ಹುಲಿಕಟ್ಟಿಯಲ್ಲಿ ಗೌರಿ ಹುಣ್ಣಿಮೆ ಸಂಭ್ರಮ
ಗೌರಿ ಮಕ್ಕಳ ಕೋಲಾಟದ ಮೂಲಕ ಗ್ರಾಮೀಣ ಸಂಸ್ಕೃತಿ ಉಳಿಸುವ ಪ್ರಯತ್ನ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಗೌರಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಗ್ರಾಮದ ಗೌರಿ ಮಕ್ಕಳು ಜಾನಪದ ಹಾಡುಗಳನ್ನು ಹಾಡುತ್ತಾ ಗ್ರಾಮದ ಪ್ರತಿಯೊಂದು ಮನೆಗೂ ತೆರಳಿ, “ನಾವೂ ಗೌರಿ ಮಕ್ಕಳು, ನಾವೂ ಕೋಲಾಡುತ್ತೇವೆ” ಎಂದು ಹಾಡಿನ ಮೂಲಕ ಕೋಲಾಟ ಪ್ರದರ್ಶಿಸಿ ಗ್ರಾಮಸ್ಥರ ಗಮನ ಸೆಳೆದರು.
ಗ್ರಾಮೀಣ ಜನಪದ ಕಲೆ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ಉದ್ದೇಶದಿಂದ ಮಕ್ಕಳು ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಮಕ್ಕಳ ಉತ್ಸಾಹಭರಿತ ಕೋಲಾಟ ಮತ್ತು ಜಾನಪದ ಹಾಡುಗಳನ್ನು ಕಂಡ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ, ಮಕ್ಕಳಿಗೆ ಉರುಪು ನೀಡಿ ಪ್ರೋತ್ಸಾಹಿಸಿದರು. ಇಂತಹ ಸಾಂಪ್ರದಾಯಿಕ ಆಚರಣೆಗಳು ಗ್ರಾಮೀಣ ಸಂಸ್ಕೃತಿಯ ಉಳಿವಿಗೆ ಸಹಕಾರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರಾವಣಿ, ಹರ್ಷಿತ, ಗೌತಮಿ, ಕಾವ್ಯ, ತನುಶ್ರೀ, ರಾಧಿಕಾ, ಪ್ರತೀಕ್ಷಾ, ಅಂಜಲಿ ಸೇರಿದಂತೆ ಗೌರಿ ಮಕ್ಕಳು ಉಪಸ್ಥಿತರಿದ್ದರು.