರೆ. ಕಿತ್ತೂರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಹಲಗಲಿ ಬೇಡರು ಸೇರಿದಂತೆ ಹಲವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶಾಭಿಮಾನ ಮೆರೆದಿದ್ದಾರೆ. ಮೈಲಾರ ಮಹಾದೇವಪ್ಪ ಅವರ ಜೀವನ ಚರಿತ್ರೆ ಕೇಳಿದರೆ ರೋಮಾಂಚನವಾಗುತ್ತದೆ. ಅಹಿಂಸಾತ್ಮಕ ಹೋರಾಟ ಮೈಲಾರ ಮಹಾದೇವಪ್ಪ ಅವರ ಧ್ಯೇಯವಾಗಿತ್ತು,
ಬ್ರಿಟಿಷ್ಯರ ವಿರುದ್ಧ ಸಂಘಟನೆ ಮಾಡುತ್ತಿದ್ದರು ಹಾಗೂ ನೇರವಾಗಿ ಹೋರಾಟಮಾಡಿದರು. ಹುತಾತ್ಮ ಮೈಲಾರ ಮಹದೇವಪ್ಪನವರು ಜನಿಸಿದ ಈ ನಾಡಿನಲ್ಲಿ ನಾವು ಜನಿಸಿದ್ದು ಹೆಮ್ಮೆ ಎನಿಸುತ್ತದೆ.
ಇಂತಹ ಮಹಾನ್ ವ್ಯಕ್ತಿಗಳ ರಾಷ್ಟ್ರಾಭಿಮಾನ, ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟ, ತ್ಯಾಗ ಹಾಗೂ ಬಲಿದಾನದ ಇತಿಹಾಸ ಇಂದಿನ ಯುವಜನಾಂಗಕ್ಕೆ ಆದರ್ಶವಾಗಬೇಕು ಎಂದರು.
ಮೈಲಾರ ಮಹದೇವಪ್ಪ ಅವರು ಬ್ರಿಟಿಷ್ಯರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ತಮ್ಮ ಚಿಕ್ಕ ವಯಸ್ಸಿನಲ್ಲೆ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡರು. ರಾಷ್ಟ್ರಮಟ್ಟದವರೆಗೆ ತನ್ನ ಹೋರಾಟ ಹೆಜ್ಜೆಗುರುತುಗಳನ್ನು ಮೂಡಿಸಿದರು. ಮಹಾತ್ಮಗಾಂಧೀಜಿಯವರ
ನೇತೃತ್ವದಲ್ಲಿ ನಡೆದ ದಂಡಿಯಾತ್ರೆಯಲ್ಲಿ ಭಾಗವಹಿಸಿದ ೭೮ ಜನರಪೈಕಿ ಕರ್ನಾಟಕದಿಂದ ಭಾಗವಹಿಸಿದ ಏಕೈಕವ್ಯಕ್ತಿ ಮೈಲಾರ ಮಹದೇವಪ್ಪನವರು ಮಾತ್ರ ಎಂಬುದು ಹೆಮ್ಮೆಯ ವಿಚಾರ ಎಂದು ಹೇಳಿದರು. ಕೇಂದ್ರ ಸರ್ಕಾರ ಮೈಲಾರ ಮದೇವಪ್ಪನವರ ಅಂಚೆ
ಚೀಟಿ ಬಿಡುಗಡೆ ಮಾಡಿದೆ ಹಾಗೂ ಹಾವೇರಿ ರೈಲು ನಿಲ್ದಾಣಕ್ಕೆ ಮೈಲಾರ ಮದೇವಪ್ಪನವರ ಹೆಸರು ಇಡಲಾಗಿದೆ. ಗಾಂಧೀಜಿಯವರ ಮಾರ್ಗದಲ್ಲಿ ಹೆಜ್ಜೆಹಾಕಿದ ಅವರು ಕೊರಡೂರಿನಲ್ಲಿ ಆಶ್ರಮ ಆರಂಭಿಸಿದರು. ನಮ್ಮ ಸ್ವಚ್ಚಂದ ಬದುಕಿಗೆ ಸ್ವಾತಂತ್ರ್ಯ ಹೋರಾಟರರು ಕಾರಣಿಕರ್ತರಾಗಿದ್ದಾರೆ. ರಾಷ್ಟ್ರಕ್ಕಾಗಿ ನಿಸ್ವಾರ್ಥತೆಯಿಂದ ತಮ್ಮ ಜೀವವನ್ನೇ ತ್ಯಾಗಮಾಡಿದ ಸ್ವಾತಂತ್ರ್ಯ ಯೋಧರಾದ ಹುತಾತ್ಮ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ, ತಿರಕಪ್ಪ ಮಡಿವಾಳರ, ಹೊಸಮನಿ ಸಿದ್ಧಪ್ಪ, ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡ್ರ, ರಂತಹ ಸಹಸ್ರಾರು ಹುತಾತ್ಮರ ಜೀವನ ನಮ್ಮ ಯುವ ಪೀಳಿಗೆಗೆ ದಾರಿದೀಪವಾಗಿದೆ
ಹಾಗೂ ನಮ್ಮ ದೇಶದ ಭವ್ಯ ಪರಂಪರೆ, ಚರಿತ್ರೆ ಹಾಗೂ ಹೋರಾಟವನ್ನು ಇಂದಿನ ಜನಾಂಗಕ್ಕೆ ತಿಳಿಸಬೇಕಾಗಿದೆ ಎಂದರು.
ಯುವ ಸಮೂಹ ಈ ದೇಶದ ಶಕ್ತಿ, ದೇಶಕ್ಕಾಗಿ ಪ್ರಾಣಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು. ಹಿಂದಿನ ವೈಭವ ಹಾಗೂ ಮುಂದಿನ ಭವಿಷ್ಯದ ಸೇತುವೆಯಾಗಿ ಕೆಲಸ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವ
ಸಮೂಹ ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಹಾವೇರಿ ವಿಶ್ವ ವಿದ್ಯಾಲಯದ ಕುಲಪತಿ ಸುರೇಶ ಜಂಗಮಶೆಟ್ಟಿ ಅವರು ಮಾತನಾಡಿ, ಮೈಲಾರ ಮಹದೇವಪ್ಪನವರ ಸ್ವಾತಂತ್ರ್ಯ ಹೋರಾಟ ಚರಿತ್ರೆ ಎಲ್ಲರಿಗೂ ಮಾದರಿಯಾಗಿದೆ.
ಹಾವೇರಿ ವಿಶ್ವವಿದ್ಯಾಲಯದಲ್ಲಿ ಮೈಲಾರ ಮಹದೇವಪ್ಪ, ಸರ್ವಜ್ಞ, ಶಿಶುನಾಳ ಶರೀಫರ ಸೇರಿದಂತೆ ವಿವಿಧ ಮಹನೀಯ ಅಧ್ಯಯನ ಪೀಠ ಸ್ಥಾಪನೆಗೆ ಚಿಂತನೆ ಮಾಡಲಾಗುತ್ತಿದೆ. ಈ ಕುರಿತು ತಮ್ಮ ಸಲಹೆಗಳನ್ನು ವಿಶ್ವವಿದ್ಯಾಲಯಕ್ಕೆ ನೀಡಬಹುದು ಎಂದು ಹೇಳಿದರು.
ರಾಣೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಅವರು ಮೈಲಾರ ಮಹದೇವಪ್ಪನವರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದ ಕುರಿತು ಉಪನ್ಯಾಸ ನೀಡಿದರು.

ನಿವೃತ್ತ ಶಿಕ್ಷಕ ಸಿ.ಎಸ್. ಮರಳಿಹಳ್ಳಿ ಕವನ ವಾಚನ ಮಾಡಿದರು. ಅಡಿವೆಪ್ಪ ಕುರಿ, ಹನುಮಂತಪ್ಪ ದಾರವಾಡ, ಮಾರುತಿ ಬೆಟ್ಟಪ್ಪನವರ ಅವರು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಲಾವಣಿ ಹಾಗೂ ಗೀಗೀಪದಗಳನ್ನು ಹಾಡಿದರು. ಜಿ.ಜಿ. ಮೇಹಂದಳೆ ಅವರು
ಸಂಗ್ರಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಪ್ರದರ್ಶನ ಜರುಗಿತು.
ಪುಸ್ತಕ ಬಿಡುಗಡೆ: ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಹೊರತರಲಾದ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಯೋಧರ ಜ್ಯೋತಿ ಸ್ವಾಗತ : ಕೋಗನೂರು ಹಾಗೂ ಹೊಸರಿತ್ತಿ ಗ್ರಾಮಗಳಿಂದ ಆಗಮಿಸಿದ ಹುತಾತ್ಮ ಸ್ವಾತಂತ್ರ್ಯ ಯೋಧರ ಜ್ಯೋತಿಯನ್ನು ವೀರಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಗಣ್ಯರು ಸ್ವಾಗತಿಸಿಕೊಂಡರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್. ಟ್ರಸ್ಟ್‌ನ ಸದಸ್ಯರಾದ ಎಚ್.ಎಸ್. ಮಹಾದೇವ, ಸತೀಶ ಕುಲಕರ್ಣಿ,
ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಜಿ.ಪಂ.ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಜಾಬಿನ್, ಬಸವರಾಜ ಪೂಜಾರ, ತಹಶೀಲ್ದಾರ ಶ್ರೀಮತಿ ಶರಣಮ್ಮ, ಪ್ರಾಂಶುಪಾಲ ಮಂಜುನಾಥ ವಡ್ಡರ ಇತರರು ಉಪಸ್ಥಿತರಿದ್ದರು.
ಮಾಲಾರ್ಪಣೆ: ಕಾರ್ಯಕ್ರಮಕ್ಕೂ ಮೊದಲು ಹಾವೇರಿ ನಗರಸಭೆ ಎದುರಿಗೆ ಇರುವ ಹುತಾತ್ಮ ಮೈಲಾರ ಮಹದೇವಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮ ಜರುಗಿತು. ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್, ಉಪ ವಿಭಾಗಾಧಿಕಾರಿ ಚೆನ್ನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಎಚ್.ಎಸ್. ಮಹಾದೇವ ಇತರರು ಉಪಸ್ಥಿತರಿದ್ದರು.