ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧವಿಲ್ಲ MLA.

ಹಾನಗಲ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ : MLA ಪಠಾಣ..

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾನಗಲ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಈ ಪ್ರಕರಣ ದಾಖಲಾಗಿದ್ದು, ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಶಿಗ್ಗಾವಿ ಶಾಸಕ ಯಾಸೀರ ಅಹ್ಮದ್ ಖಾನ್‌ ಪಠಾಣ ತಿಳಿಸಿದರು.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ‘ವೀರಮಾರ್ಗ ಪತ್ರಿಕೆ ‘ಗೆ ಪ್ರತಿಕ್ರಿಯಿಸಿರುವ ಅವರು, ‘ಇದು 2017ರಲ್ಲಿ ನಡೆದ ಪ್ರಕರಣ. ನಾನು ಆಗ ಶಾಸಕನಾಗಿರಲಿಲ್ಲ. ಈಗ ಶಾಸಕನಾಗಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ. ಇದರ ಹಿಂದೆ ರಾಜಕೀಯ ದುರದ್ದೇಶ ಇದ್ದರೂ ಇರಬಹುದು’ ಎಂದರು.

2017ರಲ್ಲಿ ಜಮೀನು ಖರೀದಿಸಿ ಕೃಷಿಯೇತರ (ಎನ್‌ಎ) ಪ್ರದೇಶವೆಂದು ಅನುಮತಿ ಪಡೆಯಲಾಗಿತ್ತು. ನಂತರ, ಕೆಜಿಪಿ ಪಡೆಯಲು ಅನುಮತಿ ಕೋರಲಾಗಿತ್ತು. ಅವಾಗಲೇ, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆಯೂ ತೆರವಾಗಿತ್ತು. ನಂತರ, ಅಧಿಕಾರಿಗಳು ಸರ್ವೇ ಮಾಡಿ ಹದಬಸ್ತು ಮಾಡಿದ್ದರು. 2ರಿಂದ 3 ಅಡಿಯಷ್ಟು ಮಾತ್ರ ವ್ಯತ್ಯಾಸವಿತ್ತು. ಈ ಘಟನೆ ನಂತರ ಪೊಲೀಸರೂ ಸ್ಥಳ ಪರಿಶೀಲನೆ ನಡೆಸಿದ್ದರು. ವಾಸ್ತವ ಸ್ಥಿತಿ ಅರಿತಿದ್ದ ಅವರು, ದೂರು ದಾಖಲಿಸಿಕೊಂಡಿರಲಿಲ್ಲ. ಈಗ ಖಾಸಗಿ ಮೊಕದ್ದಮೆಯಲ್ಲಿ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ’ ಎಂದು ಹೇಳಿದರು.

‘ಸತ್ಯಕ್ಕೆ ಎಂದಿಗೂ ಜಯ ಸಿಗಲಿದೆ. ಈ ದೂರಿನಲ್ಲಿರುವ ಆರೋಪಗಳು ಎಲ್ಲವೂ ಸುಳ್ಳು. ಪೊಲೀಸರು ತನಿಖೆ ಮಾಡುತ್ತಾರೆ. ಅವರಿಗೆ ಎಲ್ಲ ಸಹಕಾರ ನೀಡುತ್ತೇನೆ. ತನಿಖೆಯಿಂದಲೇ ಎಲ್ಲವೂ ತಿಳಿಯಲಿದೆ’ ಎಂದು ತಿಳಿಸಿದರು.