ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಡಿಸಿ ಜಗದೀಶ್ ನಾಯಕ್
ಲೋಕಾಯುಕ್ತ ಇಲಾಖೆಯಿಂದ ಭರ್ಜರಿ ಬೇಟೆ…
ವೀರಮಾರ್ಗ ನ್ಯೂಸ್ : ಬೆಂಗಳೂರು : ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಬಾರ್ ಲೈಸೆನ್ಸ್ ಪಡೆಯಲು ಬರೋಬ್ಬರಿ 2.30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಡಿಸಿ, ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಅಬಕಾರಿ ಡಿಸಿ ಜಗದೀಶ್ ನಾಯಕ್, ಚಾಲಕ ಲಕ್ಕಪ್ಪ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರದ ಅಬಕಾರಿ ಭವನದಲ್ಲಿ ಧಿಡೀರ್ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.
ದೂರುದಾರ ಲಕ್ಷ್ಮಿ ನಾರಾಯಣ ಬಾರ್ ಓಪನ್ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಸಿಎಲ್7 ಮತ್ತು ಮೈಕ್ರೋ ಬ್ರೈವರಿ ಲೈಸೆನ್ಸ್‌ಗೆ ಸರ್ಕಾರಿ ಶುಲ್ಕ 21 ಲಕ್ಷ ಕೂಡ ಪಾವತಿಸಿದ್ದರು. ಆದರೆ ಈ ಎರಡು ಪರವಾನಗಿ ನೀಡಲು ಬೆಂಗಳೂರು ನಗರ ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಬರೋಬ್ಬರಿ 2.30 ಕೋಟಿ ರೂ. ಲಂಚ ಕೇಳಿದ್ದಾರೆ. ಅದರಲ್ಲಿ 50 ಲಕ್ಷ ರೂ. ಇಂದು (ಶನಿವಾರ) ಅಡ್ವಾನ್ಸ್ ಕೊಡಲು ಹೇಳಿದ್ದರು. ಇದರಿಂದ ಲಕ್ಷ್ಮೀನಾರಾಯಣ ನೇರವಾಗಿ ಲೋಕಾಯುಕ್ತ ಪೊಲೀಸರ ಮೊರೆಹೋಗಿದ್ದರು.
ಬಾರ್ ಲೈಸೆನ್ಸ್ ವಿಚಾರಕ್ಕೆ ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕೆ ಇಳಿದ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ ಬ್ಯಾಟರಾಯನಪುರದಲ್ಲಿರುವ ಅಬಕಾರಿ ಭವನದಲ್ಲೇ ₹25 ಲಕ್ಷ ಹಣ ಅಡ್ವಾನ್ಸ್ ಸ್ವೀಕರಿಸುತ್ತಿದ್ದ ಡಿಸಿ ಜಗದೀಶ್ ನಾಯ್ಕ್, ವಾಹನ ಚಾಲಕ ಲಕ್ಕಪ್ಪ ಮತ್ತು ಸೂಪರಿಂಟೆಂಡೆಂಟ್ ಸೇರಿದಂತೆ ಲಂಚದ ಮಾಲು ಸಮೇತ ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.