ಅಮ್ಮನವರ ಉತ್ಸವ ಮೂರ್ತಿಯ ಮೆರವಣಿಗೆ.

ವಿಜಯದಶಮಿ ಅಂಗವಾಗಿ ನಡೆದ ಶ್ರೀಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯ ಮೆರವಣಿಗೆ. ಅದ್ದೂರಿ ಪ್ರಾಕಾರೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ.

ವೀರಮಾರ್ಗ ನ್ಯೂಸ್ : ಮಂಡ್ಯ ಜಿಲ್ಲಾ : ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಜಲಸೂರು ಬೈಪಾಸ್ ರಸ್ತೆಯ ಪಕ್ಕದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಉತ್ಸವ ಮೂರ್ತಿಯ ಅದ್ದೂರಿ ಮೆರವಣಿಗೆ ಹಾಗೂ ಪ್ರಾಕಾ ರೋತ್ಸವ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಶ್ರೀಚೌಡೇಶ್ವರಿ ಅಮ್ಮನವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಹೆಚ್.ಆರ್ ಚಂದ್ರಶೇಖರ್ ಉತ್ಸವಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮಾತನಾಡಿ ತಾಯಿ ಚೌಡೇಶ್ವರಿಯು ದುಷ್ಟರನ್ನು ಸಂಹಾರ ಮಾಡಿ ಗೆಲುವು ಸಾಧಿಸಿದ ದಿನವನ್ನು ವಿಜಯ ದಶಮಿಯ ದಿನವನ್ನಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಹಬ್ಬ ಹರಿದಿನಗಳನ್ನು ಎಲ್ಲರೂ ಒಂದಾಗಿ ಆಚರಿಸಿದಾಗ ರಾಷ್ಟ್ರೀಯ ಭಾವೈಕ್ಯತೆಯು ಮೂಡುವ ಜೊತೆಗೆ ಸ್ನೇಹ ಸಂಭಂದಗಳು ಗಟ್ಟಿಯಾಗಿ ಸಂತೋಷ ಸಮೃದ್ಧಿ ನೆಲೆಸಲು ಸಹಕಾರಿಯಾಗಿದೆ ಎಂದು ಚಂದ್ರಶೇಖರ್ ಹೇಳಿದರು.
ದಾನಿಗಳಾದ ಕೆ.ಆರ್. ನಾಗರಾಜಶೆಟ್ಟಿ ಮಾತನಾಡಿ ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗಿದರೆ ಮಾನಸಿಕ ಒತ್ತಡವು ದೂರಾಗುವ ಜೊತೆಗೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೂಡಾ ದೊರೆಯುತ್ತದೆ. ಆದ್ದರಿಂದ ಸಾಧನೆ ಮಾಡಲು ಕಷ್ಟವಾದರೂ ನ್ಯಾಯ, ನೀತಿ ಹಾಗೂ ಧರ್ಮದ ಮಾರ್ಗದಲ್ಲಿಯೇ ಸಾಗಿ ಗುರಿಸಾಧನೆ ಮಾಡಿ ನೆಮ್ಮದಿಯ ಜೀವನ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ನಾಗರಾಜಶೆಟ್ಟಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಸಿ.ವಾಸು, ನೇಕಾರ ತೊಗಟವೀರ ಸಮಾಜದ ಮುಖಂಡರಾದ ಕೆ. ಹೆಚ್.ಗೋಪಾಲ್, ಪೊಲೀಸ್ ಮಹದೇವಯ್ಯ, ಕೆ.ಆರ್. ನೀಲಕಂಠ, ದೇವಾಲಯ ಟ್ರಸ್ಟ್ ಕಾರ್ಯದರ್ಶಿ ವಿದ್ಯಾರ್ಥಿ ಭಂಡಾರ್ ಸುರೇಶ್, ಖಜಾಂಚಿ ಕೆ.ಆರ್.ಮಹೇಶ್, ಆಡಳಿತ ಮಂಡಳಿ ನಿರ್ದೇಶಕರಾದ ಕೆ. ಎಸ್.ಮಧುಸೂದನ್, ಎಸ್.ಜೆ. ಕುಮಾರಸ್ವಾಮಿ, ಮಾರಿಗುಡಿ ಚಂದ್ರಶೇಖರ್, ಕೆ.ಜಿ.ಕುಮಾರ್, ಅಂಗಡಿ ಲಕ್ಷ್ಮಣ, ಪರಿಮಳ ನಾಗರಾಜಶೆಟ್ಟಿ, ನಾಗರತ್ನಮ್ಮ, ಪ್ರೇಮ ಶ್ರೀಕೃಷ್ಣ, ಸವಿತ ರಾಜಶೇಖರ್, ಕಬಾಬ್ ನಾರಾಯಣಪ್ಪ, ಹೊನ್ನಾವರ ಚಂದ್ರಶೇಖರ್ ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.
ದೇವಾಲಯದ ಪ್ರಧಾನ ಅರ್ಚಕರಾದ ರವಿಶಾಸ್ತ್ರಿ ಅವರು ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.

ವರದಿ : ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.