ಹೋರಿ ತಿವಿದು ವೃದ್ಧ ಸಾವು, ಇಬ್ಬರು ಗಂಭೀರ…
ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಬಲಿಪಾಡ್ಯಮಿಯ ದನ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ವಯೋವೃದ್ಧ ವ್ಯಕ್ತಿ ಸಾವನ್ನಪ್ಪಿದ್ದಾರೆ.
ವೀರಮಾರ್ಗ ನ್ಯೂಸ್ : ಹಾವೇರಿ : ಕೊಬ್ಬರಿ ಹೋರಿ ತಿವಿದು ಓರ್ವ ವಯೋವೃದ್ಧ ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ಇಂದು ನಡೆಯಿತು. ಮೃತರನ್ನು 70 ವರ್ಷದ ಚಂದ್ರಶೇಖರ್ ಕೊಡಿಹಳ್ಳಿ ಎಂದು ಗುರುತಿಸಲಾಗಿದೆ.
ಚಂದ್ರಶೇಖರ ಕೋಡಹಳ್ಳಿ ಅವರು ಹಾವೇರಿಯ ದಾನೇಶ್ವರಿನಗರದ ನಿವಾಸಿ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಗಿದೆ. ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಿ ವಾಪಸ್ ಮನೆಗೆ ಹೋಗುತ್ತಿದ್ದ ವೇಳೆ, ಹಿಂದಿನಿಂದ ಹೋರಿ ತಿವಿದು ಘಟನೆ ನಡೆದಿದೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದೀಪಾವಳಿ ಅಂಗವಾಗಿ ದನ ಬೆದರಿಸುವ ಸ್ಪರ್ಧೆ :
ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವ ಪ್ರತಿವರ್ಷ ದೀಪಾವಳಿಯಂದು ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಜಾತ್ರಾ ಸಮಿತಿ ಬಲಿಪಾಡ್ಯಮಿಯಂದು ದನ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸುತ್ತದೆ. ಈ ಸ್ಪರ್ಧೆಯಲ್ಲಿ ಯಾವುದೇ ಬಹುಮಾನ ಇರುವುದಿಲ್ಲ. ಸ್ಪರ್ಧೆ ನಡೆದ ನಂತರ ಬೇರೆ ಕಡೆ ಸ್ಪರ್ಧೆಗಳಲ್ಲಿ ಹೋರಿಗಳಿಗೆ ಬಹುಮಾನ ನೀಡಲಾಗುತ್ತದೆ. ಈ ವರ್ಷದ ಸ್ಪರ್ಧೆ ನಡೆಯಿತು. ಹಾವೇರಿ ನಗರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ರೈತರು ತಮ್ಮ ನೆಚ್ಚಿನ ಹೋರಿಗಳನ್ನು ಸ್ಪರ್ಧೆಗೆ ಕರೆತಂದಿದ್ದರು. ಸ್ಪರ್ಧೆಯಲ್ಲಿ ಸುಮಾರು 300ಕ್ಕೂ ಅಧಿಕ ಕೊಬ್ಬರಿ ಹೋರಿಗಳು ಭಾಗಿಯಾಗಿದ್ದವು.
ಗಮನ ಸೆಳೆದ ಹೋರಿಗಳ ಹೆಸರುಗಳು: ರೈತರು ತಮ್ಮ ನೆಚ್ಚಿನ ಹೋರಿಗಳಿಗೆ ವಿಶೇಷ ಹೆಸರುಗಳ ಇಟ್ಟು ಆಖಾಡದಲ್ಲಿ ಬಿಟ್ಟಿದ್ದರು. ಹಾವೇರಿ ಕಾ ರಾಜಾ, ಭೈರವ, ಜಾನ್, ಹಾವೇರಿ ಹುಲಿ, ಸಾರಥಿ, ಹಾವೇರಿ ಎಂಪಿ, ಹಾವೇರಿ ಕ್ರಾಂತಿ, ಏಕಲವ್ಯ ಸೇರಿದಂತೆ ಹಲವು ಬಗೆಯ ಹೋರಿಗಳ ಹೆಸರುಗಳ ಗಮನ ಸೆಳೆದವು.
ಹೋರಿ ಬಿಡುತ್ತಿದ್ದಂತೆ ಆಯೋಜಕರ ಧ್ವನಿವರ್ಧಕದಲ್ಲಿ ಅನೌನ್ಸ್ ಮಾಡುತ್ತಿದ್ದರು. “ಹೋರಿ ಬಿಟ್ಟಾರ ಕದ ಹಾಕ್ರಿ” ಎನ್ನುತ್ತಿದ್ದಂತೆ ಎಚ್ಚೆತ್ತುಕೊಂಡ ಪೈಲ್ವಾನರು ಕೊಬ್ಬಿದ ಹೋರಿಗಳ ಕೊಬ್ಬರಿಗೆ ಕೈ ಹಾಕುತ್ತಿದ್ದರು. ಹೋರಿ ಬಿಡುತ್ತಿದ್ದಂತೆ ನಾಗಾಲೋಟದಲ್ಲಿ ಓಡುತ್ತಿದ್ದ ಹೋರಿಗಳು ಫೈಲ್ವಾನರಿಗೆ ಸಿಗದೆ ಕ್ಷಣಾರ್ಧದಲ್ಲಿ ಮಾಯವಾಗುತ್ತಿದ್ದವು. ಮಿಂಚಿನಂತೆ ಕಣ್ಮರೆಯಾಗುತ್ತಿದ್ದ ಹೋರಿಗಳ ರಭಸಕ್ಕೆ ಪೈಲ್ವಾನರೂ ಸಹ ಕ್ಷಣಕಾಲ ದಂಗಾಗುತ್ತಿದ್ದರು. ಇನ್ನು ಕೆಲ ಹೋರಿಗಳು ಪೈಲ್ವಾನರ ಕೈಗೆ ಸಿಗುತ್ತಿದ್ದಂತೆ ಮುತ್ತಿಗೆ ಹಾಕುತ್ತಿದ್ದ ಪೈಲ್ವಾನರ ಹೋರಿಗೆ ಕಟ್ಟಿದ ಕೊಬ್ಬರಿ ಸರ ಹರಿಯುತ್ತಿದ್ದರು. ಹೋರಿ ಪೈಲ್ವಾನರ ಕೈ ತಪ್ಪಿಸಿಕೊಳ್ಳುತ್ತಿದ್ದಂತೆ ಹೋರಿ ಮಾಲೀಕರು ಹರ್ಷ ಕೇಕೆಗಳು ಮುಗಿಲು ಮುಟ್ಟುತ್ತಿದ್ದವು. ಅಖಾಡದಲ್ಲಿ ಹೋರಿ ಬಿಡುತ್ತಿದ್ದಂತೆ ಕೇಕೆ ಸಿಳ್ಳೆಗಳ ಅಬ್ಬರ ಜೋರಾಗಿತ್ತು.
ಹೋರಿಗಳಿಗೆ ವಿಶೇಷ ಅಲಂಕಾರ: ರೈತರು ಕೊಬ್ಬರಿ
ಹೋರಿಗಳಿಗೆ ವಿಶೇಷವಾದ ಅಲಂಕಾರ ಮಾಡಿಕೊಂಡು ಬಂದಿದ್ದರು. ಕೊಂಬಿಗೆ ಕೋಲ್ಮಣಸು, ಜೂಲಾ, ಬಲೋನ್, ರಿಬ್ಬನ್, ಗಂಟೆ, ನಾಗಮುಖವಾಡ, ಕಾಲಿಗೆ ವಿಶೇಷವಾದ ವಸ್ತ್ರಗಳಿಂದ ಅಲಂಕರಿಸಿದ್ದರು. ಕೆಲ ರೈತರು ಎತ್ತಿಗೆ ಮೈತುಂಬಾ ಕೊಬ್ಬರಿ ಸರ ಕಟ್ಟಿಕೊಂಡು ಬಂದಿದ್ದರು. ಬಲೂನ್‌ಗಳ ಅಲಂಕಾರ ಮಾಡಲಾಗಿತ್ತು. ಕೆಲ ಹೋರಿಗಳಿಗೆ ಹೆಸರಿನ ಮುಖವಾಡ ಮಾಡಿಸಲಾಗಿತ್ತು. ಕೊಬ್ಬರಿ ಹೋರಿಗಳಿಗೆ ರೈತರು ವಿಶೇಷವಾದ ಆಹಾರ ನೀಡುತ್ತಾರೆ. ದಿನನಿತ್ಯ ನುಚ್ಚು ಮೊಟ್ಟೆ, ಬೆಣ್ಣೆ ಸೇರಿದಂತೆ ಹತ್ತಿಕಾಳು ಹಿಂಡಿ ಇಟ್ಟು ಸಲಹುತ್ತಾರೆ. ಅಲ್ಲದೆ ಪ್ರತಿನಿತ್ಯ ಅವುಗಳನ್ನು ಓಡಿಸುವುದು, ಈಜಿಸುವುದು ಸೇರಿದಂತೆ ವಿವಿಧ ತಾಲೀಮುಗಳನ್ನು ಮಾಡಿಸುತ್ತಾರೆ.