ಶ್ರಾವಣ ಮಾಸ ಭಕ್ತಿಯ ವೈಭವದ ಪ್ರತೀಕ : ಸದಾಶಿವ ಸ್ವಾಮೀಜಿ.
ವೀರಮಾರ್ಗ ನ್ಯೂಸ್ : ಹಾವೇರಿ : ಅಧ್ಯಾತ್ಮವು ಭಾರತದ ಆಸ್ಮಿತೆಯಾಗಿದ್ದು, ಪವಿತ್ರ ಶ್ರಾವಣ ಮಾಸವು ಭಕ್ತಿಯ ವೈಭವದ ಪ್ರತೀಕವಾಗಿದೆ. ಪುಣ್ಯ ಪುರುಷರ ಜೀವನ ಚರಿತ್ರೆಯ ಶ್ರವಣದಿಂದ ಬದುಕಿನಲ್ಲಿ ಒತ್ತಡ ಕಡಿಮೆಯಾಗಿ, ನಿತ್ಯ ಸಮಸ್ಯೆಗಳಿಗೆ ಭಕ್ತಿ ಮಾರ್ಗ ಮೂಲಕ ಪರಿಹಾರ ದೊರೆಯುತ್ತಿದೆ. ಆತ್ಮಚಿಂತನೆ, ಸತ್ಕಾರ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರೇರಣೆಗೆ ಇಂಥಹ ಧಾರ್ಮಿಕತೆ ಸಹಾಯವಾಗುತ್ತದೆ ಎಂದು ಹುಕ್ಕೇರಿಮಠದ ಡಾ.ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಮೊದಲನೆ ಸೋಮವಾರ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲೋಕೋದ್ಧಾರ ಮತ್ತು ಆತ್ಮೋದ್ಧಾರದ ಸೌಹಾರ್ದಯುತ ಬದುಕಿಗೆ, ಸಂಸ್ಕಾರ ಸಂವರ್ಧನೆಗೆ ಶ್ರಾವಣ ಮಾಸದ ಪ್ರವಚನವು ನಮ್ಮ ಬದುಕಿಗೆ ಪ್ರೇರಕಶಕ್ತಿಯಾಗುತ್ತದೆ. ಶ್ರಾವಣ ಮಾಸವು ಸಂಕ್ರಮಣದ ಕಾಲವಾಗಿದ್ದು, ಪ್ರಕೃತಿಯಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. ಮಳೆಯಿಂದ ಪ್ರಕೃತಿ ಹಚ್ಚ ಹಸಿರಿನಿಂದ ಕೂಡಿದ್ದು, ಮನುಷ್ಯನೂ ಸಹ ತನ್ನ ಗುಣ ಸ್ವಭಾವ ಬದಲಾವಣೆಗೆ ಸಕಾಲವಾಗಿದೆ. ಶ್ರಾವಣ ಮಾಸದ ಆಧ್ಯಾತ್ಮಿಕ ಚಿಂತನೆಯಿಂದ ತನ್ನಲ್ಲಿನ ದುರ್ಗಣ ಹೋಗಲಾಡಿಸಿ ಸನ್ನಡತೆ ಹೊಂದಲು ಸಕಾಲವಾಗಿದೆ ಎಂದು ಹೇಳಿದರು.
ಶ್ರಾವಣ ಮಾಸದ ವಿಶೇಷ ಉಪನ್ಯಾಸ ನೀಡಿದ ಜಗದೀಶ ಹತ್ತಿಕೋಟಿ ಮಾತನಾಡಿ, 12 ನೇ ಶತಮಾನದ ಬಸವಾದಿ ಶಿವಶರಣರ ಅನುಭವ ಮಂಟಪವು ಲಿಂಗ ಸಮಾನತೆ, ಕಾಯಕ ಪ್ರಜ್ಞೆ, ದಾಸೋಹ ಮತ್ತು ಸಮಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಮೊದಲ ಸಂಸತ್ತು ಆಗಿತ್ತು, ಅಂದಿನ ಸಂದೇಶಗಳೂ ಇಂದೂ ಪ್ರಸ್ತುತವಾಗಿವೆ. ಇಂಥಹ ಅಮೂಲ್ಯ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹುಕ್ಕೇರಿಮಠ ಅಕ್ಕನ ಬಳಗದ ಸದಸ್ಯರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭದಲ್ಲಿ ದಾಸೋಹಿ ಅನ್ನಪೂರ್ಣ ಅಪ್ಪಣ್ಣನವರ, ಡಾ. ಉಮಾ ಬಳಿಗಾರ, ಸೋಮಣ್ಣ ಮುಷ್ಠಿ, ಜಗದೀಶ ತುಪ್ಪದ, ಮಹಾಂತೇಶ ಮಳಿಮಠ, ಎಂ.ಎಂ. ಹಾಲಯ್ಯನವರಮಠ, ಮಹೇಶ ಚಿನ್ನಿಕಟ್ಟಿ, ಬಿ. ಬಸವರಾಜ, ಕಾಂತೇಶ ತಳವಾರ, ಲಲಿತಕ್ಕ ಹೊರಡಿ, ಶಿವಲಿಂಗಯ್ಯ ಮಠಪತಿ, ಎಂ.ಎಸ್. ಹಿರೇಮಠ, ಶ್ರೀಧರ, ಅನ್ನಪೂರ್ಣ ಭರತನೂರಮಠ, ವನಿತಾ ಮಾಗನೂರ, ಪ್ರಿಯಾ ಹಂದ್ರಾಳ, ಮತ್ತಿತರರು ಉಪಸ್ಥಿತರಿದ್ದರು.
ಸಾಯಿ ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ನಿರೂಪಿಸಿದರು. ಕೊನೆಯಲ್ಲಿ ಸುನೀಲ ಮಳೆಪ್ಪನವರ ವಂದಿಸಿದರು.