ವೆನಿಲ್ಲಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು : ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಆರೋಪಿಗಳ ಶಾಕಿಂಗ್ ಪ್ಲಾನ್ ಬಹಿರಂಗ,,,!
ವೀರಮಾರ್ಗ ನ್ಯೂಸ್ : ಕಾಡುಗೋಡಿ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ ಬಾಲಕಿ ವೆನಿಲ್ಲಾ ಹತ್ಯೆ ಪ್ರಕರಣವು ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಪ್ರಕರಣದ ತನಿಖೆ ಮುಂದುವರಿದಂತೆ ಬೆಚ್ಚಿಬೀಳಿಸುವ ಮಾಹಿತಿಗಳು ಒಂದೊಂದಾಗಿ ಹೊರಬರುತ್ತಿದ್ದು, ಪೊಲೀಸರು ಪ್ರಮುಖ ಆರೋಪಿಗಳಾದ ಪ್ರಿಯಾಂಕ ಮತ್ತು ಮೋಹನ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆರಂಭದಲ್ಲಿ ಈ ಪ್ರಕರಣವನ್ನು ಅಸಹಜ ಸಾವು (ಯುಡಿಆರ್) ಎಂದು ದಾಖಲಿಸಲಾಗಿತ್ತು. ಆದರೆ ತನಿಖೆಯ ವೇಳೆ ಹಲವು ಅನುಮಾನಾಸ್ಪದ ಅಂಶಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿದ್ದಾರೆ.
ತನಿಖೆಯ ಪ್ರಕಾರ, ಮಗು ಸಾವನ್ನಪ್ಪಿದ ಬಳಿಕವೂ ತಾಯಿಯಾದ ಪ್ರಿಯಾಂಕ ಯಾವುದೇ ಅನುಮಾನ ಮೂಡದಂತೆ ಮಗುವಿನ ಶವವನ್ನು ಮನೆಗೆ ತಂದು ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿದ್ದಾಳೆ ಎನ್ನಲಾಗಿದೆ. ಬಳಿí `
ಸಹಜ ಸಾವಿನಂತೆ ತೋರಿಸಲು ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇದಲ್ಲದೆ, ಮಗುವಿನ ಶವವನ್ನು ಆಸ್ಪತ್ರೆಗೆ ಕರೆದೊಯ್ದು ಸಹಜ ಸಾವು ಎಂಬಂತೆ ಬಿಂಬಿಸಲು ಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಆರಂಭದಲ್ಲಿ ಆಹಾರ ವಿಷಬಾಧೆಯಿಂದ ಮಗು ಸಾವನ್ನಪ್ಪಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದರೂ, ಬಳಿಕದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ.
ಪ್ರಕರಣದ ತನಿಖೆಯ ಭಾಗವಾಗಿ ನಡೆದ ಕ್ರೈಂ ಸೀನ್ ರೀ-ಕ್ರಿಯೇಷನ್ ವೇಳೆ ಆರೋಪಿ ಮೋಹನ್ ಘಟನೆಯ ಸಂಪೂರ್ಣ ವಿವರವನ್ನು ಪೊಲೀಸರ ಮುಂದೆ ಪುನರಾವರ್ತಿಸಿದ್ದಾನೆ. ಕಾರಿನೊಳಗೆ ನಡೆದ ಘಟನೆಯಿಂದ ಹಿಡಿದು ಶವ ಸಾಗಾಟದವರೆಗಿನ ಹಲವು ಮಹತ್ವದ ಮಾಹಿತಿಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಘಟನೆ ಬಳಿಕ ಆರೋಪಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಪೂರ್ವಯೋಜಿತವಾಗಿ ನಡೆದುಕೊಂಡಿರುವ ಸಾಧ್ಯತೆಯೂ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣವನ್ನು ಸಹಜ ಸಾವು ಎಂದು ತೋರಿಸಲು ಹಾಗೂ ಸಾಕ್ಷ್ಯಾಧಾರಗಳನ್ನು ದಾರಿ ತಪ್ಪಿಸಲು ಸಂಚು ರೂಪಿಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಇನ್ನೂ ಘಟನೆ ನಂತರ ಆರೋಪಿಗಳು ಕೋಲಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಯಾವುದೇ ಆತಂಕವಿಲ್ಲದಂತೆ ಸಂಚರಿಸಿದ್ದು, ಸಾಮಾನ್ಯ ಜೀವನ ನಡೆಸಿದಂತೆ ವರ್ತಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದರಿಂದ ಅವರ ಮೇಲಿನ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಪೊಲೀಸರ ಮಾಹಿತಿಯಂತೆ, ಆರೋಪಿಗಳು ನಗದು ವ್ಯವಹಾರಗಳಿಗೆ ಹೆಚ್ಚು ಒತ್ತು ನೀಡಿದ್ದು, ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡಿ, ಸ್ಥಳ ಬದಲಾವಣೆಗಳ ಮೂಲಕ ತಮ್ಮ ಚಲನವಲನವನ್ನು ಪತ್ತೆಹಚ್ಚದಂತೆ ನೋಡಿಕೊಂಡಿದ್ದಾರೆ. ಮೈಸೂರು, ಹಾಸನ ಹಾಗೂ ಸಕಲೇಶಪುರ ಭಾಗಗಳಲ್ಲಿ ಆರೋಪಿಗಳ ಓಡಾಟದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಿಯಾಂಕಳನ್ನು ಬಂಧಿಸಿದ್ದಾರೆ. ನಂತರ ಮೋಹನ್ನ ವಿಚಾರಣೆಯನ್ನೂ ತೀವ್ರಗೊಳಿಸಲಾಗಿದೆ.
ಸಾಕ್ಷ್ಯ ನಾಶದ ಪ್ರಯತ್ನ, ಪ್ರಕರಣವನ್ನು ಮುಚ್ಚಿಹಾಕಲು ರೂಪಿಸಿದ ಯೋಜನೆ ಹಾಗೂ ಘಟನೆಯ ನಂತರದ ನಡೆ-ನುಡಿಗಳ ಕುರಿತು ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ವೆನಿಲ್ಲಾ ಹತ್ಯೆ ಪ್ರಕರಣದ ಹಿಂದಿರುವ ಸಂಪೂರ್ಣ ಸತ್ಯಾಂಶವನ್ನು ಬಹಿರಂಗಪಡಿಸಲು ಪೊಲೀಸರು ನಿರಂತರ ತನಿಖೆ ಮುಂದುವರಿಸಿದ್ದಾರೆ.