RTI ಸದುಪಯೋಗಕ್ಕಿಂತ ದುರುಪಯೋಗದ ಸುದ್ದಿಗಳೇ ಹೆಚ್ಚಾಗುತ್ತಿವೆ.

ಕೃಪೆ : ಫೇಸ್ಬುಕ್

ವೀರಮಾರ್ಗ ನ್ಯೂಸ್ : ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಯಾದ ನಂತರ ದೊಡ್ಡ ಸಂಚಲನವೇ ಉಂಟಾಗಿತ್ತು. ಆದರೆ, ಈಗ ಸದುಪಯೋಗಕ್ಕಿಂತ ದುರುಪಯೋಗದ ಸುದ್ದಿಗಳೇ ಹೆಚ್ಚಾಗುತ್ತಿವೆ.

ಸರ್ಕಾರದ ಯೋಜನೆಗಳು, ಅವುಗಳು ಜಾರಿ, ವಿವಿಧ ಕಾಮಗಾರಿಗಳು ಹೀಗೆ ಆಡಳಿತ ವ್ಯವಸ್ಥೆಯಲ್ಲಿನ ಆಗುಹೋಗುಗಳ ಮಾಹಿತಿ ಜನರಿಗೂ ತಿಳಿಯಲಿ ಎನ್ನುವ ಕಾರಣಕ್ಕೆ ಮಾಹಿತಿ ಹಕ್ಕು ಕಾಯ್ದೆಯನ್ನು ಪ್ರಜೆಗಳ ಕೈಗೆ ಕೊಡಲಾಗಿದೆ.

ಆರ್‌ಟಿಐ ಬಂದ ನಂತರ ಮಾಹಿತಿ ಕೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವರು ಆರ್‌ಟಿಐ ಕಾರ್ಯಕರ್ತರ ಹೆಸರಿನಲ್ಲಿ ಮಾಹಿತಿ ಪಡೆದು ಅದನ್ನು ಸಾರ್ವಜನಿಕರ ಮುಂದಿಡುವ ಕೆಲಸ ಮಾಡುತ್ತಾರೆ. ಕೆಲ ಪತ್ರಕರ್ತರು ಸಹ ಮಾಹಿತಿ ಪಡೆದು ವಾಸ್ತವವನ್ನು ಜನರಿಗೆ ತಲುಪಿಸುತ್ತಾರೆ. ಆದರೆ, ದಂಧೆಕೋರರು ಆರ್‌ಟಿಐ ಯನ್ನು ಸ್ವ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದು, ಅಂಥವರ ಸಂಖ್ಯೆ ಏರುತ್ತಲೇ ಇದೆ. ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಇಂಥವರು ಸಿಗುತ್ತಾರೆ. ದಿನ ಬೆಳಗಾದರೆ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಅದು ಇದೂ ಎಂದು ಮಾಹಿತಿ ಕೇಳುತ್ತಲೇ ಇರುತ್ತಾರೆ. ಹೀಗೆ ಮಾಹಿತಿ ಕೇಳುವವರು ತಮ್ಮದೇ ಒಂದು ಗುಂಪು ಮಾಡಿಕೊಂಡು ದುರ್ಬಳಕೆಗೆ ಮುಂದಾಗುತ್ತಿದ್ದಾರೆ.

ಯೋಜನೆಗಳ 5, ಕಾಮಗಾರಿಗಳು, ಪರವಾನಗಿ ಕೊಡುವುದು ಮೊದಲಾದ ಕೆಲಸದಲ್ಲಿ

ಏನಾದರೂ ಲೋಪಗಳಾಗಿವೆಯೇ, ನಿಯಮ ಮೀರಿ ನಡೆದುಕೊಳ್ಳಲಾಗಿದೆಯೇ? ಮುಂತಾದ ಸಂಗತಿಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಇಂಥವರು ನಿರತರಾಗಿದ್ದಾರೆ. ಸಣ್ಣ ಪುಟ್ಟ ತಪ್ಪುಗಳಿಗೂ ಅಧಿಕಾರಿಗಳು, ಇತರ ಸಾರ್ವಜನಿಕ ಕೆಲಸ ಮಾಡುವವರನ್ನು ಪೀಡಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ ಎಂಬ ದೂರುಗಳು ಇತ್ತೀಚೆಗೆ ಸಾಮಾನ್ಯವಾಗಿವೆ.

ಅನೇಕರು ಆರ್‌ಟಿಐ ಅಡಿ ಅಧಿಕಾರಿಗಳ ಬಳಿ ಮಾಹಿತಿ ಕೇಳಲು ಮುಂದಾಗುತ್ತಾರೆ. ಅವರು ಸೊಪ್ಪು ಹಾಕದೆ ಹೋದರೆ ಬೆದರಿಕೆಗಳನ್ನೂ ಹಾಕುತ್ತಾರೆ. ಆದರೆ, ತಮಗೆ ಸಾಥ್ ನೀಡುವ ಅಧಿಕಾರಿಗಳನ್ನು ಬಳಸಿಕೊಂಡು ದಂಧೆಕೋರರು ಅವರಿಗೂ ಅನುಕೂಲ ಮಾಡಿಕೊಡುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಚೇರಿಗೆ ಬರುವ ಕೆಲ ಉಳ್ಳವರ ಮಾಹಿತಿ ನೀಡುವ ಅಧಿಕಾರಿಗಳು ಗೌಪ್ಯತೆ ಕಾಯ್ದುಕೊಳ್ಳುವ ಕೆಲಸ ಮಾಡುತ್ತಿಲ್ಲ. ಅದರಲ್ಲೂ ಬಿಲ್ಡರ್, ಡೆವಲಪರ್ ಗಳು ಕಟ್ಟಡ ಪರವಾನಗಿ, ಸಿಸಿ, ಇತ್ಯಾದಿ ಕೆಲಸಗಳನ್ನು ಇಟ್ಟುಕೊಂಡು ಮಹಾನಗರ ಪಾಲಿಕೆಗೆ ಬರುತ್ತಾರೆ. ಹೀಗೆ

ಅರ್ಜಿ ಸಲ್ಲಿಸಿದವರ ಬಗ್ಗೆ ಮಾಹಿತಿ ಕಲೆ ಹಾಕುವ ಆರ್‌ಟಿಐ ಕಾರ್ಯಕರ್ತರು ಚಿಕ್ಕ ವಿಷಯಗಳನ್ನು ಇಟ್ಟುಕೊಂಡು ಮಾಹಿತಿ ಕೇಳಿ ಪೇಚಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ಪಡೆದ ಮಾಹಿತಿ ಇಟ್ಟುಕೊಂಡು ಅನೇಕರು ಬ್ಲ್ಯಾಕ್ ಮೇಲ್ ಮಾಡುವ ಮಟ್ಟಕ್ಕೂ ಇಳಿದಿದ್ದಾರೆ.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಕಚೇರಿಗೆ ಪ್ರತಿ ತಿಂಗಳು ಅಂದಾಜು 15ರಿಂದ 20 ಅರ್ಜಿಗಳು ಆರ್‌ಟಿಐ ಅಡಿ ಬರುತ್ತಿವೆ. ಮಹಾನಗರ ಪಾಲಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹೀಗೆ ಪ್ರತಿಯೊಂದು ಆಫೀಸ್‌ಗೆ ಆರ್‌ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇವೆ. ಅದರಲ್ಲೂ ಮಹಾನಗರ ಪಾಲಿಕೆ ಆವರಣದಲ್ಲಿ ಆರ್‌ಟಿಐ ಕಾರ್ಯಕರ್ತರ ಹಾವಳಿ ವಿಪರೀತವಾಗಿದೆ. ಯಾರು, ಯಾವ ಕೆಲಸ ಮಾಡುತ್ತಾರೆ, ಅವರ ಹಿನ್ನೆಲೆ ಏನು ಎಲ್ಲವನ್ನೂ ತಿಳಿದುಕೊಂಡು ಅವರಿಂದ ಹಣ ಪೀಕಲು ಆರ್‌ಟಿಐ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.