ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕಟಣ ವಿರುದ್ದ ಧ್ವನಿ ಎತ್ತಿದ ಸಮೀರಗೆ ಸೂಕ್ತ ರಕ್ಷಣೆ ನೀಡಿ : ಲವಿತ್ರ ವಸ್ತ್ರದ
ವೀರಮಾರ್ಗ ನ್ಯೂಸ್ : ಹಾವೇರಿ : ಧರ್ಮಸ್ಥಳ ಪಕ್ಕದ ಪಾಂಗಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವನ್ನು ಮರು ತನಿಖೆ ಮಾಡಬೇಕು. ಈ ಕುರಿತು ಧ್ವನಿ ಎತ್ತಿದ ಯೂಟುಬರ್ ಸಮೀರ್ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ್ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಭಾನುವಾರ ನಡೆದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ೨೦೧೨ ರಲ್ಲಿ ನಡೆದ ಕುಮಾರಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನ್ಯಾಯ ಮರೀಚಿಕೆಯಾಗಿದ್ದು ಆಕೆಯ ಕುಟುಂಬದವರು ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯ ಸರಕಾರ ಈ ಕೇಸ್ ಅನ್ನು ಮರು ತನಿಖೆ ಮಾಡಿ ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕುವಂತೆ ಮಾಡಬೇಕು.
ಸೌಜನ್ಯ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡದೆ ಮುಚ್ಚಿಹಾಕಲಾಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿದ ಸಮೀರ್ ಮೇಲೆ ಪೋಲೀಸರು ಸೊಮೋಟೊ ಕೇಸ್ ಹಾಕಿದ್ದಾರೆ. ವಿಡಿಯೋ ಮೂಲಕ ಈ ಪ್ರಕರಣದ ವಾಸ್ತವತೆಯನ್ನು ಜನರೆದುರು ತರಲು ಪ್ರಯತ್ನಿಸಿದ ಸಮೀರ್ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿಯು ಆಗ್ರಹಿಸುತ್ತದೆ. ಅಲ್ಲದೇ ಸಮೀರ್ ಜೊತೆಗೆ ಡಿವೈಎಫ್ಐ ರಾಜ್ಯ ಸಮಿತಿಯು ನಿಲ್ಲುತ್ತದೆ. ನಾಡಿನ ಜೀವಪರ ಹಾಗೂ ಪ್ರಗತಿಪರ ಸಂಘಟನೆಗಳು ಸಮೀರ್ ಪರವಾಗಿ ನಿಲ್ಲಲು ಮನವಿ ಮಾಡುತ್ತದೆ.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವನ್ನು ಸಮಗ್ರ ತನಿಖೆಯಾಗಿ ಸತ್ಯ ಹೊರತಂದು ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಒತ್ತಾಯಿಸುವ ಬದಲಾಗಿ, ಈ ಪ್ರಕರಣವನ್ನು ಕೋಮು ರಾಜಕಾರಣದತ್ತ ತಿರುಚುತ್ತಿರುವುದದನ್ನು ಡಿವೈಎಫ್ಐ ತೀವ್ರವಾಗಿ ಖಂಡಿಸುತ್ತದೆ. ಎಲ್ಲಿ ಕೋಮುರಾಜಕಾರಣ ಶುರುವಾಗುತ್ತದೋ ಅಲ್ಲಿ ನ್ಯಾಯ ಮರೆಮಾಚುತ್ತದೆ. ಯಾವುದೇ ಅನ್ಯಾಯ, ಅತ್ಯಾಚಾರ, ಕೊಲೆ ಘಟನೆಗಳನ್ನು ಕೋಮುಭಾವನೆಯಿಂದ ನೋಡದೇ, ಶಿಕ್ಷೆಗೆ ಒಳಪಡಿಸುವ ಅಪರಾಧವಾಗಿ ನೋಡಬೇಕು ಎಂದರು.

ಸೌಜನ್ಯ ಪ್ರಕರಣದಲ್ಲಿ ಕೋಮು ರಾಜಕಾರಣ ಮಾಡದೇ ಅವಳ ಕುಟುಂಬಕ್ಕೆ ನ್ಯಾಯ ಸಿಗುವಂತಾಗಲು ಪ್ರಕರಣದ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಬೇಕು. ಈ ಕುರಿತು ಬೆಳಕು ಚೆಲ್ಲಿ ಮನೆಮಾತಾದ ಸಮೀರ್ ಮೇಲಿನ ಸೊಮೋಟೊ ಕೇಸ್ ಅನ್ನು ರಾಜ್ಯ ಸರಕಾರ ಹಿಂಪಡೆಯಬೇಕು ಹಾಗೂ ಸಮೀರ್ ಮತ್ತವನ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ಇಲ್ಲವಾದಲ್ಲಿ ನಾಡಿನಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಸಮಿತಿ ಪದಾಧಿಕಾರಿಗಳಾದ ಸಂತೋಷ ಬಜಾಲ್, ಪೃಥ್ವಿ ಎಂ.ಜಿ, ಯು. ಯರ್ರಿಸ್ವಾಮಿ, ವಿ.ಸ್ವಾಮಿ, ನಾರಾಯಣ ಎಸ್. ಕೆ, ರೇಣುಕಾ ಪಿ.ಕೆ, ಈಡಿಗರ ಮಂಜುನಾಥ, ಎಚ್. ಸ್ವಾಮಿ, ಜ್ಯೋತಿ ಪಿ ಸೇರಿದಂತೆ ಇತರರು ಇದ್ದರು.