ವೀರಮಾರ್ಗ ನ್ಯೂಸ್ : K R PETE : ಗೊರವಿ ಗ್ರಾಮದಲ್ಲಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ.. ಪ್ರಾಣ ಚಿಕಿತ್ಸೆ, ಹೀಲಿಂಗ್ ಚಮತ್ಕಾರಿ ಚಿಕಿತ್ಸೆ ಪಡೆದು ಸಂಭ್ರಮಿಸಿದ ಮಹಿಳೆಯರು ಹಾಗೂ ವಯೋವೃದ್ಧರು. ಮಾನಸಿಕ ಒತ್ತಡವನ್ನು ನಿಯಂತ್ರಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಾಣಿಕ್ ಹೀಲಿಂಗ್ ಥೆರಪಿ ಚಿಕಿತ್ಸಾ ಪದ್ಧತಿಯು ವರದಾನವಾಗಿದೆ ಎಂದು ನಾಡಿನ ಖ್ಯಾತ ವೈದ್ಯರಾದ ಡಾ.ಪ್ರಿಯದರ್ಶಿನಿ ಹೇಳಿದರು. ಅವರು ಕೃಷ್ಣರಾಜಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಗೊರವಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಂಗಳೂರಿನ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಒತ್ತಡದ ಜೀವನದಲ್ಲಿ ಮಕ್ಕಳು ಯುವ ಜನರು ಸೇರಿದಂತೆ ಮಧ್ಯವಯಸ್ಕರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಪೌಷ್ಟಿಕತೆ ಹಾಗೂ ಸತ್ವವಿಲ್ಲದ ಇಂದಿನ ಆಹಾರ ಪದ್ಧತಿಯಿಂದ, ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸರ್ವೇ ಸಾಮಾನ್ಯವಾಗಿದೆ, ಆದ್ದರಿಂದ ಪ್ರಾಣ ಚಿಕಿತ್ಸೆಯ ಚಮತ್ಕಾರಿ ಹೀಲಿಂಗ್ ವೈದ್ಯಕೀಯ ಚಿಕಿತ್ಸಾ ಕ್ರಮವು ಮಾನಸಿಕ ಒತ್ತಡಗಳ ಮುಕ್ತಿಗೆ ಹಾಗೂ ಶೀಘ್ರ ಗುಣಮುಖರಾಗಲು ವರದಾನವಾಗಿದೆ ಎಂದು ತಿಳಿಸಿದ ಡಾ.ಪ್ರಿಯದರ್ಶಿನಿ ಗ್ರಾಮೀಣ ಪ್ರದೇಶದ ಜನರು ಪೌಷ್ಟಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳು ಹಾಗೂ ಶುದ್ಧವಾದ ಕುಡಿಯುವ ನೀರನ್ನು ಬಳಸುವ ಜೊತೆಗೆ ಬಯಲು ಮಲವಿಸರ್ಜನಾ ಕ್ರಮವನ್ನು ತಪ್ಪಿಸಿ ತಮ್ಮ ತಮ್ಮ ಮನೆಗಳಲ್ಲಿಯೇ ಶೌಚಾಲಯಗಳನ್ನು ನಿರ್ಮಿಸಿಕೊಂಡು ವೈಯಕ್ತಿಕ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಗಮನಹರಿಸಿ ರೋಗಗಳಿಂದ ಮುಕ್ತರಾಗಿ ಆರೋಗ್ಯವಂತ ಜೀವನವನ್ನು ನಡೆಸಬೇಕು ಎಂದು ಕೈಮುಗಿದು ಮನವಿ ಮಾಡಿದರು.
ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೊರವಿ ಮಂಜುನಾಥ್ ಮಾತನಾಡಿ ಬೆಂಗಳೂರಿನ ಮಲ್ಲೇಶ್ವರಂನ ಹೆಸರಾಂತ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 50ಕ್ಕೂ ಹೆಚ್ಚಿನ ತಜ್ಞ ವೈದ್ಯರ ತಂಡವು ಇಂದು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಗೊರವೇ ಗ್ರಾಮಕ್ಕೆ ಆಗಮಿಸಿ ಗ್ರಾಮದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಜೊತೆಗೆ ರಕ್ತದ ಒತ್ತಡ ಸಕ್ಕರೆ ಕಾಯಿಲೆ ಗರ್ಭಕೋಶ ಸಮಸ್ಯೆ ಮೂಳೆ ರೋಗಗಳು ಚರ್ಮರೋಗ, ಮೂಲ ವ್ಯಾಧಿಗಳು ಸೇರಿದಂತೆ ವಿವಿಧ ರೋಗಗಳಿಂದ ಮುಕ್ತರಾಗಲು ಅನುಸರಿಸಬೇಕಾದ ಮುಂಜಾಗರೂಕತ ಕ್ರಮಗಳು ಹಾಗೂ ಧ್ಯಾನ ಯೋಗದ ಬಗ್ಗೆ ಅರಿವನ್ನು ಮೂಡಿಸಿದ್ದಾರೆ. ಇಂದು ಗೊರವಿ, ಬಿಲ್ಲೇನಹಳ್ಳಿ, ಹೆತ್ತಗೋನಹಳ್ಳಿ, ಶ್ಯಾರಹಳ್ಳಿ, ಸಾರಂಗಿ, ಆದಿಹಳ್ಳಿ, ರಂಗನಾಥಪುರ, ದೊಡ್ಡ ಹಾರನಹಳ್ಳಿ, ಜೊತ್ತನಪುರ, ಚಿಕ್ಕಹಾರನಹಳ್ಳಿ, ಹರಪನಹಳ್ಳಿ, ಮಾಳಗೂರು ಗ್ರಾಮಗಳ 500ಕ್ಕೂ ಹೆಚ್ಚು ಗ್ರಾಮೀಣ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆಗೆ ಒಳಗಾಗಿ ಉಚಿತವಾಗಿ ಔಷಧಗಳನ್ನು ಪಡೆದುಕೊಂಡು ಆರೋಗ್ಯ ಸಂವರ್ಧನೆಯ ಬಗ್ಗೆ ಜಾಗೃತಿ ಹೊಂದಿದ್ದಾರೆ ಎಂದು ಹೇಳಿದರು. ಗೊರವಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜೇಗೌಡ, ಪ್ರಗತಿ ಬಂದು ಸ್ತ್ರೀಶಕ್ತಿ ಸ್ವಸಾಯ ಸಂಘಗಳ ಪ್ರತಿನಿಧಿಗಳಾದ ಪುಷ್ಪಾವತಿ, ಗೀತಾ, ಪ್ರೇಮಾ, ಶ್ರೀಲಕ್ಷ್ಮಿ, ಮಂಜುಳಾ, ಬೋರೇಗೌಡ, ನರಸೇಗೌಡ, ನಾರಾಯಣಗೌಡ ಸೇರಿದಂತೆ ಗ್ರಾಮದ ಮುಖಂಡರು, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳು ಉಚಿತ ಆರೋಗ್ಯ ತಪಾಸಣಾ ಶಿಬಿರದ ನೇತೃತ್ವ ವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.