ನಡು ರಸ್ತೆಯಲ್ಲಿ ಹೆಂಡತಿಗೆ ಗುಂಡಿಟ್ಟು ಜೀವ ತೆಗೆದ ಗಂಡ -ಬೆಚ್ಚಿಬಿದ್ದ ಬೆಂಗಳೂರು..
ಪತಿಯೇ ಪತ್ನಿಯನ್ನು ಶೂಟ್ ಮಾಡಿ ಜೀವ ತೆಗೆದ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಸವೇಶ್ವರನಗರದ ವೆಸ್ಟ್ ಇನ್ ಹೋಟೆಲ್ ಬಳಿ ಕೃತ್ಯ ನಡೆದಿದೆ. ಯಾಕೆ ಈ ಘಟನೆ ನಡೆಯಿತು? ಪ್ರಕರಣ ಈಗ ಏನಾಗಿದೆ ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ..
ವೀರಮಾರ್ಗ ನ್ಯೂಸ್ : ಬೆಂಗಳೂರು : ಪತಿಯೇ ಪತ್ನಿಯನ್ನು ಶೂಟ್ ಮಾಡಿ ಜೀವ ತೆಗೆದ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಸವೇಶ್ವರನಗರದ ವೆಸ್ಟ್ ಇನ್ ಹೋಟೆಲ್ ಬಳಿ ಕೃತ್ಯ ನಡೆದಿದೆ.
ಕೌಟುಂಬ ಕಲಹ ಹಿನ್ನೆಲೆಯಲ್ಲಿ ಪತಿ ಬಾಲ ಮುರುಗನ್ ಹಾಗೂ ಪತ್ನಿ ಭುವನೇಶ್ವರಿ ನಡುವೆ ಡಿವೋರ್ಸ್ ಕೇಸ್ ನಡೆಯುತ್ತಿತ್ತು. ನಿನ್ನೆ ಸಂಜೆ 6.30ರ ವೇಳೆಯಲ್ಲಿ ಕೋರ್ಟ್ ಕೇಸ್ ಮುಗಿಸಿಕೊಂಡು ಭುವನೇಶ್ವರಿ ಬರುತ್ತಿದ್ದ ವೇಳೆ ಪತಿ ಬಾಲ ಮುರುಗನ್ ಎದುರಾಗಿದ್ದ. ಇಬ್ಬರ ನಡುವೆ ಜಗಳ ತಾರಕಕ್ಕೇರಿ ಪತ್ನಿಗೆ ಶೂಟ್ ಮಾಡಿದ ಬಾಲಮುರುಗನ್ ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ತಮಿಳುನಾಡು ಮೂಲದ ದಂಪತಿ ಇವರಾಗಿದ್ದು ಬಾಲ ಮುರುಗನ್ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ಇನ್ನು ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ನಾಲ್ಕು ಬಾರಿ ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ. 2 ಗುಂಡು ತಲೆಗೆ ಹಾಗೂ 2 ಗುಂಡು ಕೈಗೆ ತಗುಲಿದೆ, ಪಿಸ್ತೂಲ್ಗೆ ಲೈಸೆನ್ಸ್ ಇದ್ಯಾ, ಇಲ್ವಾ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ : ಚನ್ನೇಶ್, ಬೆಂಗಳೂರು.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ತಿದ್ದುಪಡಿ ಮಸೂದೆ ಹಿಂಪಡೆಯಲಿ
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ,ವ್ಯಾಪಕವಾಗಿ ಹಣವನ್ನು ದೋಚಲಾಗುತ್ತಿದೆ ಎನ್ನುವ ಕಾರಣ ನೀಡಿ ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಬದಲಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಪತ್ರಿಕಾ ಹೇಳಿಕೆ ಮುಖಾಂತರ ಆಗ್ರಹ ಪಡಿಸಿದರು.
ಸಂಪೂರ್ಣ ಒಕ್ಕೂಟ ಸರ್ಕಾರ ಪ್ರಾಯೋಜಿತವಾಗಿರುವ ಈ ಯೋಜನೆಗೆ ಒಕ್ಕೂಟ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಕಡಿತ ಮಾಡಿ, ರಾಜ್ಯ ಸರ್ಕಾರಗಳು ಕೂಡ ಹಣವನ್ನು ನೀಡಬೇಕೆಂದು ತಿದ್ದುಪಡಿ ತರುವುದರಿಂದ ಯಾವ ರೀತಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಲಾಗುತ್ತದೆ ಎಂದು ತಿಳಿಯುತ್ತಿಲ್ಲ. ಅನುದಾನದ ಮೂಲ ಯಾವುದಿದ್ದರೂ ಕೂಡ, ಹಣವನ್ನು ದೋಚುವುದುಕ್ಕೆ ಯಾವುದೇ ಕಡಿವಾಣ ಬೀಳುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇತರೆ ಯೋಜನೆಗಳಂತೆ, ಈ ಯೋಜನೆಯಲ್ಲಿಯೂ ಕೂಡ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಸ್ಥಳೀಯವಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದೆ. ಈ ಭ್ರಷ್ಟಾಚಾರದಲ್ಲಿ ಒಕ್ಕೂಟ ಸರ್ಕಾರ ನಡೆಸುತ್ತಿರುವ ಬಿಜೆಪಿ ಮತ್ತು ಅದರಲ್ಲಿ ಪಾಲುದಾರಾಗಿರುವ ಅವರ ಮಿತ್ರ ಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಭಾಗಿಯಾಗಿವೆ. ಈ ವಿಚಾರಗಳು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯವಾಗಿದೆ. ಒಕ್ಕೂಟ ಸರ್ಕಾರವು, ಈ ಯೋಜನೆಗೆ ನೀಡಿರುವ ಅನುದಾನ ಯಾವ ರೀತಿ ದೋಚಲಾಗಿದೆ ಮತ್ತು ಆ ಹಣ ಯಾವೆಲ್ಲ ದೇಶದ್ರೋಹಿ ಕೆಲಸಗಳಿಗೆ ಬಳಕೆಯಾಗುತ್ತಿದೆ ಎಂದು ತನ್ನ ತನಿಖಾ ಸಂಸ್ಥೆಗಳ ಮೂಲಕ ತನಿಖೆ ಮಾಡಿಸುವ ಕೆಲಸವನ್ನು ಒಕ್ಕೂಟ ಸರ್ಕಾರ ಮೊದಲು ಮಾಡಬೇಕಿದೆ, ಆದರೆ ಆ ಕೆಲಸ ಅವರಿಗೆ ಬೇಕಾಗಿಲ್ಲ. ತನಿಖಾ ಸಂಸ್ಥೆಗಳನ್ನು ಇಂತಹ ಭ್ರಷ್ಟಾಚಾರದ ತನಿಖೆ ಮಾಡಲು ಬಳಸಿಕೊಳ್ಳದೆ, ತನ್ನ ರಾಜಕೀಯ ಮತ್ತು ಸೈದ್ದಾಂತಿಕ ವಿರೋಧಿಗಳನ್ನು ಮಣಿಸಲು ಬಳಕೆ ಮಾಡುತ್ತಿದೆ.
ಬೃಹತ್ ಪ್ರಮಾಣದಲ್ಲಿ ಹಣ ದೋಚಲಾಗುತ್ತಿದೆ ಎಂದು ಹೇಳುತ್ತಿರುವ ಒಕ್ಕೂಟ ಸರ್ಕಾರವು, ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ, ಭ್ರಷ್ಟಾಚಾರ ತಡೆಯಲು ಯಾವ ಕ್ರಮವನ್ನು ಕೈಗೊಂಡಿರುವುದಿಲ್ಲ, ದೇಶದ ಬಹುತೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು, ಅಂದರೆ, ತನ್ನದೇ ಪಕ್ಷದವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಅದು ಬಿಜೆಪಿ ಪಕ್ಷವು ನೇರವಾಗಿ ಒಪ್ಪಿಕೊಂಡತಾಯಿತು ಮತ್ತು ತನ್ನದೇ ಪಕ್ಷದವರಿಂದ ನಡೆಯುತ್ತಿರುವ ಈ ಮಹಾ ಭ್ರಷ್ಟಾಚಾರವನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿದೆ. ಕೇವಲ ಅನುದಾನದಲ್ಲಿ ರಾಜ್ಯ ಸರ್ಕಾರದ ಪಾಲು ಇದೆ ಎಂದ ಮಾತ್ರಕ್ಕೆ, ರಾಜ್ಯ ಸರ್ಕಾರಗಳು ಹಣವನ್ನು ಸದ್ಭಳಕೆ ಮಾಡಿಕೊಳ್ಳುತ್ತವೆ ಎಂದು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಈಗಲೂ ಭ್ರಷ್ಟಾಚಾರ ನಿಗ್ರಹಿಸುವ ಮೂಲಕ ಈ ಯೋಜನೆಯನ್ನು ಸರಿದಾರಿಗೆ ತರುವ ಸಂಪೂರ್ಣ ಅವಕಾಶ ಒಕ್ಕೂಟ ಸರ್ಕಾರದ ಮುಂದಿದೆ, ಆದರೆ ಅದ್ಯಾವ ಕ್ರಮವನ್ನು ಮಾಡದೆ, ಭ್ರಷ್ಟಾಚಾರವನ್ನು ನೆಪವಾಗಿಸಿಕೊಂಡು ತನ್ನ ಅನೂಕಲಕ್ಕೆ ತಕ್ಕಂತೆ ಯೋಜನೆಯಲ್ಲಿ ಬದಲಾವಣೆ ಮಾಡಲು ಮುಂದಾಗಿರುವುದು ದುರುದ್ದೇಶ ಎನ್ನುವುದು ಸ್ಪಷ್ಟವಾಗಿದೆ. ಇಲ್ಲಿಯವರೆಗೂ ಈ ವಿಚಾರದ ಬಗ್ಗೆ ಎಂದೂ ಚಕಾರವೆತ್ತದೆ, ಏಕಾಏಕಿ ಬದಲಾವಣೆ ತರಲು ಹೊರಟಿರುವುದು ಅದರ ದುರುದ್ದೇಶವೆ ಹೊರತು ಮತ್ತಿನ್ನೇನಿಲ್ಲ. ರಾಜ್ಯ ಸರ್ಕಾರಗಳೂ ಕೂಡಾ ಈ ಯೋಜನೆಗೆ ಅನುದಾನ ನೀಡುವ ಮೂಲಕ ತನ್ನ ಪಾಲಿನ ಅನುದಾನದಲ್ಲಿ ಕಡಿತ ಮಾಡಿ, ಉಳಿದ ಹಣವನ್ನು ತನ್ನಿಷ್ಟದ ರಾಜ್ಯಗಳಿಗೆ ಹಂಚಿಕೆ ಮಾಡುವ, ಆ ಮೂಲಕ ಕರ್ನಾಟಕ ಸೇರಿದಂತೆ ಇತರೆ ಕೆಲವು ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮತ್ತು ದುರ್ಬಲಗೊಳಿಸಿ, ಇಡೀ ಯೋಜನೆಯೆ ಸಂಪೂರ್ಣವಾಗಿ ನಿಷ್ಕ್ರಿಯವಾಗುವಂತಹ ಸ್ಥಿತಿಗೆ ತರುವುದು ಹಾಗು ನಿಷ್ಕ್ರಿಯವಾಗಲು ಆಗ ರಾಜ್ಯಗಳನ್ನು ನೆಪ ಮಾಡುವುದು ಈ ತಿದ್ದುಪಡಿಯ ಮೂಲ ಉದ್ದೇಶವಾಗಿದೆ. ಇದರಿಂದ, ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಗ್ರಾಮೀಣ ಭಾಗದ ಸಣ್ಣ ರೈತರು, ಕೃಷಿಯಿಂದ ವಿಮುಖರಾಗಿ, ಭೂಮಿಯನ್ನು ಮಾರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣ ಮಾಡಿ, ಭೂಮಿಯನ್ನು ಕೈಗಾರಿಕೆಗಳಿಗೆ ಒದಗಿಸುವುದು, ಬೃಹತ್ ಹಿಡುವಳಿದಾರರಿಗೆ ಅನುಕೂಲ ಮಾಡಿಕೊಡುವುದು, ಭೂ ವಂಚಿತರಾದವರು ಕಡಿಮೆ ಹಣಕ್ಕೆ ಕಾರ್ಖಾನೆಗಳಲ್ಲಿ ಗುಲಾಮರಂತೆ ಕೆಲಸ ಮಾಡಬೇಕಾದ ವಾತಾವರಣ ನಿರ್ಮಿಸುವುದು ಈ ತಿದ್ದುಪಡಿಗಳ ಮೂಲಕ ಸಾಧಿಸಲು ಹೊರಟಿರುವ ಹಿನ್ನೆಲೆಯಲ್ಲಿನ ಅಜೆಂಡಾಗಳಾಗಿವೆ. ಒಕ್ಕೂಟ ಸರ್ಕಾರದ ಈ ದುರುದ್ದೇಶದಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಜನರ ತಕ್ಕ ಮಟ್ಟಿಗೆ ನೆಮ್ಮದಿಯ ಜೀವನವನ್ನು ಕಿತ್ತುಕೊಂಡು, ಬಡವರನ್ನು ಮತ್ತಷ್ಟು ನಿರ್ಗತಿಕರನ್ನಾಗಿ ಮಾಡಲಾಗುತ್ತದೆ. ಜನರಿಗೆ ಅತ್ಯವಶ್ಯಕವಾಗಿರುವ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ಒದಗಿಸಲಾಗದ ಸರ್ಕಾರಗಳು, ಈಗ ಅವರ ದುಡಿಮೆಗೂ ಕೂಡ ಅಡ್ಡಗಾಲು ಹಾಕಲು ಮುಂದಾಗುತ್ತಿರುವುದು ದುರದೃಷ್ಟಕರ ಮತ್ತು ಇದರಿಂದ ಅವರು ಆರೋಗ್ಯ ಮತ್ತು ಶಿಕ್ಷಣ ಪಡೆಯುವಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಭ್ರಷ್ಟಾಚಾರ ತಡೆಯುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ, ಇಲ್ಲಿಯವರೆಗೂ ಯಾವ ಭ್ರಷ್ಟಾಚಾರವನ್ನು ತಡೆದಿರುವುದಿಲ್ಲ, ಆದರೆ ಭ್ರಷ್ಟಾಚಾರ ತಡೆಯಲಾಗಿದೆ ಎಂದು ನಂಬಿಸಲು ಮಾತ್ರ ಯಶಸ್ವಿಯಾಗಿದೆ.
ಉದ್ಯೋಗ ಖಾತ್ರಿ ಮತ್ತು ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀಡಬೇಕಾದ ತನ್ನ ಪಾಲಿನ ಅನುದಾನದ ಬಿಡುಗಡೆಯಲ್ಲಿ ನಿರಂತರವಾಗಿ ವಿಳಂಬ ಮಾಡಿ, ರಾಜ್ಯಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಾಗುತ್ತಿದೆ. ಯೋಜನೆಗಳಲ್ಲಿ ತನ್ನ ಪಾಲು ಸಣ್ಣದಿದ್ದರೂ ಕೂಡಾ ಕೂಡ ಹೆಸರು ಮಾತ್ರ ಒಕ್ಕೂಟ ಸರ್ಕಾರದ್ದೇ ಇರಬೇಕು ಮತ್ತು ಆ ಮೂಲಕ ಪ್ರಚಾರ ಪಡೆದುಕೊಳ್ಳುವ ಕುತಂತ್ರವೂ ಇದರಲ್ಲಿ ಮತ್ತೊಮ್ಮೆ ಕಂಡುಬರುತ್ತಿದೆ. ಒಕ್ಕೂಟ ಸರ್ಕಾರದಿಂದ ಅನುದಾನ ಪಡೆಯುವಲ್ಲಿ, ಯೋಜನೆಗಳಲ್ಲಿ ನಿರಂತರವಾಗಿ ಅನ್ಯಾಯಕ್ಕೊಳಗಾಗುತ್ತಿರುವ ಕರ್ನಾಟಕಕ್ಕೆ ಈ ತಿದ್ದುಪಡಿಯು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಹಿನ್ನೆಡೆಯನ್ನು ಮಾಡುತ್ತದೆ.
ಉದ್ಯೋಗ ಖಾತ್ರಿ ಯೋಜನೆಗೆ ತಿದ್ದುಪಡಿ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸುತ್ತದೆ. ಹಾಗೆಯೆ, ಈ ಯೋಜನೆಯಲ್ಲಿ ನಡೆಯುತ್ತಿರುವ ಮಹಾ ಭ್ರಷ್ಟಾರವನ್ನು ತಡೆಯಲು ವ್ಯಾಪಕ ಅವಕಾಶಗಳಿದ್ದು, ಅವನ್ನು ಬಲಸಿಕೊಂಡು ಸಾರ್ವಜನಿಕ ಹಣ ಸಧ್ಬಳಕೆಯಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಕೂಡ ಆಗ್ರಹಿಸುತ್ತದೆ.
ವಂದನೆಗಳು
ನಿರುಪಾದಿ ಕೆ ಗೋಮರ್ಸಿ
ರಾಜ್ಯ ಕಾರ್ಯದರ್ಶಿ ರಾಜ್ಯ ರೈತ ಘಟಕ.