ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಯೋವೃದ್ಧೆ ವಾತ್ಸಲ್ಯ ಕಿಟ್ ವಿತರಣೆ..

ವೀರಮಾರ್ಗ ನ್ಯೂಸ್ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಯೋವೃದ್ಧೆ ದೊದ್ದನಕಟ್ಟೆ ಕಾಳಮ್ಮ ಅವರಿಗೆ ವಾತ್ಸಲ್ಯ ಕಿಟ್ ವಿತರಣೆ..
ಮಾನವೀಯ ಮೌಲ್ಯಗಳು ಹಾಗೂ ಸೇವಾ ಸಂಕಲ್ಪದ ಜೀವಂತ ಪ್ರತಿರೂಪವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.
ಪೂಜ್ಯ ಖಾವಂದರು ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ, ಸಮಾಜದ ಅಂಚಿನಲ್ಲಿರುವ ಆಶ್ರಯವಿಲ್ಲದ ಹಾಗೂ ದುಡಿಯಲು ಅಶಕ್ತರಾದ ವಯೋವೃದ್ಧ ಬಡವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ₹1000 ಮಾಸಾಸನ ನೀಡಲಾಗುತ್ತಿದ್ದು, ಅವರ ದಿನನಿತ್ಯದ ಅಗತ್ಯಗಳಿಗೆ ಬೆಂಬಲವಾಗಿ ವಾತ್ಸಲ್ಯ ಕಿಟ್ ಸಹ ವಿತರಿಸಲಾಗುತ್ತಿದೆ.
ಈ ಸೇವಾ ಕಾರ್ಯದ ಭಾಗವಾಗಿ ಕಸಬಾ ವಲಯದ ದೋದ್ದನಕಟ್ಟೆ ಗ್ರಾಮದ ವಯೋವೃದ್ಧೆ ಕಾಳಮ್ಮ ಅವರಿಗೆ ಜಿಲ್ಲಾ ನಿರ್ದೇಶಕರಾದ ಯೋಗೇಶ್ ಅವರು ವಾತ್ಸಲ್ಯ ಕಿಟ್ ವಿತರಿಸಿ, ಧರ್ಮಸ್ಥಳದ ಸೇವಾ ಪರಂಪರೆಯ ಮಹತ್ವವನ್ನು ಮನದಟ್ಟು ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸಮಾಜದ ಕೊನೆಯ ವ್ಯಕ್ತಿಗೂ ಸಹಾಯದ ಕೈಚಾಚುವ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಆರ್ಥಿಕ ನೆರವಲ್ಲ, ಬದಲಾಗಿ ಗೌರವಯುತ ಜೀವನಕ್ಕೆ ದಾರಿ ತೋರಿಸುವ ಮಹತ್ತರ ಸೇವೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಪ್ರಸಾದ್, ವಲಯ ಮೇಲ್ವಿಚಾರಕರಾದ ಗುಣಶ್ರೀ, ವಿಠಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಡಿ.ಸಿ.ನಾರಾಯಣ, ಊರಿನ ಮುಖಂಡರಾದ ಗಿರಿಧರ್, ನಾಗೇಶ್, ಸೇವಾ ಪ್ರತಿನಿಧಿಗಳಾದ ಜೀವಿತ ಮತ್ತು ಕಾವ್ಯ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಮಾನವೀಯ ಸೇವೆಯು ಗ್ರಾಮೀಣ ಭಾರತದ ಸಮಾಜದಲ್ಲಿ ನಂಬಿಕೆ, ಭರವಸೆ ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.