ಪೂಜೆ ಹೆಸ್ರಲ್ಲಿ ಗೋಲ್ಡ್ ಎಗರಿಸ್ತಿದ್ದ ವ್ಯಕ್ತಿ ಅರೆಸ್ಟ್..!

ಹಿಂದೂ ಸ್ವಾಮಿಗಳ ಹೆಸ್ರಲ್ಲಿ ಪೂಜೆ ಮಾಡಿ, ಗೋಲ್ಡ್ ಎಗರಿಸ್ತಿದ್ದ ಮುಸ್ಲಿಂ ವ್ಯಕ್ತಿ ಅರೆಸ್ಟ್..!

ಬೆಂಗಳೂರಿನ ಹುಳಿಮಾವು, ಬಳ್ಳಾರಿ, ಶಿವಮೊಗ್ಗ ಸೇರಿ ಹಲವು ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆಸಿದ್ದಾನೆ. ಇತ್ತೀಚೆಗೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಇಬ್ಬರಿಗೆ ವಂಚನೆ ನಡೆದಿತ್ತು. ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಗೊತ್ತಾಗಿದೆ

ವೀರಮಾರ್ಗ ನ್ಯೂಸ್ : ಬೆಂಗಳೂರು : ಹಿಂದೂ ಸ್ವಾಮೀಜಿಗಳ ಹೆಸರಲ್ಲಿ ಪೂಜೆ ಮಾಡಿ ಚಿನ್ನಾಭರಣ ಎಗರಿಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ದಾದಪೀ (49) ಬಂಧಿತ ವ್ಯಕ್ತಿ.

ದಾದಪೀ‌ರ್ ಎಂಬ ವ್ಯಕ್ತಿ ಚಿನ್ನಾಭರಣ ದೋಚಲು ಹಿಂದೂಗಳ ಹೆಸರನ್ನು ಬಳಸಿ ಸ್ವಾಮೀಜಿ ವೇಷ ಹಾಕುತ್ತಿದ್ದ. ನಾರಾಯಣ, ವೆಂಕಟರಮಣ ಸ್ವಾಮಿ ಎಂದು ಮುಗ್ಧರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ದೇವರನ್ನು, ಸ್ವಾಮೀಜಿಗಳನ್ನು ನಂಬೋರೇ ಈತನ ಟಾರ್ಗೆಟ್ ಆಗಿತ್ತು. ಪೂಜೆ ಮಾಡಿಸೋಕೆ ರೆಡಿ ಇರುವಂತವರನ್ನೇ ಹುಡುಕಿ ಮರಳು ಮಾಡುತ್ತಿದ್ದ.

ಏನು ಹೇಳ್ತಿದ್ದ..?

ನಿಮಗೆ ಯಾರೋ ಮಾಟ ಮಾಡಿಸಿದ್ದಾರೆ. ಆ ಮಾಟ-ಮಂತ್ರಕ್ಕೆ ನನ್ನಲ್ಲಿ ಪರಿಹಾರ ಇದೆ ಎಂದು ನಂಬಿಸುತ್ತಿದ್ದ. ಹೌದೆಂದು ನಂಬಿದ ಕೆಲವರು ಮೋಸ ಹೋಗಿದ್ದಾರೆ. ಹೀಗೆ ಪುಸಲಾಯಿಸಿ ಪೂಜೆಗೆ ಕೂರಿಸುತ್ತಿದ್ದ ಆತ, ತಾನೇ ಗೌಪ್ಯವಾಗಿ ಹೂತಿಟ್ಟಿದ್ದ ಮಡಿಕೆಯನ್ನು ತೆಗೆಯುತ್ತಿದ್ದ. ಕೊನೆಗೆ ಇದಕ್ಕೆ ಪರಿಹಾರವಾಗಿ ಪೂಜೆ ಮಾಡಬೇಕು ಎನ್ನುತ್ತಿದ್ದ.

ಆಗ ಒಂದು ಮಡಿಕೆಯನ್ನಿಟ್ಟು, ಅದರೊಳಗೆ ಮನೆಯಲ್ಲಿರೊ ಚಿನ್ನಾಭರಣ ತಂದಿಡಿ ಎನ್ನುತ್ತಿದ್ದ. ಮಡಿಕೆಯೊಳಗೆ ನೀರು ಹಾಕಿ ಅದಕ್ಕೆ ಅರಿಶಿಣ ಹಾಕ್ತಿದ್ದ. ಅಷ್ಟೆಲ್ಲ ಮಾಡಿದ ಬಳಿಕ ಮನೆಯವರನ್ನು ಹೊರಗೆ ಹೋಗಿ ವಿಶೇಷ ಪೂಜೆ ಮಾಡಬೇಕು ಎಂದು ನಂಬಿಸುತ್ತಿದ್ದ.

ಮನೆಯವರು ಅಲ್ಲಿಂದ ಹೋಗುತ್ತಿದ್ದಂತೆಯೇ ಮಡಿಕೆಯಲ್ಲಿದ್ದ ಚಿನ್ನಾಭರಣ ತೆಗೆದು ಅದಕ್ಕೆ ಕಲ್ಲು ಹಾಕುತ್ತಿದ್ದ. ಕೊನೆಗೆ ಅದಕ್ಕೆ ಬಿಳಿ ಬಟ್ಟೆ ಸುತ್ತಿ, 48 ಗಂಟೆಗಳ ಕಾಲ ಅದನ್ನು ತೆಗೆಯಬೇಡಿ. ಒಂದು ವೇಳೆ ನೀವು ತೆಗೆದರೆ ಮಾಟ, ಮಂತ್ರ ಪರಿಣಾಮ ಬೀರಲ್ಲ ಎನ್ನುತ್ತಿದ್ದ.

ಆ ದಿನ ಅಲ್ಲಿಂದ ಪರಾರಿ ಆಗುವ ಆತ, ರಾಜ್ಯವನ್ನೇ ಬಿಟ್ಟು ಹೋಗುತ್ತಿದ್ದ. 48 ಗಂಟೆ ಬಳಿಕ ಅದನ್ನು ತೆಗೆದು ನೋಡಿದರೆ ಮಡಿಕೆಯೊಳಗೆ ಚಿನ್ನಾಭರಣದ ಬದಲಿಗೆ ಕಲ್ಲುಗಳು ಇರುತ್ತಿದ್ದವು. ಇದೇ ರೀತಿ ಬೆಂಗಳೂರಿನ ಹುಳಿಮಾವು, ಬಳ್ಳಾರಿ, ಶಿವಮೊಗ್ಗ ಸೇರಿ ಹಲವು ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆಸಿದ್ದಾನೆ. ಇತ್ತೀಚೆಗೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಇಬ್ಬರಿಗೆ ವಂಚನೆ ನಡೆದಿತ್ತು. ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, 53 ಲಕ್ಷ ಮೌಲ್ಯದ 485 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ವರದಿ : ಚನ್ನೇಶ್ ಬೆಂಗಳೂರು.