ಕೆ.ಆರ್.ಪೇಟೆಯಲ್ಲಿ ಬಾಲ್ಯ ವಿವಾಹ ಮುಕ್ತ ಬೃಹತ್ ಜಾಗೃತಿ ಜಾಥ, ಬಾಲ್ಯ ವಿವಾಹ ವಿರೋಧಿಸಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ. ಸಾವಿರಾರು ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಜಾಥಾದಲ್ಲಿ ಭಾಗಿ, ಮೊಳಗಿದ ಘೋಷಣೆಗಳು.
ವೀರಮಾರ್ಗ ನ್ಯೂಸ್ : K R PETE : ಬಾಲ್ಯ ವಿವಾಹ ಪದ್ಧತಿಯು ಸಾಮಾಜಿಕ ಅನಿಷ್ಟ ಪದ್ಧತಿಯಾಗಿದ್ದು, ನಾಗರೀಕ ಸಮಾಜಕ್ಕೆ ಅಂಟಿರುವ ಶಾಪವಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಆನಂದ್ ಹೇಳಿದರು.
ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್’ನ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಕೆ.ಆರ್.ಪೇಟೆ ತಾಲೂಕು ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಬೃಹತ್ ಜಾಗೃತಿ ಜಾಥಾ ಮತ್ತು ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
18 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ಬಾಲ್ಯ ವಿವಾಹ ನಡೆಸುವುದು ಶಿಕ್ಷಾರ್ಹ ಅಪರಾಧವಾಗಿದೆ. ನಮ್ಮ ಊರು, ನಮ್ಮ ಜಿಲ್ಲೆ ಹಾಗೂ ನಮ್ಮ ರಾಜ್ಯವನ್ನು ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿಸುವ ದಿಶೆಯಲ್ಲಿ ನಾಗರಿಕ ಸಮಾಜದಲ್ಲಿ ವಾಸ ಮಾಡುವ ನಾವೆಲ್ಲರೂ ಒಂದಾಗಿ ಸಾಮಾಜಿಕ ಅನಿಷ್ಟ ಪಿಡುಗಾಗಿ ಪರಿಣಮಿಸಿರುವ ಬಾಲ್ಯ ವಿವಾಹ ಪದ್ದತಿಯನ್ನು ಬೇರು ಸಮೇತ ಕಿತ್ತುಹಾಕಲು ಸಮಾಜದಲ್ಲಿ ವಾಸ ಮಾಡುವ ಎಲ್ಲ ವರ್ಗಗಳ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ ನ್ಯಾಯಾಧೀಶರಾದ ಆನಂದ್ ಆಟ ಪಾಠ ಮಾಡಿಕೊಂಡು ಸಂತೋಷದಿಂದ ಕಾಲ ಕಳೆಯಬೇಕಾದ ಅಪ್ರಾಪ್ತ ಹೆಣ್ಣು ಮಕ್ಕಳನ್ನು ವಿವಾಹದ ಬಂಧನಕ್ಕೆ ಸಿಲುಕಿಸಿ ತೊಂದರೆ ನೀಡುವುದು ಸರಿಯಾದ ಕ್ರಮವಲ್ಲ ಅಪ್ರಾಪ್ತ ಹೆಣ್ಣುಮಗಳು ಮಾನಸಿಕವಾಗಿ ಇನ್ನೂ ಪ್ರಬುದ್ಧಗೊಳ್ಳದೇ ಆಕೆಯ ದೇಹ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುವುದರಿಂದ ನಾವೆಲ್ಲರೂ ಒಂದಾಗಿ ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪಣತೊಡೋಣ ಎಂದು ನ್ಯಾಯಾಧೀಶರಾದ ಆನಂದ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಮಿಕ್ಕೆರೆ ವೆಂಕಟೇಶ್ ಅವರು ಮಾತನಾಡಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನಲ್ಲಿ ಬಾಲ್ಯ ವಿವಾಹದಂತ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಮಕ್ಕಳ ಸಹಾಯವಾಣಿ ಘಟಕಕ್ಕೆ ನೂರಕ್ಕೂ ಹೆಚ್ಚು ದೂರುಗಳು ಬಂದಿವೆ. ನಾಗರೀಕ ಸಮಾಜದಲ್ಲಿ ಎಂದು ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಡುತ್ತಿದ್ದು ಹೆಣ್ಣು ಬ್ರೂಣ ಹತ್ಯೆಯಂತಹ ಪ್ರಕರಣಗಳು ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿವೆ. ನಾಗರಿಕ ಸಮಾಜದಲ್ಲಿ ಹಿಂದೂ ಹೆಣ್ಣು ಗಂಡಿನ ಜನನ ಪ್ರಮಾಣದ ಅನುಪಾತದಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸಮಾಜದಲ್ಲಿ ಏರುಪೇರು ಉಂಟಾಗಲಿದೆ. ಸಮಾಜದಲ್ಲಿನ ಶಕ್ತಿಯ ಪ್ರತೀಕವಾಗಿರುವ ಹೆಣ್ಣು ಮಕ್ಕಳ ಮೇಲೆ ದಬ್ಬಾಳಿಕೆ ದೌರ್ಜನ್ಯದಂತ ಪ್ರಕರಣಗಳು ಪ್ರತಿನಿತ್ಯವೂ ನಡೆಯುತ್ತಿವೆ. 18 ವರ್ಷದೊಳಗಿನ ಅಪ್ರಾಪ್ತ ಹೆಣ್ಣು ಮಕ್ಕಳನ್ನು ವಿವಾಹ ಬಂಧನದೊಳಗೆ ಸಿಲುಕಿಸಿ, ಮುಗ್ಧ ಮನಸ್ಸಿನ ಹೆಣ್ಣು ಮಕ್ಕಳನ್ನು ವಿವಾಹ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಎಂದು ಎಚ್ಚರಿಕೆ ನೀಡಿದ ವೆಂಕಟೇಶ್, ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ನಿಶ್ಚಯಿಸಿ ನಿಶ್ಚಿತಾರ್ಥ ಹಾಗೂ ಮದುವೆ ಮಾಡುವುದು ಪ್ರಕರಣಗಳು ಕಂಡು ಬಂದರೆ ಕೂಡಲೇ ಮಕ್ಕಳ ಹಕ್ಕುಗಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ವೆಂಕಟೇಶ್ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ದಂಡಾಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ತಹಶೀಲ್ದಾರ್ ಡಾ.ಅಶೋಕ್ ಮಾತನಾಡಿ ನಾಗರೀಕ ಸಮಾಜಕ್ಕೆ ಶಾಪವಾಗಿರುವ ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ಮಹಿಳಾ ಸಂಘಟನೆಗಳು ಸೇರಿದಂತೆ ನಾಗರೀಕ ಸಮಾಜದಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಕೈಜೋಡಿಸಿ ಕೆಲಸ ಮಾಡಬೇಕು. ನಾಗರೀಕ ಸಮಾಜದ ಧೀಶಕ್ತಿಯಾಗಿರುವ ಹೆಣ್ಣು ಮಕ್ಕಳನ್ನು ಗೌರವಿಸುವ, ಶಿಕ್ಷಣದ ಹಕ್ಕನ್ನು ಕೊಡಿಸಿ ಸಮಾಜಮುಖಿಯಾಗಿ ಮುನ್ನಡೆಸುವ ಕೆಲಸವನ್ನು ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ, ಆದ್ದರಿಂದ ಆಶಾ, ಅಂಗನವಾಡಿ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆಗೆ ಮುಂದಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೆ.ಆರ್.ಪೇಟೆ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸುಧೀರ್, ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಆರ್. ದೇವರಾಜು, ಕೆ.ವಿ.ಅರ್ಪಿತ, ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಶ್ಮಿ, ತಾಲೂಕು ಪಂಚಾಯಿತಿ ಕಾಯನಿರ್ವಾಹಕ ಅಧಿಕಾರಿ ಕೆ. ಸುಷ್ಮಾ, ಪುರಸಭೆ ಮುಖ್ಯ ಅಧಿಕಾರಿ ನಟರಾಜು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾವತಿ ಓಂಕಾರಗೌಡ ಪಾಟೀಲ್, ಆರಕ್ಷಕ ನಿರೀಕ್ಷಕರಾದ ಸುಮಾರಾಣಿ, ಆನಂದೇಗೌಡ, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಗೋರವಾಲೆ ನಾಗರಾಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪುಲಿಗೆರೆಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಗೌಡ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಬಿ.ಧನಲಕ್ಷ್ಮೀ ಮತ್ತಿತರರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆ.ಆರ್.ಪೇಟೆ ಪಟ್ಟಣದ ತಾಲೂಕು ಆಡಳಿತ ಕಾರ್ಯ ಸೌಧದ ಆವರಣದಿಂದ ಆರಂಭವಾದ ಬಾಲ್ಯ ವಿವಾಹ ಮುಕ್ತ ಬೃಹತ್ ಜಾತ ಕಾರ್ಯಕ್ರಮವು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಾಗಿ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಕ್ತಾಯಗೊಂಡಿತು. ಇದೇ ಸಂದರ್ಭದಲ್ಲಿ ದುಶ್ಚಟ ಮುಕ್ತ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣ ಮಾಡುತ್ತೇವೆ ಎಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.