ಶಾಸಕರ ಎದುರೇ ಮಟ್ಕಾ : ಪಿಎಸ್ಐ ಬಸವರಾಜ್ ಅಮಾನತು
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಗುತ್ತಲ : ಹೋಬಳಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಮಟ್ಕಾ ದಂಧೆಯನ್ನು ಶಾಸಕ ರುದ್ರಪ್ಪ ಲಮಾಣಿ ಅವರು ಪತ್ತೆ ಮಾಡಿದ್ದು, ಇದರ ಬೆನ್ನಲ್ಲೇ ಕರ್ತವ್ಯಲೋಪ ಆರೋಪದಡಿ ಗುತ್ತಲ ಠಾಣೆಯ ಪಿಎಸ್ಐ ಬಸನಗೌಡ ಬಿರಾದಾರ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಗುತ್ತಲದ ನಾಡ ಕಚೇರಿ ಉದ್ಘಾಟನೆ ಮತ್ತು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಮಾ. 2ರಂದು ಶಾಸಕ ರುದ್ರಪ್ಪ ಹೋಗಿದ್ದರು. ಅವರಿಗೆ ಮುತ್ತಿಗೆ ಹಾಕಿದ್ದ ಸ್ಥಳೀಯ ಮಹಿಳೆಯರು, ಕೊಠಡಿಯೊಂದರಲ್ಲಿ ನಡೆಯುತ್ತಿದ್ದ ಮಟ್ಕಾ ಬಗ್ಗೆ ಮಾಹಿತಿ ನೀಡಿದ್ದರು.
ಅದರಂತೆ ಕೊಠಡಿ ಮೇಲೆ ದಾಳಿ ಮಾಡಿದ್ದ ಶಾಸಕ ರುದ್ರಪ್ಪ ಲಮಾಣಿ, ಮಟ್ಕಾ ಬರೆಯುತ್ತಿದ್ದ ಆರೋಪಿ ಮುತ್ತಪ್ಪ ಪುಟ್ಟಪ್ಪ ರಾಮಣ್ಣನವರ (30) ಎಂಬುವವರನ್ನು ಪುರಾವೆ ಸಮೇತ ಹಿಡಿದಿದ್ದರು. ನಂತರ, ಪಿಎಸ್ಐ ಅವರನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡಿದ್ದರು. ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
‘ಕೊಠಡಿಯಲ್ಲಿ ಮಟ್ಕಾ ನಡೆಯುತ್ತಿದ್ದ ಬಗ್ಗೆ ಮಾಹಿತಿ ನೀಡಿದರೂ ಪಿಎಸ್ಐ ಬಸನಗೌಡ ಬಿರಾದಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮಟ್ಕಾ ದಂಧೆಕೋರರ ಜೊತೆಗೆ ಅವರು ಶಾಮೀಲಾಗಿರುವ ಅನುಮಾನವಿದೆ’ ಎಂದು ಜನರು ದೂರಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕ ರುದ್ರಪ್ಪ, ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಲುಪಿಸಿದ್ದರು.
ಮಟ್ಕಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಾವಣಗೆರೆ ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರು, ಪಿಎಸ್ಐ ಬಸನಗೌಡ ಬಿರಾದಾರ ಅವರನ್ನು ಕೆಲಸದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇಲಾಖೆ ವಿಚಾರಣೆಗೆ ನಿರ್ದೇಶನ ನೀಡಿದ್ದಾರೆ.