ವೀರಮಾರ್ಗ ನ್ಯೂಸ್ : ಅರಬಿಳಚಿ : ಜ. 13 ರಿಂದ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ
ಭದ್ರಾವತಿ ತಾಲ್ಲೂಕಿನ ಅರಬಿಳಚಿ ಗ್ರಾಮದಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವು ಇದೇ ಜನವರಿ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳ ವಿವರ ಇಂತಿದೆ : ಜ. 13 (ಮಂಗಳವಾರ): ಅಂದು ಬೆಳಿಗ್ಗೆ ಧ್ವಜಾರೋಹಣ ಹಾಗೂ ಕಳಸ ಸ್ಥಾಪನೆಯೊಂದಿಗೆ ಉತ್ಸವಕ್ಕೆ ಚಾಲನೆ ಸಿಗಲಿದೆ. ಮಧ್ಯಾಹ್ನ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಗ್ರಾಮದ ಮನೆ-ಮನೆಗಳಿಂದ ದೇವಿಗೆ ಪೂಜೆ ಮತ್ತು ಆರತಿ ಸಮರ್ಪಣೆ ನಡೆಯಲಿದೆ. ನಂತರ ಮಂಟಪದಲ್ಲಿ ದೇವಿಯ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯ ಜರುಗಲಿದೆ. ಜ. 14 (ಬುಧವಾರ): ಬೆಳಿಗ್ಗೆ ಮತ್ತು ಸಂಜೆ ದೇವಿಗೆ ಮಹಾಮಂಗಳಾರತಿ ನೆರವೇರಲಿದೆ. ರಾತ್ರಿ ಸಾರ್ವಜನಿಕರಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜ. 15 (ಗುರುವಾರ): ಜಾತ್ರೆಯ ಸಮಾರೋಪದ ದಿನವಾದ ಗುರುವಾರ ಮಧ್ಯರಾತ್ರಿ 12:30ಕ್ಕೆ ಬಾಣಬಿರುಸುಗಳ ಪ್ರದರ್ಶನದೊಂದಿಗೆ ದೇವಿಯ ರಾಜಬೀದಿ ಉತ್ಸವ ನಡೆಯಲಿದೆ. ನಂತರ ಶ್ರೀ ದೇವಿಯನ್ನು ವನದಲ್ಲಿ ಪ್ರತಿಷ್ಠಾಪಿಸಲಾಗುವುದು. ಅರಬಿಳಚಿ, ಅರಬಿಳಚಿ ಕ್ಯಾಂಪ್ ಮತ್ತು ಅರಬಿಳಚಿ ವಡ್ಡರಹಟ್ಟಿ ಗ್ರಾಮಸ್ಥರು ಹಾಗೂ ವ್ಯವಸ್ಥಾಪಕ ಮಂಡಳಿಯವರು ಜಾತ್ರೆಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ಕೋರಿದ್ದಾರೆ.