ಎಸ್ಎಸ್ಎಲ್ಸಿ ಪರೀಕ್ಷೆಗೆ ತಾಲೂಕು ಆಡಳಿತ ವತಿಯಿಂದ ಅಗತ್ಯ ಪೂರ್ವ ಸಿದ್ಧತೆ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸವಣೂರ ತಾಲೂಕ : ಮಾ. ೧೮ ರಿಂದ ಏ. ೨ರ ವರೆಗೆ ನಡೆಯಲಿರುವ ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗೆ ತಾಲೂಕು ಆಡಳಿತ ವತಿಯಿಂದ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ರವಿಕುಮಾರ ಕೊರವರ ತಿಳಿಸಿದರು.
ಪಟ್ಟಣದ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಂಡಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನಲ್ಲಿ ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಬಿಇಒ ಎಂ.ಎಫ್. ಬಾರ್ಕಿ ಮಾತನಾಡಿ, ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸವಣೂರ ತಾಲೂಕಿನಲ್ಲಿ ೯೭೯ ಬಾಲಕರು, ೧೦೪೯ ಬಾಲಕಿಯರು ಸೇರಿದಂತೆ ಒಟ್ಟು ೨೦೨೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ತಾಲೂಕಿನಲ್ಲಿ ಒಟ್ಟು ೮ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಮೂರು ಕೇಂದ್ರಗಳಾದ ಎಸ್ಎಫ್ಎಸ್ ಪ್ರೌಢ ಶಾಲೆ, ಸರ್ಕಾರಿ ಮಜೀದ ಪ್ರೌಢ ಶಾಲೆ, ಸರ್ಕಾರಿ ಮಜೀದ ಪದವಿ ಪೂರ್ವ ಕಾಲೇಜ್ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿನ ಐದು ಕೇಂದ್ರಗಳಾದ ಕುಣಿಮೆಳ್ಳಳ್ಳಿ, ಕಾರಡಗಿ, ಹತ್ತಿಮತ್ತೂರ, ಕಡಕೋಳ, ಹೂವಿನಶಿಗ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮ ಆಸನ ವ್ಯವಸ್ಥೆ, ಕುಡಿಯುವ ನೀರು, ಕೊಠಡಿಗಳ ಸ್ವಚ್ಛತೆ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ೨೦೦ ಮೀಟರ್ ವ್ಯಾಪ್ತಿಯಲ್ಲಿರುವ ಕೋಚಿಂಗ್, ಝರಾಕ್ಸ ಸೆಂಟರಗಳನ್ನು ಮುಚ್ಚಲು ಕ್ರಮ ಕೈಗೊಂಡಿದ್ದು, ಮೊಬೈಲ್, ಮೈಕ್ರೋಚಿಪ್ ಮತ್ತು ಸೂಕ್ಷ್ಮ ಉಪಕರಣಗಳ ಬಳಕೆಗೆ ನಿಷೇಧ ವಿಧಿಸಲು ಪೊಲೀಸ್ ಅಧಿಕಾರಿಗಳನ್ನು ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಿಸಲಾಗಿದೆ.
ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗಾಗಿ ಆರೋಗ್ಯ ಇಲಾಖೆಗೆ ಮತ್ತು ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಗೆ ತೊಂದರೆಯಾಗದಂತೆ ನಿರಂತರ ವಿದ್ಯುತ್ ಪೂರೈಕೆಗೆ ಹೆಸ್ಕಾಂ ಇಲಾಖೆಗೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪರೀಕ್ಷೆಗಳಲ್ಲಿ ನಕಲು ತಡೆಯಲು ತಾಲೂಕ ಮಟ್ಟದಲ್ಲಿ ವೀಕ್ಷಕರ ತಂಡ ಹಾಗೂ ಪ್ರತಿದಿನ ೮ ಪರೀಕ್ಷಾ ಕೇಂದ್ರಗಳಲ್ಲಿ ಸಿಟ್ಟಿಂಗ್ ಸ್ಕಾಂಡ್ಗಳನ್ನು ನೇಮಿಸಲಾಗಿದೆ.
ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಹಾಗೂ ರಾಜ್ಯ ಹಂತದಲ್ಲಿ ವೆಬ್ ಕ್ಯಾಸ್ಟಿಂಗ್ ಮೂಲಕ ಎಲ್ಲ ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಗಳು ವೀಕ್ಷಕ ತಂಡದೊಂದಿಗೆ ವೀಕ್ಷಣೆಗೊಳಪಟ್ಟಿವೆ ಎಂದರು. ತಾಪಂ ಇಒ ಬಿ.ಎಸ್. ಶಿಡೇನೂರ ಸೇರಿದಂತೆ ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.