ಸಿಇಟಿ ಪರೀಕ್ಷೆ : ಇದೇ ಮೊದಲ ಬಾರಿಗೆ QR Code ಮೂಲಕ ಮುಖ ಚಹರೆ ಪತ್ತೆ ವ್ಯವಸ್ಥೆ

ಸಿಇಟಿ ಪರೀಕ್ಷೆ : ಇದೇ ಮೊದಲ ಬಾರಿಗೆ QR Code ಮೂಲಕ ಮುಖ ಚಹರೆ ಪತ್ತೆ ವ್ಯವಸ್ಥೆ
ವೀರಮಾರ್ಗ ನ್ಯೂಸ್ ಬೆಂಗಳೂರು :
ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯುತ್ತಿರುವ ಬೆಂಗಳೂರಿನ ಮಲ್ಲೇಶ್ವರದ ೧೮ನೇ ಅಡ್ಡರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಕೇಂದ್ರಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಇಂದು ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಕೆಇಎ ಅಭಿವೃದ್ಧಿಪಡಿಸಿರುವ ಹಾಗೂ ಇದೇ ಮೊದಲ ಬಾರಿಗೆ ಜಾರಿಗೆ ತಂದಿರುವ ಕ್ಯೂಆರ್ ಕೋಡ್ ಮೂಲಕ ಮುಖ ಚಹರೆ ಪತ್ತೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಸ್ವತಃ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳ ಭಾವಚಿತ್ರ ತೆಗೆದು ನೈಜತೆ ಪರಿಶೀಲಿಸಿದರು.
ಇಂದು ಬೆಳಿಗ್ಗೆಯಿಂದಲೇ ಈ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದು, ಎಲ್ಲ ಅಭ್ಯರ್ಥಿಗಳ ನೈಜತೆಯನ್ನು ಇದರ ಮೂಲಕವೇ ಪರಿಶೀಲಿಸಿ, ಅಭ್ಯರ್ಥಿಗಳನ್ನು ಒಳಗೆ ಬಿಡಲಾಗಿದೆ ಎಂದು ಎಚ್.ಪ್ರಸನ್ನ ತಿಳಿಸಿದರು.
ಈ ಸಂದರ್ಭದಲ್ಲಿ ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕೂಡ ಹಾಜರಿದ್ದರು.
ಮೊದಲ ದಿನವಾದ ನಿನ್ನೆ ಸಾಮಾನ್ಯ ಪ್ರವೇಶ ಪರೀಕ್ಷೆಯು ಎಲ್ಲ ೭೭೫ ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು. ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡಿದ್ದ ಒಟ್ಟು ೩,೨೧,೮೯೫ ವಿದ್ಯಾರ್ಥಿಗಳ ಪೈಕಿ ೩,೧೧,೭೭೭ ಮಂದಿ (ಶೇ. ೯೪.೨೦ರಷ್ಟು) ಪರೀಕ್ಷೆಗೆ ಹಾಜರಾಗಿದ್ದರು.
ಬೆಳಗಿನ ಅವಧಿಯಲ್ಲಿ ನಡೆದ ಭೌತವಿಜ್ಞಾನ ಪತ್ರಿಕೆಗಿಂತ ಮಧ್ಯಾಹ್ನ ನಡೆದ ರಸಾಯನವಿಜ್ಞಾನ ಪತ್ರಿಕೆಯನ್ನು ೧೮೩ ಮಂದಿ ಹೆಚ್ಚಿಗೆ ಬರೆದಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂದು ಬೆಳಗಿನ ಅವಧಿಯಲ್ಲಿ ಗಣಿತ ಪರೀಕ್ಷೆ ನಡೆದಿದ್ದು, ಮಧ್ಯಾಹ್ನ ಜೀವವಿಜ್ಞಾನ ಪತ್ರಿಕೆಯ ಪರೀಕ್ಷೆ ನಡೆಯಲಿದೆ.
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮಂಗಳವಾರ ನಡೆಸಿದ ಕನ್ನಡ ಭಾಷಾ ಪರೀಕ್ಷೆಗೆ ೧,೯೫೮ ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *