ಆದಿಚುಂಚನಗಿರಿ ಮಠದ ಜಮೀನಿಗೆ ಕನ್ನ: ಸತ್ತವರ ಹೆಸರಲ್ಲಿ ಸ್ಕೆಚ್, 6 ಸರ್ಕಾರಿ ಅಧಿಕಾರಿಗಳು ಸೇರಿ 11 ಮಂದಿ ಅರೆಸ್ಟ್!
ವೀರಮಾರ್ಗ ನ್ಯೂಸ್ : ಲಕ್ಷಾಂತರ ಭಕ್ತರ ಆರಾಧ್ಯ ದೈವ ಆದಿಚುಂಚನಗಿರಿ ಮಠದ ಕೋಟ್ಯಂತರ ಮೌಲ್ಯದ ಆಸ್ತಿಗೆ ಕನ್ನ ಹಾಕಲು ಹೋಗಿದ್ದ ಖದೀಮರ ಜಾಲ ಖಾಕಿ ಬಲೆಗೆ ಬಿದ್ದಿದೆ. ಸಿನಿಮೀಯ ಶೈಲಿಯಲ್ಲಿ ನಕಲಿ ವಾರಸುದಾರರನ್ನು ಸೃಷ್ಟಿಸಿ, ಕಂದಾಯ ಇಲಾಖೆಯ ಲಂಚಬಾಕ ಅಧಿಕಾರಿಗಳ ಜೊತೆ ಕೈಜೋಡಿಸಿ ಮಠದ ಜಮೀನನ್ನೇ ನುಂಗಲು ಯತ್ನಿಸಿದ್ದ ಭ್ರಷ್ಟರ ಆಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. 6 ಜನ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ಆದಿಚುಂಚನಗಿರಿ ಮಠಕ್ಕೆ ಭಕ್ತರೊಬ್ಬರು ಕಾಣಿಕೆ ರೂಪದಲ್ಲಿ ನೀಡಿದ್ದ 45 ಎಕರೆ ಜಮೀನಿನ ಮೇಲೆ ಈ ಖದೀಮರ ಕಣ್ಣು ಬಿದ್ದಿತ್ತು. ಇದರಲ್ಲಿ ಅತ್ಯಂತ ಪ್ರಮುಖವಾದ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ 6 ಎಕರೆ ಜಮೀನನ್ನು ಕಬಳಿಸಲು ಈ ಗ್ಯಾಂಗ್ ಸ್ಕೆಚ್ ಹಾಕಿತ್ತು. ತುಮಕೂರು ಮೂಲದ ವ್ಯಕ್ತಿಯೊಬ್ಬನ ಜೊತೆಗೂಡಿ ಈ ಗ್ಯಾಂಗ್ ಇಡೀ ಮಠದ ಆಸ್ತಿಯನ್ನೇ ನಕಲಿ ದಾಖಲೆಗಳ ಮೂಲಕ ತನ್ನದಾಗಿಸಿಕೊಳ್ಳಲು ಸಂಚು ರೂಪಿಸಿತ್ತು.
ಸಮಾಧಿ ಹುಡುಕಿ, ವಂಶವೃಕ್ಷ ಸೃಷ್ಟಿಸಿದ ಕಿಲಾಡಿಗಳು!
ಜಮೀನು ಕಬಳಿಸಲು ಈ ಗ್ಯಾಂಗ್ ನಡೆಸಿದ ಪ್ಲಾನ್ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಮೊದಲಿಗೆ ಜಮೀನಿನ ಮೂಲ ಮಾಲೀಕರ ಹೆಸರನ್ನೇ ಹೋಲುವ ಮತ್ತೊಬ್ಬ ವ್ಯಕ್ತಿಯ ಪತ್ತೆಗೆ ಜಾಲ ಬೀಸಿದ್ದಾರೆ. ಕೊನೆಗೆ ಸ್ಮಶಾನವೊಂದರಲ್ಲಿ ಮೂಲ ಮಾಲೀಕ ಆರೋಗ್ಯ ಸ್ವಾಮಿ ಹೆಸರಿನ ಮತ್ತೊಬ್ಬ ವ್ಯಕ್ತಿಯ ಸಮಾಧಿಯನ್ನು ಪತ್ತೆಹಚ್ಚಿದ್ದಾರೆ. ಮೃತ ವ್ಯಕ್ತಿಯ ಹೆಸರು ಮತ್ತು ಮೂಲ ಮಾಲೀಕನ ವಯಸ್ಸು ಮ್ಯಾಚ್ ಆಗಿದ್ದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ತಕ್ಷಣವೇ ಸಮಾಧಿ ಮೇಲಿನ ಹೆಸರನ್ನು ಆಧರಿಸಿ ಮೃತನ ಮಕ್ಕಳನ್ನು ಸಂಪರ್ಕಿಸಿದ್ದಾರೆ. ಮೃತನ ಮಕ್ಕಳು ತಾವೇ ಎಂದು ಬಿಂಬಿಸಲು ಫ್ರಾನ್ಸಿಸ್ ಹಾಗೂ ಜೋಸ್ವಾನ್ ಎಂಬುವವರನ್ನು ಅಣ್ಣ-ತಂಗಿ ಎಂದು ತೋರಿಸಿ ನಕಲಿ ವಂಶವೃಕ್ಷವನ್ನೇ ಸೃಷ್ಟಿ ಮಾಡಿದ್ದಾರೆ.
ನಕಲಿ ದಾಖಲೆ ಸಿದ್ಧವಾದ ಬೆನ್ನಲ್ಲೇ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಇವರ ನೆರವಿಗೆ ನಿಂತಿದ್ದಾರೆ. ಬೇಗೂರು ವಿಲೇಜ್ ಅಕೌಂಟೆಂಟ್ ಶಿವಪ್ರಸಾದ್, ರೆವಿನ್ಯೂ ಇನ್ಸ್ಪೆಕ್ಟರ್ ಕಿರಣ್ ಹಾಗೂ ಡೆಪ್ಯೂಟಿ ತಹಶೀಲ್ದಾರ್ ದೀಪಕ್ ಭಾರಿ ಪ್ರಮಾಣದ ಹಣ ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಈ ನಕಲಿ ದಾಖಲೆಗಳನ್ನು ಆಧರಿಸಿ ಕೆಂಗೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸದೇ ಪೌತಿ ಖಾತೆ ಮಾಡಿಕೊಟ್ಟಿದ್ದಾರೆ. ಖಾತೆ ಕೈಗೆ ಸಿಗುತ್ತಿದ್ದಂತೆ ಆರೋಪಿಗಳು ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡು ಬೇರೊಬ್ಬರಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾರೆ.
ಜಮೀನು ಕೈತಪ್ಪಿ ಹೋಗಿರುವ ವಿಚಾರ ತಡವಾಗಿ ಆದಿಚುಂಚನಗಿರಿ ಮಠದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ತಕ್ಷಣವೇ ಮಠದ ವತಿಯಿಂದ ಕುಂಬಳಗೋಡು ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಂಗೇರಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡರು. ತನಿಖೆ ನಡೆಸಿದಾಗ ಕಂದಾಯ ಇಲಾಖೆಯ ಅಧಿಕಾರಿಗಳ ಶಾಮೀಲಾತಿ ಮತ್ತು ನಕಲಿ ವಂಶವೃಕ್ಷ ಸೃಷ್ಟಿಸಿರುವ ಮಹಾ ವಂಚನೆ ಬಯಲಾಗಿದೆ. ಸದ್ಯ 11 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.
ದೇವರ ಜಾಗಕ್ಕೂ ಕನ್ನ ಹಾಕಲು ಹಿಂಜರಿಯದ ಇಂದಿನ ಕಲಿಯುಗದ ಖದೀಮರು ಮತ್ತು ಅವರಿಗೆ ಸಾಥ್ ನೀಡಿದ ಸರ್ಕಾರಿ ಅಧಿಕಾರಿಗಳ ಮುಖವಾಡ ಕೊನೆಗೂ ಕಳಚಿದೆ. ಸದ್ಯ ಕುಂಬಳಗೋಡು ಪೊಲೀಸರು ಪ್ರಕರಣದ ಆಳ-ಅಗಲದ ತನಿಖೆಯನ್ನು ತೀವ್ರಗೊಳಿಸಿದ್ದು, ಕಂದಾಯ ಇಲಾಖೆಯಲ್ಲಿ ಇಂತಹ ಇನ್ನೂ ಎಷ್ಟು ನಕಲಿ ಖಾತೆಗಳ ಹಗರಣಗಳು ನಡೆದಿವೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.
ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ!!
ವರದಿ : ಚನ್ನೇಶ, ಬೆಂಗಳೂರು.