ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು; ಅಕ್ರಮದ ಸುಳಿಗೆ ‘ಪದಕ’ದ ಗೌರವವೇ,,,?
ಕುಮಾರಪಟ್ಟಣ ಸಿಪಿಐಗೆ ಮುಖ್ಯಮಂತ್ರಿ ಪದಕ : ಸಾರ್ವಜನಿಕರ ಆಕ್ರೋಶ ಹಾಗೂ ವ್ಯವಸ್ಥೆಯ ವೈಫಲ್ಯದ ಅನಾವರಣ
ರಾಣೇಬೆನ್ನೂರು: ಕಾನೂನು ಪಾಲಿಸಬೇಕಾದವರೇ ಅಕ್ರಮಕ್ಕೆ ರಹದಾರಿ ಮಾಡಿಕೊಟ್ಟಿದ್ದಾರೆಯೇ? ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗೆ ಶೌರ್ಯದ ಸಂಕೇತವಾದ ‘ಮುಖ್ಯಮಂತ್ರಿ ಪದಕ’ ನೀಡಿರುವುದು ಎಷ್ಟು ಸಮಂಜಸ? ಇಂತಹ ಹತ್ತಾರು ಪ್ರಶ್ನೆಗಳು ಈಗ ರಾಣೇಬೆನ್ನೂರು ತಾಲೂಕಿನಾದ್ಯಂತ ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿವೆ.
ಅಕ್ರಮಗಳ ಅಡ್ಡೆಯಾದ ಪೊಲೀಸ್ ವ್ಯಾಪ್ತಿ!: ಕುಮಾರಪಟ್ಟಣ ಮತ್ತು ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಮುಗಿಲು ಮುಟ್ಟಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ತುಂಗಭದ್ರಾ ನದಿ ತೀರದಲ್ಲಿ ಮರಳು ಮಾಫಿಯಾ: ನಲವಾಗಲು, ಮಾಕನೂರು, ಹೊಸಪೇಟೆ, ಕೋಟಿಹಾಳ ಸೇರಿದಂತೆ ಸುತ್ತಮುತ್ತಲಿನ ನದಿ ದಡದಲ್ಲಿ ಹಗಲು-ರಾತ್ರಿ ಎನ್ನದೆ ಅಕ್ರಮ ಮರಳು ಗಣಿಗಾರಿಕೆಯು ಈ ಹಿಂದೆ ನಡೆಯುತ್ತಿದ್ದು, ಅಕ್ರಮ ಚಟುವಟಿಕೆಗಳ ಬಗ್ಗೆ ಹಲವು ಪತ್ರಿಕೆಯಲ್ಲಿ ವಿಶೇಷ ವರದಿಗಳು ಪ್ರಕಟವಾಗಿದವು ಎನ್ನಲಾಗಿದೆ. ಠಾಣೆಯ ವ್ಯಾಪ್ತಿಯಲ್ಲಿ ಓಸಿ, ಇಸ್ಪೀಟು ಕ್ಲಬ್‌ಗಳು, ಮತ್ತು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಳ್ಳಿ ಹಳ್ಳಿಗಳಲ್ಲಿ ಬೇರೂರಿದೆ ಎನ್ನಬಹುದು. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲೂ ಮದ್ಯದ ಬಾಟಲಿಗಳು ರಾಜಾರೋಷವಾಗಿ ಮಾರಾಟವಾಗುತ್ತಿವೆ ಎಂಬ ದೂರುಗಳಿವೆ.
ಸಾರ್ವಜನಿಕ ದೂರು : ಸಾಮಾಜಿಕ ಕಾರ್ಯಕರ್ತರು ಹಲವಾರು ಬಾರಿ ದಾಖಲೆ ಸಮೇತ ದೂರು ನೀಡಿದರೂ, ದಾವಣಗೆರೆ ವಲಯದ ಐಜಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪತ್ರಿಕೆಗಳಲ್ಲಿ ವರದಿ ಬಂದರೂ, ಮೇಲಧಿಕಾರಿಗಳ ಗಮನಕ್ಕೆ ತಂದರೂ ಕ್ರಮವಿಲ್ಲ ಎಂದರೆ ಇದರ ಹಿಂದಿನ ಗುಪ್ತ ಅಜೆಂಡಾ ಏನು?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮುಖ್ಯಮಂತ್ರಿ ಪದಕ: ಗೌರವವೋ ಅಥವಾ ‘ಸೆಟಲ್‌ಮೆಂಟ್’ ಫಲವೋ? ಗೊತ್ತಿಲ್ಲ, ಕಳಂಕಿತ ಅಧಿಕಾರಿಗಳಿಗೆ ಪದಕ ಶಿಫಾರಸು ಮಾಡುವುದು ಇಲಾಖೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಅಕ್ರಮಗಳಿಗೆ ಬೆಂಬಲ ನೀಡಿದ ಆರೋಪವಿರುವ ಸಿಪಿಐಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವ ಆಧಾರದ ಮೇಲೆ ಶಿಫಾರಸು ಮಾಡಿದ್ದಾರೇನೋ ಗೊತ್ತಿಲ್ಲ? ಅವರೇ ಉತ್ತರಿಸಬೇಕಾಗಿದೆ.
ಹೋರಾಟಗಾರರು ಮತ್ತು ಸ್ವಾಮೀಜಿಗಳ ‘ಬೆಂಬಲ’ದ ಮರ್ಮವೇನು,,,,? ಸಾಮಾನ್ಯವಾಗಿ ಅಕ್ರಮಗಳ ವಿರುದ್ಧ ಧ್ವನಿ ಎತ್ತಬೇಕಾದ ಕೆಲವು ಹೋರಾಟಗಾರರು ಮತ್ತು ಧಾರ್ಮಿಕ ಮುಖಂಡರು ವಿವಾದಿತ ಅಧಿಕಾರಿಯ ಪರವಾಗಿ ನಿಂತಿರುವುದು ಆಶ್ಚರ್ಯಕರವಾಗಿದೆ. ಅಧಿಕಾರಿಯ “ಕೃಪಾಕಟಾಕ್ಷ” ಹೊಂದಿರುವ ಈ ವ್ಯಕ್ತಿಗಳು ವ್ಯವಸ್ಥಿತವಾಗಿ ಸಾರ್ವಜನಿಕರ ಆಕ್ರೋಶವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಮುಖ್ಯಮಂತ್ರಿ ಪದಕ ಎಂಬುದು ಸೇವೆಯ ಪವಿತ್ರ ಸಂಕೇತ. ಅದು ರಾಜಕೀಯ ಪ್ರಭಾವಕ್ಕೋ ಅಥವಾ ಅಕ್ರಮದ ಹಣಕ್ಕೋ ಬಲಿಯಾಗಬಾರದು. ಕೂಡಲೇ ಸರ್ಕಾರ ಈ ಬಗ್ಗೆ ಮರುಪರಿಶೀಲನೆ ನಡೆಸಿ, ಆರೋಪವಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಜನರ ವಿಶ್ವಾಸ ಗಳಿಸಬೇಕಿದೆ.
ಬೆಂಗಳೂರು ಕೋರಮಂಗಲದ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ನಡೆದ “ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 2025ನೇ ಸಾಲಿನ ‘ಮುಖ್ಯಮಂತ್ರಿಗಳ ಪದಕ’ ಪ್ರದಾನ ಮಾಡಿ ಅಭಿನಂದಿಸಿದರು.
”ನಮ್ಮ ಹಳ್ಳಿಗಳಲ್ಲಿ ಜೂಜಾಟದಿಂದ ಸಂಸಾರಗಳು ಬೀದಿಗೆ ಬರುತ್ತಿವೆ. ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೆ ನಮಗೇ ಬೆದರಿಕೆ ಹಾಕುತ್ತಾರೆ. ಇಂತಹವರಿಗೆ ಪದಕ ನೀಡುವುದು ಪ್ರಾಮಾಣಿಕ ಅಧಿಕಾರಿಗಳಿಗೆ ಮಾಡುವ ಅವಮಾನ.”
— ಸ್ಥಳೀಯ ನಿವಾಸಿಗಳು (ಹೆಸರು ಹೇಳಲು ಇಚ್ಛಿಸದ)
ಸೈಬರ್ ಅಪರಾಧಗಳು ಸೇರಿದಂತೆ ನಾನಾ ಅಪರಾಧಗಳಲ್ಲಿ ನಮ್ಮ ರಾಜ್ಯ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಲೇಬೇಕು. ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಯಾ ಠಾಣಾಧಿಕಾರಿಯ ಗಮನಕ್ಕೆ ಬರದಂತೆ ಯಾವುದೇ ಅಪರಾಧಗಳು, ಕೆಟ್ಟ ವ್ಯವಹಾರಗಳು ನಡೆಯಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ. ಯಾವೆಲ್ಲ ಅಪರಾಧಗಳ ಪ್ರಮಾಣ ಹೆಚ್ಚಾಗಿದೆ ಅವುಗಳ ನಿಯಂತ್ರಣದಲ್ಲೂ ನಾವು ಶ್ರಮ ಹಾಕಬೇಕಿದೆ. ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಆಗಬೇಕು ಎನ್ನುವ ಗುರಿ ನಮ್ಮ ಸರ್ಕಾರದ್ದಾಗಿದೆ. ಇದು ಪೊಲೀಸ್ ಇಲಾಖೆಯ ಗುರಿಯೂ ಆಗಬೇಕಿದೆ.
–ಸಿದ್ದರಾಮಯ್ಯ
ಮುಖ್ಯಮಂತ್ರಿ
ಕರ್ನಾಟಕ ಸರ್ಕಾರ
ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯಂತ ಉತ್ತಮವಾದ ಪೊಲೀಸ್ ವ್ಯವಸ್ಥೆ ಎಂಬ ಬಿರುದಿಗೆ ಪಾತ್ರವಾಗಿದೆ. ರಾಜ್ಯದಲ್ಲಿ ಶಾಂತಿ, ಸೌಹಾರ್ದತೆಯ ವಾತಾವರಣ ಮಾಡುವುದರಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಕೇಂದ್ರ ಗೃಹ ಇಲಾಖೆಯು ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದ 3ನೇ ಅತ್ಯುತ್ತಮ ಪೊಲೀಸ್ ಠಾಣೆ ಎಂದು ಗುರುತಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು, ಕವಿತಾಳ ಪೊಲೀಸ್ ಠಾಣೆಯಂತೆಯೇ ಅತ್ಯುತ್ತಮ ಪೊಲೀಸ್ ಠಾಣೆಗಳಾಗಬೇಕು ಎಂದು ಸರ್ಕಾರ ಬಯಸುತ್ತದೆ.
ಕರ್ನಾಟಕ ಸರ್ಕಾರದ ಗೃಹ ಮಂತ್ರಿ ಗೃಹ ಮಂತ್ರಿ ಪರಮೇಶ್ವರ್.