ಹೋಳಿ ಹಬ್ಬದ ಸಂಭ್ರಮದಲ್ಲಿ ವಿವಿಧ ಬಣ್ಣಗಳಲ್ಲಿ ಮಿಂದೆದ್ದ ನಗರ ಜನತೆ
ವೀರಮಾರ್ಗ ನ್ಯೂಸ್ : ಹಾವೇರಿ : ನಗರದ ನೂರಾರು ಯುವಕ–ಯುವತಿಯರು, ಪೋಷಕರು ಹಾಗೂ ಎಳೆಯ ಮಕ್ಕಳು ಹೋಳಿ ಹಬ್ಬದ ರಂಗಿನಲ್ಲಿ ಮಿಂದು ಹೋಳಿ ಹಬ್ಬದ ಆಚರಿಸಿದರು.
ಹಾವೇರಿ ನಗರದಲ್ಲಿ ಬುಧವಾರ ರಂದು ಎಲ್ಲೆಲ್ಲೋ ಹೋಳಿ ಹಬ್ಬದ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು ಬೆಳಿಗ್ಗೆಯಿಂದಲೇ ಯುವಕರು ಬೀದಿ ಬೀದಿಯಲ್ಲಿ ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ಪರಸ್ಪರ ಬಣ್ಣ ಎರಚಿಕೊಂಡು ರಂಗಿನಾಟದಲ್ಲಿ ತೊಡಗಿದ್ದರು. ಮಕ್ಕಳು ಬಣ್ಣದ ನೀರಿನ ಸ್ಯಾಸೆಗಳನ್ನು ಹಿಡಿದು ಎರಚುತ್ತಾ ಓಣಿ ಅಂಗಳದಲ್ಲಿ ಓಡಾಡಿದರು. ಮಹಿಳೆಯರು, ಯುವತಿಯರು ಕೂಡ ವಿಧ ವಿಧದ ಬಣ್ಣದಲ್ಲಿ ಮಿಂದ್ದು ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಬಾಂಧವ್ಯ ಬೆಸೆಯುವ ಹೋಳಿ ಹಬ್ಬದಲ್ಲಿ ನಗರದ ಯುವಕರು ಹೋಳಿ ಆಚರಣೆಯಲ್ಲಿ ತಲ್ಲಿರಾಗಿದ್ದರು.
ಬೈಕ್ ಸವಾರರು : ಬಣ್ಣದಾಟವಾಡಿದ ಯುವಕರು ಬೈಕ್ಗಳಲ್ಲಿ ಸಂಚರಿಸುತ್ತಾ, ಕೇಕೆ ಹಾಕುತ್ತಾ ಹಲವು ಬಡಾವಣೆಗಳಿಗೂ ಭೇಟಿ ನೀಡಿ ಅಲ್ಲಿನವರೊಂದಿಗೆ ಸೇರಿಕೊಂಡಾಗ ಸಂಭ್ರಮ ದುಪ್ಪಟ್ಟಾಗುತ್ತಿತ್ತು. ಬೆಳಿಗ್ಗೆ ಬಿಸಿಲೇರುವ ಮುನ್ನ ಆರಂಭವಾದ ಹೋಳಿ ಹಬ್ಬದ ಸಂಭ್ರಮ ಮಧ್ಯಾಹ್ನದವರೆಗೂ ಮುಂದುವರಿದಿತ್ತು.
ಚಿಣ್ಣರ ಬಣ್ಣದಾಟ : ಹೋಳಿ ಹಬ್ಬವನ್ನು ನಗರದ ಪ್ರತಿಯೊಂದು ಬಡಾವಣೆಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಬಣ್ಣ ಆಡಲು ಬೀದಿಗಿಳಿದ ಮಕ್ಕಳು, ಯುವಕರು ಮಧ್ಯಾಹ್ನದ ವರೆಗೂ ಕುಣಿದು ಕುಪ್ಪಳಿಸಿದರು. ಬಗೆಯ ಬಣ್ಣಗಳನ್ನು ಸ್ನೇಹಿತರು, ಆತ್ಮೀಯರಿಗೆ ಹಚ್ಚಿ ಖುಷಿ ಪಟ್ಟರು. ಸಮಿತಿಯವರು ಏರ್ಪಡಿಸಿದ್ದ ನೀರಿನ ಕಾರಂಜಿಯಲ್ಲಿ ನೆನೆಯುತ್ತಾ ಮ್ಯೂಸಿಕ್ ಗೆ ಕುಣಿದು ಕುಪ್ಪಳಿಸುತ್ತಿದ್ದರು.ಮಹಿಳೆಯರು, ಯುವತಿಯರೂ ಮನೆಯ ಸುತ್ತಮುತ್ತ ಆಟವಾಡಿದರು.
ಹಬ್ಬದ ವಿಶೇಷವಾಗಿ ಮಕ್ಕಳು ಯುವಕರು ಮಹಿಳೆಯರು ಹಬ್ಬದಾಟದ ನಂತರ ಮನೆಗಳಲ್ಲಿ ಒಯ್ಕೊಳ್ಳ ಬಾಯಿಗೆ ಹೋಳಿಗೆ ಮತ್ತು ಸಿಹಿ ತಿನಿಸುಗಳನ್ನು ಒಳಗೊಂಡಂತೆ ವಿಶೇಷವಾಗಿ ಊಟ ಮಾಡಿದರು.
ಕಾಮ ದೇವನಿಗೆ ವಿಶೇಷ ಪೂಜೆ ಸಲ್ಲಿಸಿದ ನಗರದ ಜನತೆ, ಸಡಗರ ಸಂಭ್ರಮದಿಂದ ನಗರದ ಮುಖ್ಯ ಸರ್ಕಲ್ ಗಳಲ್ಲಿ ಕಾಮದೇವನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಮಕ್ಕಳು ಕಾಮಣ್ಣನ ವಿವಿಧ ವೇಷಭೂಷಣ ಧರಿಸಿ ಕುಣಿದು ಕುಪ್ಪಳಿಸಿದರು. ನಂತರ ಕಾಮದಹನವನ್ನು ಸಾಮೂಹಿಕವಾಗಿ ನೆರವೇರಿಸಿದರು.