ಬೆಲೆ ಏರಿಕೆ ವಿರುದ್ಧ ಹೋರಾಟ : ಬಿವೈವಿ
ವೀರಮಾರ್ಗ ನ್ಯೂಸ್ ತುಮಕೂರು : ರಾಜ್ಯದ ಜನರಿಗೆ ಬೆಲೆ ಏರಿಕೆಯ ಹೊರೆ ಹಾಕುವ ಮೂಲಕ ಬರೆ ಎಳೆಯುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿವತಿಯಿಂದ ಎರಡು ಹಂತದಲ್ಲಿ ದೊಡ್ಡಮಟ್ಟದ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೮ನೇ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ. 2 ರಂದು ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ದ ಅಹೋರಾತ್ರಿ ಧರಣಿ ಹಾಗೂ ಏ. 7 ರಂದು ಮೈಸೂರಿನಿಂದ ಜನಾಕ್ರೋಶ ಯಾತ್ರೆ ಕೈಗೊಳ್ಳುತ್ತಿರುವುದಾಗಿ ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಕಳೆದ 20 ತಿಂಗಳಲ್ಲಿ ಬೆಲೆ ಏರಿಕೆ ಭಾಗ್ಯವನ್ನು ನಿರಂತರವಾಗಿ ದಯಪಾಲಿಸಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದ್ದು, ಕುಟುಂಬಗಳನ್ನು ನಿರ್ವಹಿಸಲು ಪರದಾಡುವಂತಾಗಿದೆ.
ಈಗಾಗಲೇ ಹಾಲಿನ ದರ, ಪೆಟ್ರೋಲ್-ಡೀಸೆಲ್ ದರ, ಸ್ಟಾಂಪ್ ಡ್ಯೂಟಿ, ನೀರಿನ ದರ, ವಿದ್ಯುತ್ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಇದರ ವಿರುದ್ದ ಏ. 2 ರಂದು ಮೊದಲನೇ ಹಂತದ ಹೋರಾಟವನ್ನು ಕೈಗೆತ್ತಿಕೊಳ್ಳುತ್ತಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವುದಾಗಿ ಹೇಳಿದರು.
ಈ ಹೋರಾಟದಲ್ಲಿ ಪಕ್ಷದ ಎಲ್ಲ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದರು.

ಮೈಸೂರಿನಿಂದ ಜನಾಕ್ರೋಶ ಯಾತ್ರೆ : ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಜನತೆಗೆ ತಿಳಿಸಲು ಹಾಗೂ ಮುಸ್ಲಿಂರಿಗೆ ಶೇ. 4 ರಷ್ಟು ಮೀಸಲಾತಿಯನ್ನು ಸರ್ಕಾರಿ ಕಾಮಗಾರಿಯಲ್ಲಿ ನೀಡಿರುವುದನ್ನು ವಿರೋಧಿಸಿ ಏ. 7 ರಂದು ಮೈಸೂರಿನಿಂದ ಜನಾಕ್ರೋಶ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಅಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಈ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು.
ಮೈಸೂರಿನಿಂದ ಆರಂಭವಾಗುವ ಈ ಜನಾಕ್ರೋಶ ಯಾತ್ರೆ ಪ್ರತಿ ಜಿಲ್ಲೆಗಳಿಗೂ ತೆರಳಿ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಹೋರಾಟ ನಡೆಸಲಾಗುವುದು. ಈ ಯಾತ್ರೆಯಲ್ಲಿ ಪಕ್ಷದ ಎಲ್ಲ ಹಂತದ ನಾಯಕರುಗಳು, ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸಲ್ಮಾನರಿಗೆ ಶೇ. ೪ ರಷ್ಟು ಸರ್ಕಾರಿ ಕಾಮಗಾರಿಯಲ್ಲಿ ಮೀಸಲಾತಿ ನೀಡಿರುವುದು ಸಂಪೂರ್ಣ ಸಂವಿಧಾನ ವಿರೋಧಿ ನಡೆಯಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಸುಮಾರು 38 ಕೋಟಿ ರೂ.ಗಳನ್ನು ಬೇರೆ ಬೇರೆ ಕಾರ್ಯಗಳಿಗೆ ವರ್ಗಾವಣೆ ಮಾಡುವ ಶೋಷಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಒಂದು ಕೈಯಿಂದ ಕೊಟ್ಟು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ. ಇದರಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಈ ಸರ್ಕಾರ ಮನುಷ್ಯ ಸೇವಿಸುವ ಗಾಳಿಗೆ ತೆರಿಗೆ ಹಾಕಿಲ್ಲ. ಇದನ್ನು ಹೊರತುಪಡಿಸಿದರೆ ಉಳಿದ ಎಲ್ಲದಕ್ಕೂ ತೆರಿಗೆ ಹಾಕುವ ಮೂಲಕ ಜನರ ಮೇಲೆ ತೆರಿಗೆಯ ಬರೆ ಎಳೆಯುತ್ತಿದ್ದಾರೆ ಎಂದು ಅವರು ದೂರಿದರು.
ಯತ್ನಾಳ್ ಫ್ರೀಯಾಗಿದ್ದಾರೆ : ಶಾಸಕ ಬಸನಗೌಡ ಪಾಟೀಲ್ ಅವರು ಬಹಳ ಫ್ರೀಯಾಗಿದ್ದಾರೆ. ಅವರು ಏನೇ ಆರೋಪ ಮಾಡಲಿ, ದಾಳಿ ಮಾಡಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಪಕ್ಷದ ಎಲ್ಲ ನಾಯಕರು, ವಿರೋಧ ಪಕ್ಷದ ನಾಯಕರು ಎಲ್ಲರೂ ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಅರ್ಥಪೂರ್ಣ ಆಚರಣೆ : ನಾಡಿನ ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿಯನ್ನು ದೇಶ ಸೇರಿದಂತೆ ನಾಡಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಶ್ರೀಗಳ ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಮುಂದಿನ ಸಿಎಂ ಬಿವೈವಿ : ಅಭಿಮಾನಿಗಳ ಘೋಷಣೆ
ತುಮಕೂರಿನ ಸಿದ್ದಗಂಗಾ ಮಠಕ್ಕೆ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭೇಟಿ ನೀಡುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ನಮ್ಮ ಮುಂದಿನ ಸಿಎಂ ವಿಜಯೇಂದ್ರ ಎಂಬ ಘೋಷಣೆಗಳನ್ನು ಕೂಗಿದರು.
ವಿಜಯೇಂದ್ರ ಅವರು ಕಾರಿನಲ್ಲಿ ಬಂದಿಳಿಯುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ವಿಜಯೇಂದ್ರ ಪರ ಘೋಷಣೆಗಳನ್ನು ಕೂಗಿ, ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಜೈಕಾರ ಹಾಕಿದರು.
ಇದನ್ನು ಗಮನಿಸಿದ ವಿಜಯೇಂದ್ರ ಅವರು ಅಭಿಮಾನಿಗಳತ್ತ ಕೈಮುಗಿದು ಯಾರೂ ಈ ರೀತಿ ಘೋಷಣೆ ಕೂಗ ಬಾರದು ಎಂದು ಮನವಿ ಮಾಡಿದರು.