ಮಕ್ಕಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಬಾಲ ದಸರಾ ಕಾರ್ಯಕ್ರಮವು ವರದಾನವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ನಟರಾಜ್ ಹೇಳಿದರು .
ವೀರಮಾರ್ಗ ನ್ಯೂಸ್ : ಮಂಡ್ಯ ಜಿಲ್ಲಾ : ಕೃಷ್ಣರಾಜಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಫಸ್ಟ್ ಕ್ರೈ ಇಂಟಲಿಟಾಟ್ಸ್ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಆಯೋಜಿಸಿದ್ದ ಬಾಲ ದಸರಾ ಸಂಸ್ಕೃತಿ ಸಂಘಟನೆ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಮಕ್ಕಳಿಗೆ ಅರಿವಿನ ಜಾಗೃತಿಯನ್ನು ಮೂಡಿಸಿ, ಸೃಜನಶೀಲತೆಯನ್ನು ತುಂಬಲು ಮಕ್ಕಳ ಬಾಲ ದಸರಾ ಕಾರ್ಯಕ್ರಮವು ವರದಾನವಾಗಿದೆ. ಭಾಲ ದಸರಾ ಕಾರ್ಯಕ್ರಮದಲ್ಲಿ ಮಕ್ಕಳು ಶ್ಲೋಕ ಹೇಳುವುದು ಜಾನಪದ ಹಾಗೂ ಭಕ್ತಿ ಗೀತೆಗಳನ್ನು ಹಾಡುವುದು, ಕಥೆ ಹೇಳುವುದು, ಕ್ಲೇ ಮಾಡೆಲ್ ಗಳನ್ನು ತಯಾರಿಸುವುದು, ಚಿತ್ರಕಲೆ ಮತ್ತು ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಕ್ಕಳ ವ್ಯಕ್ತಿತ್ವವು ಸಮಗ್ರವಾಗಿ ವಿಕಾಸಗೊಳ್ಳುವುದಲ್ಲದೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಭಿಮಾನ ಮೂಡುತ್ತದೆ ಈ ದಿಕ್ಕಿನಲ್ಲಿ ಗುರುಕುಲ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ , ಮಕ್ಕಳಿಗೆ ಬಾಲ್ಯದಿಂದಲೇ ರಾಮಾಯಣ, ಮಹಾಭಾರತ, ಭಗವದ್ಗೀತೆ ಮುಂತಾದ ಮಹಾನ್ ಗ್ರಂಥಗಳ ಬಗ್ಗೆ ಅರಿವು ಮೂಡಿಸುತ್ತಾ ಶ್ಲೋಕಗಳು ಮತ್ತು ಉಪನಿಷತ್ತುಗಳನ್ನು ಹೇಳಿಕೊಡುವ ಮೂಲಕ ತಂದೆ-ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಬಾಲ್ಯದಿಂದಲೇ ಕಲಿಸಿಕೊಡುವ ಮೂಲಕ ಮಕ್ಕಳ ಬಾಳಿಗೆ ಬೆಳಕಾಗುವ ದಿಕ್ಕಿನಲ್ಲಿ ಶಾಲೆಯು ಕೈಗೊಳ್ಳುತ್ತಿರುವ ಸೃಜನಶೀಲ ಹಾಗೂ ರಚನಾತ್ಮಕ ಕಾರ್ಯಕ್ರಮಗಳು ದಾರಿ ಮಾರ್ಗವಾಗಿವೆ ಎಂದು ನಟರಾಜು ಅಭಿಮಾನದಿಂದ ಹೇಳಿದರು.

ಕೃಷ್ಣರಾಜಪೇಟೆ ತಾಲೂಕಿನ ಸಂಸ್ಕೃತಿ ಸಂಘಟಕ ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್. ಎನ್.ಪ್ರವೀಣ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ರಾಜ್ಯದ ಉಚ್ಚ ನ್ಯಾಯಾಲಯದ ವಕೀಲರಾದ ಕೌಸ್ತುಭ ಭಾರತಿಪುರ, ಮಹಿಳಾ ಹೋರಾಟಗಾರ್ತಿ ಚೈತ್ರ, ಫಸ್ಟ್ ಕ್ರೈ ಇಂಟಲಿಟಾಟ್ಸ್ ಶಾಲೆಯ ಮುಖ್ಯ ಶಿಕ್ಷಕಿ ಪಲ್ಲವಿ, ಶಿಕ್ಷಕರಾದ ಗಂಗಾ, ಭೂಮಿಕಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶರನ್ನವರಾತ್ರಿಯ ಅಂಗವಾಗಿ ಬಾಲ ಮುತ್ತೈದೆಯರಿಗೆ ವಿಶೇಷ ಪೂಜೆ ಸಲ್ಲಿಸಿ , ಮಂತ್ರಾಕ್ಷತೆಯನ್ನು ಸಮರ್ಪಣೆ ಮಾಡಿ ಫಲತಾಂಭೂಲವನ್ನು ವಿತರಿಸಲಾಯಿತು. ಪುಟಾಣಿ ಮಕ್ಕಳು ಹಾಡಿದ ಜಾನಪದ ಹಾಗೂ ಭಕ್ತಿಗೀತೆಗಳು ಶ್ಲೋಕಗಳು ಸಾರ್ವಜನಿಕರ ಗಮನ ಸೆಳೆದವು.
ವರದಿ : ಎಂ.ಕೆ.ಹರಿಚರಣ ತಿಲಕ್, ಕೃಷ್ಣರಾಜಪೇಟೆ ಮಂಡ್ಯ.