ವೀರಮಾರ್ಗ ನ್ಯೂಸ್ : ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ರೈತರ ಸ್ವಾಭಿಮಾನದ ಸಂಕೇತವಾಗಿದ್ದು, ಮಂಡ್ಯ ಜಿಲ್ಲೆಯ ಸಮಸ್ತ ರೈತರ ಬ್ಯಾಂಕ್ ಆಗಿದೆ. ರೈತ ಬಾಂಧವರು ಡಿಸಿಸಿ ಬ್ಯಾಂಕ್ ನಲ್ಲಿ ವ್ಯವಹರಿಸಿ, ಸಾಲ ಪಡೆದ ಹಣವನ್ನು ಸದ್ಬಳಕೆ ಮಾಡಿಕೊಂಡು, ಬ್ಯಾಂಕಿನ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಬ್ಯಾಂಕಿನ ಅಧ್ಯಕ್ಷ ಸಚ್ಚಿನ್ ಚೆಲುವರಾಯಸ್ವಾಮಿ ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ನಡೆದ ಕೃಷ್ಣರಾಜಪೇಟೆ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಡಿಸಿಸಿ ಬ್ಯಾಂಕ್‍ನ ಸಿಬ್ಬಂದಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು ಮಂಡ್ಯ ಜಿಲ್ಲೆಯ ಸಮಸ್ತ ರೈತ ಬಾಂಧವರ ಬ್ಯಾಂಕ್ ಆಗಿದೆ. ಜಿಲ್ಲೆಯ ರೈತರು ತಮ್ಮ ಗ್ರಾಮದ ಸಮೀಪದಲ್ಲಿಯೇ ಇರುವ ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿದಂತೆ ಡಿಸಿಸಿ ಬ್ಯಾಂಕಿನ ಶಾಖೆಗಳಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಂಡು ಸಹಕಾರ ಸಂಸ್ಥೆಗಳಲ್ಲಿಯೇ ವ್ಯವಹಾರ ಮಾಡುವ ಮೂಲಕ ತಾವು ಅಭಿವೃದ್ಧಿ ಹೊಂದುವ ಜೊತೆಗೆ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಬ್ಯಾಂಕುಗಳನ್ನು ಲಾಭದತ್ತ ಮುನ್ನಡೆಸಬೇಕು ಎಂದು ಕಿವಿಮಾತು ಹೇಳಿದ ಅಧ್ಯಕ್ಷ ಸಚಿನ್ ಚೆಲುವರಾಯಸ್ವಾಮಿ ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸುವುದು ಸರಿಯಲ್ಲ ಸಹಕಾರ ಸಂಸ್ಥೆಯ ಮುಖ್ಯ ಧ್ಯೇಯದಂತೆ ನೀ ನನಗಾದರೆ, ನಾ ನಿನಗೆ ಎಂಬ ಘೋಷ ವಾಕ್ಯದ ಅಡಿಯಲ್ಲಿ ಸಹಕಾರ ತತ್ವದ ಆಧಾರದ ಮೇಲೆ ಕೆಲಸ ಮಾಡುವ ಮೂಲಕ ಸಹಕಾರ ಸಂಘಗಳನ್ನು ಲಾಭದತ್ತ ಕೊಂಡೊಯ್ಯುವ ಜೊತೆಗೆ ರೈತ ಬಾಂಧವರು ಕೂಡ ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಕೈಮುಗಿದು ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಡಾಲೂ ರವಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಹಕಾರ ಸಂಘಗಳು ಸೇರಿದಂತೆ ಡಿಸಿಸಿ ಬ್ಯಾಂಕ್ ಪ್ರಸ್ತುತ ಒಂದು ಎಕರೆ ಕೃಷಿ ಭೂಮಿಗೆ ನೀಡುತ್ತಿರುವ ಸಾಲದ ಪ್ರಮಾಣವನ್ನು ಒಂದು ಲಕ್ಷ ರೂಪಾಯಿಗಳಿಂದ ಹೆಚ್ಚು ಮಾಡುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯ ಹಸ್ತವನ್ನು ಚಾಚಬೇಕು ಗ್ರಾಮೀಣ ಪ್ರದೇಶದ ರೈತ ಬಾಂಧವರು ಪಶು ಸಂಗೋಪನೆ ಮಾಡಿ ಹೈನುಗಾರಿಕೆಯ ಮೂಲಕ ಕ್ಷೀರಕ್ರಾಂತಿ ಮಾಡಲು ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಡಿಸಿಸಿ ಬ್ಯಾಂಕಿನ ಸಹಕಾರವು ನಿರ್ಣಾಯಕವಾಗಿರುವುದರಿಂದ ರಂಗನಾಥಪುರ ಕ್ರಾಸ್’ನಲ್ಲಿ ಹೊಸದಾಗಿ ಡಿಸಿಸಿ ಬ್ಯಾಂಕ್ ಶಾಖೆಯನ್ನು ಆರಂಭಿಸಿ ರೈತ ಬಾಂಧವರು ಸಹಕಾರ ಬ್ಯಾಂಕಿನಲ್ಲಿಯೇ ವ್ಯವಹಾರ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶೀಳನೆರೆ ಅಂಬರೀಶ್ ಮಾತನಾಡಿ ನಾನು ಡಿಸಿಸಿ ಬ್ಯಾಂಕಿಗೆ ನೂತನವಾಗಿ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ನಾನು ಸೇಡಿನ ರಾಜಕಾರಣ ಮಾಡುವವನಲ್ಲ, ದ್ವೇಷದ ರಾಜಕಾರಣವು ನನಗೆ ಗೊತ್ತಿಲ್ಲ ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳು ಸೇರಿದಂತೆ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಓ ಗಳು ರೈತ ಪರವಾಗಿ ಕೆಲಸ ಮಾಡಿ ಬ್ಯಾಂಕಿಗೆ ರೈತರು ಪಾವತಿಸಬೇಕಾದ ಸಾಲದ ಹಣವನ್ನು ಸಕಾಲದಲ್ಲಿ ವಸೂಲು ಮಾಡಿ ಸಹಕಾರ ಸಂಘಕ್ಕೆ ರೈತರು ಸುಸ್ತಿ ಆಗದಂತೆ ನೋಡಿಕೊಳ್ಳಬೇಕು ಬ್ಯಾಂಕಿನಿಂದ ರೈತರಿಗೆ ದೊರೆಯಬಹುದಾದ ಎಲ್ಲ ರೀತಿಯ ಸಹಾಯ ಸೌಲಭ್ಯಗಳನ್ನು ಒದಗಿಸಿಕೊಡಲು ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಸಿಇಓಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಅಂಬರೀಶ್ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವನಜಾಕ್ಷಿ , ಮಂಡ್ಯ ಜಿಲ್ಲೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕದ ನಾಗಭೂಷಣ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ಮಂಡ್ಯ ಜಿಲ್ಲೆಯ ಡಿಸಿಸಿ ಬ್ಯಾಂಕಿನ ಸಾಲ ವಿಭಾಗದ ಮುಖ್ಯಸ್ಥ ಮಾದೇಗೌಡ, ಡಿಸಿಸಿ ಬ್ಯಾಂಕ್ ತಾಲೂಕು ಶಾಖೆಯ ಮುಖ್ಯ ವ್ಯವಸ್ಥಾಪಕ ಗಿರಿ ವರ್ಧನ್, ವೃತ್ತ ಮೇಲ್ವಿಚಾರಕರಾದ ಆದಿಲ್ ಪಾಶಾ, ರಘು, ಜಲೇಂದ್ರ, ರಾಘವೇಂದ್ರ, ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಎಸ್.ಎನ್.ಕುಮಾರ್, ಎಂ. ಎನ್.ಸತೀಶ್, ಸುರೇಶ್, ಪವನ್, ಪುಟ್ಟರಾಜು ಸೇರಿದಂತೆ ತಾಲೂಕಿನ ಎಲ್ಲಾ 32 ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಓಗಳು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಸ್ಥಿತರಿದ್ದರು. ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಾಸುರಾಜೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಘಲಯ ಶ್ರೀಧರ್, ಮುಖಂಡರಾದ ಹಾದನೂರು ಪರಮೇಶ್, ಜಾಗನಕೆರೆ ಅಂಬರೀಶ್, ಕೈಗೋನಹಳ್ಳಿ ಜಯರಾಮೇಗೌಡ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಜೆಡಿಎಸ್ ಮುಖಂಡ ಟಿಎಪಿಸಿಎಂಎಸ್ ಅಧ್ಯಕ್ಷ ತೆರ್ನೇನಹಳ್ಳಿ ಬಲದೇವ್ ಅವರ ಗೈರು ಹಾಜರಿಯು ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನ ನೂತನ ಅಧ್ಯಕ್ಷರಾದ ಸಚಿನ್ ಚೆಲುವರಾಯಸ್ವಾಮಿ ನಿರ್ದೇಶಕ ಶೀಳನರಿ ಅಂಬರೀಶ್ ಮನಮುಲ್ ನಿರ್ದೇಶಕ ಡಾಲು ರವಿ ಹಾಗೂ ಬ್ಯಾಂಕಿನ ಸಿಇಓ ವನಜಾಕ್ಷಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ್, ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.