ಮನೆ ಕಳವು ಪ್ರಕರಣ ಭೇದಿಸಿದ ಸಂತೇಬೆನ್ನೂರು ಪೊಲೀಸರು!

24 ಗಂಟೆಯೊಳಗೆ ಎರಡು ಮನೆ ಕಳವು ಪ್ರಕರಣ ಭೇದಿಸಿದ ಸಂತೇಬೆನ್ನೂರು ಪೊಲೀಸರು!

ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರ ವಶ; ₹2.13 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಹಣ ವಶಕ್ಕೆ

ದಾವಣಗೆರೆ : ಮನೆ ಕಳವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸಂತೇಬೆನ್ನೂರು ಪೊಲೀಸರು, ಎರಡು ಪ್ರತ್ಯೇಕ ಮನೆ ಕಳವು ಪ್ರಕರಣಗಳನ್ನು ದಾಖಲಾದ 24 ಗಂಟೆಯೊಳಗೆ ಭೇದಿಸಿ, ಕಳುವಾಗಿದ್ದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೆಬೆನ್ನೂರು ಗ್ರಾಮದ ದಿವ್ಯಶ್ರೀ (40) ಎಂಬುವವರು ಅಕ್ಟೋಬರ್ 25ರಂದು ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಮೇಲಿನ ಹಂಚು ತೆಗೆದು ಒಳನುಗ್ಗಿ, ಗಾಡ್ರೇಜ್ ಬೀರುವಿನ ಬಾಗಿಲು ಮುರಿದು ಅದರಲ್ಲಿದ್ದ ಚಿನ್ನಾಭರಣ, ಬೆಳ್ಳಿ ಆಭರಣ ಹಾಗೂ ನಗದು ಹಣವನ್ನು ಕಳವು ಮಾಡಿದ್ದರು. ಈ ಕುರಿತು ಅಕ್ಟೋಬರ್ 29ರಂದು ಅವರು ನೀಡಿದ ದೂರಿನ ಮೇರೆಗೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 217/2026ರ ಅಡಿಯಲ್ಲಿ ಬಿಎನ್‌ಎಸ್ ಕಲಂ 331(4), 305ರಂತೆ ಪ್ರಕರಣ ದಾಖಲಾಗಿತ್ತು.

ಇನ್ನೊಂದು ಪ್ರಕರಣದಲ್ಲಿ, ಸಂತೆಬೆನ್ನೂರಿನ ಮಮತಾ (45) ಎಂಬುವವರು ಅಕ್ಟೋಬರ್ 27ರಂದು ಕುಟುಂಬ ಸಮೇತ ತುಮಕೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ, ಬೀರುವಿನಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದರು. ಈ ಕುರಿತು ನೀಡಿದ ದೂರಿನ ಮೇರೆಗೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 218/2026ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಎರಡು ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಹೆಗಡೆ, ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರುದ್ರಪ್ಪ ಉಜ್ಜನಕೊಪ್ಪ ಹಾಗೂ ಸಂತೇಬೆನ್ನೂರು ವೃತ್ತ ನಿರೀಕ್ಷಕರಾದ ಮಲ್ಲಮ್ಮ ಚೌಭೆ ಅವರ ಮಾರ್ಗದರ್ಶನದಲ್ಲಿ, ಸಂತೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ ಟಿ.ಎಂ. ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ಈ ವೇಳೆ ಎರಡು ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಗುನ್ನೆ ನಂ. 217/2026ರಲ್ಲಿ ಕಳುವಾಗಿದ್ದ ಅಂದಾಜು ₹1,48,500 ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಹಣವನ್ನು ಮತ್ತು ಗುನ್ನೆ ನಂ. 218/2026ರಲ್ಲಿ ಕಳುವಾಗಿದ್ದ ಅಂದಾಜು ₹65,000 ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟು ಎರಡು ಪ್ರಕರಣಗಳಲ್ಲಿ ಅಂದಾಜು ₹2,13,500 ಮೌಲ್ಯದ ಕಳವು ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಪಿಎಸ್‌ಐ ನಾಗರಾಜ ಟಿ.ಎಂ. ಹಾಗೂ ಸಿಬ್ಬಂದಿಗಳಾದ ಎಎಸ್‌ಐ ರಾಜಪ್ಪ, ರವಿ ಟಿ., ರುದ್ರಪ್ಪ, ಮಾರುತಿ, ಜಗದೀಶ್, ಹರೀಶ್, ಶ್ರೀನಿವಾಸ, ಪ್ರಹ್ಲಾದ, ಅಂಜಿನಪ್ಪ, ಸತೀಶ್ ಹಾಗೂ ಸಂತೋಷ್ ಪಾಟೀಲ್ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ. ಅವರು ಪ್ರಶಂಸಿಸಿದ್ದಾರೆ.

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು