ಹೆಣ್ಣು ಮಕ್ಕಳು ತಮ್ಮಲ್ಲಿನ ವೃತ್ತಿ ಕೌಶಲ್ಯ ಸದ್ಭಳಕೆ ಮಾಡಿಕೊಂಡು ಗುಡಿಕೈಗಾರಿಕೆ ಸ್ಥಾಪಿಸಿ ಸಾಧನೆ ಮಾಡಿ.
ವೀರಮಾರ್ಗ ನ್ಯೂಸ್ : ಕೆ.ಆರ್.ಪೇಟೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಶೀಲ ಮಹಿಳೆ ಶ್ರೀಮತಿ ಅಶ್ವಿನಿ ಶಶಿಭೂಷಣ್, ಪ್ರಕೃತಿ ಸಾವಯವ ಉತ್ಪನ್ನಗಳ ಕಂಪನಿಯ ಸ್ಥಾಪಕರು ಮತ್ತು ಕಾರ್ಯನಿರ್ವಹಣಾಧಿಕಾರಿ ಗಳು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಉದ್ಯಮಶೀಲ ಮಹಿಳೆಯರಾಗಲು ಬೇಕಾದ ಗುರಿ, ಬದ್ಧತೆ, ಮಾರುಕಟ್ಟೆ ತಂತ್ರಗಳು, ಆತ್ಮವಿಶ್ವಾಸ ಬಹಳ ಮುಖ್ಯ, ನಂತರದ ಸ್ಥಾನ ಹಣ. ಹಾಗಾಗಿ ವಿದ್ಯಾರ್ಥಿಗಳು ಈಗಿನಿಂದಲೇ ಮನೆಯಿಂದಲೇ ಸಣ್ಣ ಪ್ರಮಾಣದ ಗುಡಿ ಕೈಗಾರಿಕೆಗಳನ್ನು ಆರಂಭಿಸಬೇಕೆಂದು ಎಂದು ಕರೆ ನೀಡಿದರು. ವಿದ್ಯಾರ್ಥಿಗಳಿಗೆ ದೊರೆಯುವ ಔದ್ಯೋಗಿಕ ಅವಕಾಶಗಳು ಹಾಗೂ ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ಪ್ರೊ.ಅನುರಾಧ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣು ಮಕ್ಕಳು ದೇಶದ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡುತ್ತಿದ್ದಾರೆ, ಇನ್ನೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಹೆಣ್ಣು ಮಕ್ಕಳು ತಮ್ಮ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುವ ಜೊತೆಗೆ ನಾಗರಿಕ ಸಮಾಜವನ್ನು ಪ್ರಗತಿಯ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ. ರಾಷ್ಟ್ರದ ಮುನ್ನಡೆಗೆ ಹೆಣ್ಣು ಮಕ್ಕಳ ಕಾಣಿಕೆಯು ಅಪಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಚಾಲಕರಾದ ಡಾ.ಕೆ.ಪಿ. ಪ್ರತಿಮಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಸಿ.ಎಸ್. ಕೆಂಡಗಣ್ಣೇಗೌಡ, ಐಕ್ಯುಎಸಿ ಸಮಿತಿ ಸಂಚಾಲಕರಾದ ಜಿ.ಮಧು, ಎನ್.ಎಸ್.ಎಸ್ ಸಮಿತಿ ಸಂಚಾಲಕ ಎಂ.ಶಿವಸ್ವಾಮಿ, ಗ್ರಂಥಪಾಲಕರಾದ ಡಾ.ಪುಟ್ಟಮಾದಪ್ಪ, ಅಧ್ಯಾಪಕರಾದ ಆದರ್ಶ, ಚೂಡಲಿಂಗಪ್ಪ, ಮಾದೇವಸ್ವಾಮಿ ಹಾಗೂ ಅಧ್ಯಾಪಕ, ಅಧ್ಯಾಪಕೇತರ ವರ್ಗದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.