ಪರಿಷತ್‌ನ 4 ಸ್ಥಾನ ಭರ್ತಿಗೆ ಕಸರತ್ತು : ಇಂದು ಸಿಎಂ ದೆಹಲಿಗೆ

ಪರಿಷತ್‌ನ 4 ಸ್ಥಾನ ಭರ್ತಿಗೆ ಕಸರತ್ತು : ಇಂದು ಸಿಎಂ ದೆಹಲಿಗೆ
ವೀರಮಾರ್ಗ ನ್ಯೂಸ್ ಬೆಂಗಳೂರು :
ರಾಜ್ಯ ವಿಧಾನಪರಿಷತ್‌ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗಿರುವ ಸಿಎಂ ಸಿದ್ಧರಾಮಯ್ಯ ಅವರು ಈ ಸಂಬಂಧ ವರಿಷ್ಠರೊಡನೆ ಚರ್ಚಿಸಲು ಇಂದು ದೆಹಲಿಗೆ ತೆರಳುವರು.
ಕಾಲಿನ ಮೂಳೆ ಮುರಿತದಿಂದ ಕಳೆದ ಎರಡು ತಿಂಗಳಿಂದ ಬೆಂಗಳೂರನ್ನು ಬಿಟ್ಟು ಹೊರಡಗೆ ಎಲ್ಲೂ ಹೋಗದೆ ಇದ್ದ ಸಿಎಂ ಸಿದ್ಧರಾಮಯ್ಯ ಅವರು ಬಹುದಿನಗಳ ನಂತರ ಇಂದು ದೆಹಲಿಗೆ ತೆರಳುತ್ತಿದ್ದಾರೆ.
ವಿಧಾನಪರಿಷತ್‌ನ ನಾಲ್ಕು ನಾಮನಿರ್ದೇಶನಗಳ ಸ್ಥಾನಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ವರಿಷ್ಠರೊಂದಿಗೆ ಚರ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ದೆಹಲಿ ಯಾತ್ರೆ ಕೈಗೊಂಡಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನಿಂದ ದೆಹಲಿಗೆ ಸಿಎಂ ಸಿದ್ಧರಾಮಯ್ಯ ಅವರು ತೆರಳಲಿದ್ದು, ನಾಡಿದ್ದು ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವರನ್ನು ಭೇಟಿ ಮಾಡಿ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಯಾರನ್ನು ನಾಮನಿರ್ದೇಶನ ಮಾಡಬೇಕು ಎಂಬುದನ್ನು ಚರ್ಚಿಸಿ ಅಂತಿಮ ತೀರ್ಮಾನ ಮಾಡುವರು.

ಈ ಹಿಂದೆ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಮುಖ್ಮಯಂತ್ರಿ ಸಿದ್ಧರಾಮಯ್ಯ ಅವರನ್ನು ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿಗಳ ನಿವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಪ್ರಾಥಮಿಕವಾಗಿ ಪರಿಷ್ತನ ನಾಮನಿರ್ದೇಶನದ ಬಗ್ಗೆ ಚರ್ಚೆಗಳು ನಡೆದಿದ್ದವು.
ಆರೋಗ್ಯ ಸುಧಾರಣೆ ನಂತರ ದೆಹಲಿಗೆ ಬನ್ನಿ ಅಲ್ಲಿಯೇ ಎಲ್ಲವನ್ನು ಅಂತಿಮಗೊಳಿಸೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಹೇಳಿದ್ದರು. ಅದರಂತೆ ಸಿಎಂ ಸಿದ್ಧರಾಮಯ್ಯ ಅವರು ಇಂದು ದೆಹಲಿಗೆ ತೆರಳುತ್ತಿದ್ದು, ಅಲ್ಲಿಯೇ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ಪರಿಷತ್ ನಾಮನಿರ್ದೇಶನ ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸುವರು.
ಆಕಾಂಕ್ಷಿಗಳ ಲಾಬಿ : ಮುಖ್ಯಮಂತ್ರಿಗಳ ದೆಹಲಿ ಯಾತ್ರೆ ಬೆನ್ನಲ್ಲೆ ವಿಧಾನಪರಿಷತ್‌ನ ನಾಮನಿರ್ದೇಶನ ಸದಸ್ಯರಾಗಲು ತುದಿಗಾಲ ಮೇಲೆ ನಿಂತಿರುವ ನೂರಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಪರಿಷತ್ ಸ್ಥಾನ ಗಿಟ್ಟಿಸಲು ಈಗಾಗಲೇ ಲಾಬಿ ನಡೆಸಿದ್ದು, ಮುಖ್ಯಮಂತ್ರಿಗಳ ದೆಹಲಿ ಭೇಟಿ ಮಾಹಿತಿ ಸಿಗುತ್ತಿದ್ದಂತೆಯೇ ಈ ಆಕಾಂಕ್ಷಿಗಳು ಸಹ ದೆಹಲಿ ಯಾತ್ರೆ ಕೈಗೊಂಡಿದ್ದಾರೆ.
ಮುಖ್ಯಮಂತ್ರಿಗಳು ನಾಳೆ ದೆಹಲಿಗೆ ತೆರಳುತ್ತಿದ್ದು ಇಂದೇ ಹಲವು ಪರಿಷತ್ ಸ್ಥಾನದ ಆಕಾಂಕ್ಷಿಗಳು, ಕಾಂಗ್ರೆಸ್ ಮುಖಂಡರು ದೆಹಲಿಗೆ ತೆರಳಿದ್ದಾರೆ.
ಸಣ್ಣ ಸಮುದಾಯಗಳಿಗೆ ಆದ್ಯತೆ : ಪರಿಷತ್‌ನಲ್ಲಿ ಖಾಲಿ ಇರುವ ನಾಲ್ಕ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷ ಪ್ರಬಲ ಜಾತಿ ಸಮುದಾಯಗಳಿಗೆ ಮಣೆ ಹಾಕದೆ ಅವಕಾಶ ವಂಚಿತ ಸಣ್ಣ ಸಣ್ಣ ಸಮುದಾಯಗಳ ಮುಖಂಡರುಗಳಿಗೆ ಪರಿಷತ್ ನಾಮನಿರ್ದೇಶನ ಮಾಡಬೇಕು ಎಂಬ ಒತ್ತಾಯವು ಕಾಂಗ್ರೆಸ್‌ನಲ್ಲಿ ಕೇಳಿ ಬಂದಿವೆ.
ಜೈನ ಸಮುದಾಯವು ಸಹ ತಮ್ಮ ಸಮುದಾಯದ ಮುಖಂಡರನ್ನು ನಾಮ ನಿರ್ದೇಶನ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದೆಲ್ಲರದ ಮಧ್ಯೆ ಹಲವು ಮುಖಂಡರುಗಳು ಪರಿಷತ್ ನಾಮನಿರ್ದೇಶನಗೊಳ್ಳಲು ಹೈಕಮಾಂಡ್ ಮಟ್ಟದಲ್ಲಿ ತಮ್ಮ ಗಾಡ್ ಫಾದರ್‌ಗಳ ಮೂಲಕ ಲಾಬಿ ನಡೆಸಿದ್ದಾರೆ.


ಮಾಜಿ ಸಚಿವರಾದ ಬಿ. ಎಲ್. ಶಂಕರ್, ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪರಾಭವಗೊಂಡ ಸ್ಟಾರ್ ಚಂದ್ರು, ವಿನಯ್ ಕಾರ್ತಿಕ್, ಆರತಿ ಕೃಷ್ಣ, ಹೆಚ್.ಎಂ. ರೇವಣ್ಣ, ರಮೇಶ್ ಬಾಬು, ವಿ.ಎಸ್. ಉಗ್ರಪ್ಪ, ಶಿವರಾಜ್ ಹೆಗಡೆ, ಪಿ ಆರ್. ರಮೇಶ್ ರಾಜು ಹಲಗೂರು, ಪುಷ್ಪ ಅಮರನಾತ್, ಕಾಂತಾನಾಯ್ಕ, ಯು.ಬಿ. ವೇಂಕ್ಟೇಶ್ ವಿಜಯ್ ಮುಲಗುಂದ, ರತ್ನಪ್ರಭ, ಸಾಧುಕೋಕಿಲ, ಆಗಾ ಸುಲ್ತಾನ್, . ಆನಂದ್‌ಕುಮಾರ್, ಕೆಪಿಸಿಸಿ ಕಚೇರಿ ಕಾರ್ಯದರ್ಶಿ ಎಲ್. ನಾರಾಯಣ್, ವಿ.ಆರ್. ಸುದರ್ಶನ್ ಸೇರಿದಂತೆ ಹಲವು ನಾಯಕರುಗಳು ಪರಿಷತ್ ಸ್ಥಾನದ ಆಕಾಂಕ್ಷಿಗಳಾಗಿದ್ದು, ಈಗಾಗಲೇ ಇವರಲ್ಲಿ ಬಹುತೇಕರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು ಮುಖ್ಯಮಂತ್ರಿ ಸಿದ್ಧಱಾಮಯ್ಯ ಅವರ ಭೇಟಿ ಸಂದರ್ಭದಲ್ಲಿ ಹೈಕಮಾಂಡ್‌ನಿಂದ ಪರಿಷತ್ ಸ್ಥಾನ ಗಿಟ್ಟಿಸಲು ಎಲ್ಲರೀತಿಯ ಪ್ರಯತ್ನ ನಡೆಸುವರು.
ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ : ಸಿಎಂ ಸಿದ್ಧರಾಮಯ್ಯ ಅವರ ದೆಹಲಿ ಭೇಟಿ ಬೆನ್ನಲ್ಲೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಇಂದು ದೆಹಲಿಗೆ ತೆರಳುವರು.
ದೆಹಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಭವನದ ಉದ್ಘಾಟನಾ ಕಾರ್ಯಮಕ್ರದಲ್ಲಿ ಮುಖ್ಯಮಂತ್ರಿಗಳ ಜತೆ ಭಾಗಿಯಾಗಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ದೆಹಲಿಗ ತೆರಳಲಿದ್ದಾರೆ.
ದೆಹಲಿಗೆ ತೆರಳುವ ಡಿ.ಕೆ. ಶಿವಕುಮಾರ್ ಅವರೊಂದಿಗೂ ವರಿಷ್ಠರು ಪರಿಷತ್‌ನ ನಾಮನಿರ್ದೇಶನ ಸ್ಥಾನಗಳ ಭರ್ತಿ ಸಂಬಂಧ ಚರ್ಚೆ ನಡೆಸಲು ಎಂದು ಹೇಳಲಾಗಿದೆ.
ಕರ್ನಾಟಕ ಭವನ ಇಂದು ಉದ್ಘಾಟನೆ : ನವದೆಹಲಿಯ ಚಾಣುಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಲು ಕರ್ನಾಟಕ ಭವನದ ಉದ್ಘಾಟನೆ ನಾಳೆ ಸಂಜೆ ನಡೆಯಲಿದೆ.
ಸಿಎಂ ಸಿದ್ಧರಾಮಯ್ಯ ಅವರು ಕರ್ನಾಟಕ ಭವನದ ನೂತನ ಕಟ್ಟಡದ ಉದ್ಘಾಟನೆ ನಡೆಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಸಂಸದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವರು.
ನೂತನ ಕರ್ನಾಟಕದ ಭವನದಲ್ಲಿ ಗಣ್ಯಾತೀಗಣ್ಯರ ವಾಸ್ತವ್ಯಕ್ಕಾಗಿ ಸುಸಜ್ಜಿತ ೫೦ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕರ್ನಾಟಕದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ರಾಜ್ಯಪಾಲರು, ಸಚಿವರುಗಳು ಹೈಕೋರ್ಟ್ ನ್ಯಾಯಮೂರ್ತಿಗಳು ದೆಹಲಿಗೆ ಭೇಟಿ ನೀಡಿದಾಗ ಅವರ ವಾಸ್ತವ್ಯಕ್ಕಾಗಿ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಇಂದು ನೂತನ ಕರ್ನಾಟಕ ಭವನದ ಲೋಕಾರ್ಪಣೆ ನಡೆಯಲಿದೆ.

Leave a Reply

Your email address will not be published. Required fields are marked *