ವೀರಮಾರ್ಗ ನ್ಯೂಸ್ : AGRICULTURE ನಮ್ಮ ಕಾಲಡಿಯಲ್ಲಿನ ಮಣ್ಣುಲೋಕದಲ್ಲಿ ವಿಸ್ಮಯಗೊಳಿಸುವ ಮಹಾನುಜೀವಿಗಳು
ಮಣ್ಣು ಮೇಲಣ ಜೀವಜಗತ್ತಿನ ಬದುಕು ಮೊದಲಿನಿಂದಲೂ ಅವಲಂಬಿಸಿರುವುದು ಒಂದು ಶಕ್ತಿಯ ಮೇಲೆ. ಆ ಶಕ್ತಿಯೇ ಸಜೀವಿ ಮಣ್ಣು. ಅಂದರೆ ವಿವಿಧ ಬಗೆಯ ಕೋಟ್ಯಾಂತರ ಜೀವಿಗಳಿರುವ ಮಣ್ಣು. ಈ ಜೀವಿಗಳು ಮಣ್ಣಲ್ಲಿರುವುದರಿಂದಲೇ, ಮಣ್ಣಿಗೊಂದು ಬೆಲೆ.
ಸಜೀವಿ ಮಣ್ಣೊಂದಿಗೆ, ಅಂದರೆ ಮಣ್ಣಲ್ಲಿರುವ ಜೀವಿಗಳ ಜೊತೆ ಸೌಹಾರ್ದತೆಯಿಂದ ಇರುವವರು ಕಣ್ಣಳತೆಯಲ್ಲೇ ತಮ್ಮ ಮಣ್ಣಲ್ಲಿನ ತಾಕತ್ತು ಏನೆಂಬುದನ್ನು ಕಂಡುಕೊಳ್ಳುತ್ತಾರೆ. ಅದಕ್ಕಾಗಿ ಅವರು ಮಾಡುವುದಿಷ್ಟೆ. ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಪರೀಕ್ಷಿಸುವುದು, ಮಣ್ಣಿನ ಬಣ್ಣ ದಟ್ಟವಾಗಿದೆಯೇ ಅಥವಾ ಮಾಸಿದೆಯೇ ಎಂಬುದನ್ನು ಗಮನಿಸುವುದು, ಮಣ್ಣು ಹುಡಿಹುಡಿಯಾಗಿದೆಯೇ ಅಥವಾ ಧೂಳಾಗಿದೆಯೇ ಎಂಬುದನ್ನು ತಿಳಿಯುವುದು, ಮಣ್ಣಲ್ಲಿ ಕೊಳೆಯುವ, ಕಳಿಯುವ ವಸ್ತುಗಳೇನಾದರೂ ಇವೆಯೇ ಎಂಬುದನ್ನು ನೋಡುವುದು, ಮಣ್ಣಲ್ಲಿ ಯಾವುದೇ ಒಂದು ಜೀವವಿದೆಯೇ ಎಂದು ಹುಡುಕುವುದು ಹಾಗೂ ಮಣ್ಣಲ್ಲಿ ಉತ್ತಮ ವಾಸನೆ ಇದೆಯೇ ಎಂಬುದನ್ನು ತಿಳಿಯುವುದು.
ನಮ್ಮ ಹಿರಿಯರು ತಮ್ಮ ಮಣ್ಣಲ್ಲಿರುವ ಉತ್ಪಾದನಾ ತಾಕತ್ತನ್ನು ತಿಳಿಯಲು ಇಷ್ಟೆಲ್ಲಾ ಸಂಕೇತ / ಸೂಚಕಗಳನ್ನು ಪರೀಕ್ಷಿಸುತ್ತಿದ್ದರು.
ಫಲವತ್ತತೆ ಅಂದರೆ ಮಣ್ಣಲ್ಲ. ಅದು ಮಣ್ಣಲ್ಲಿನ ಒಂದು ಗುಣ. ಮಣ್ಣಿನ ಸಾಮರ್ಥ್ಯ. ಇದೇ ಮಣ್ಣಿನ ಆರೋಗ್ಯ. ಸಾವಯವ ಅಂಶಗಳು ಮಣ್ಣಲ್ಲಿ ಬೆರೆತಾಗ, ಮಣ್ಣು ಆರೋಗ್ಯವಾಗಿರುತ್ತದೆ.
ಸಾವಯವ ವಸ್ತುಗಳನ್ನು ಪೋಷಕಾಂಶಗಳಾಗಿ ಪರಿವರ್ತಿಸುವುದೇ ಒಂದು ಜೀವದಾಯಿಕ ಕ್ರಿಯೆ. ಮಣ್ಣಲ್ಲಿನ ಜೀವಾಣುಗಳು ಸಾವಯವ ವಸ್ತುಗಳನ್ನು ಪೋಷಕಾಂಶಗಳಾಗಿ ಪರಿವರ್ತಿಸುತ್ತಿವೆ. ಆದ್ದರಿಂದ, ನಮ್ಮ ಮಣ್ಣುಗಳಲ್ಲಿ ನಿರಂತರವಾಗಿ ಜೀವಾಣುಗಳಿರಲೇಬೇಕು ಹಾಗೂ ಅವು ಕಾಲಕಾಲಕ್ಕೆ ವೃದ್ಧಿಯಾಗುತ್ತಲೇ ಇರಬೇಕು.