ನಾಲ್ಕು ಸಾರಿಗೆ ನಿಗಮಗಳಿಗೆ ೫,೨೦೦ ಕೋಟಿ ನಷ್ಟ

ನಾಲ್ಕು ಸಾರಿಗೆ ನಿಗಮಗಳಿಗೆ ೫,೨೦೦ ಕೋಟಿ ನಷ್ಟ
ಬೆಂಗಳೂರು :
ತೈಲಬೆಲೆ ಏರಿಕೆ, ಸಿಬ್ಬಂದಿ ವೇತನ,ಬಸ್ ಗಳ ನಿರ್ವಹಣೆ ಇನ್ನಿತರ ಕಾರಣಗಳಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಧೀನದಲ್ಲಿರುವ ನಾಲ್ಕು ಸಾರಿಗೆ ನಿಗಮಗಳು ೫೨೦೦ ಕೋಟಿ ನಷ್ಟದಲ್ಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಪರಿಷತ್ ನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಳೆದ ೫ ವರ್ಷಗಳಲ್ಲಿ ಕೆಎಸ್‌ಆರ್‌ಟಿಸಿಗೆ ೧೫೦೦ ಕೋಟಿ, ಬಿಎಂಟಿಸಿಗೆ ೧೫೪೪ ಕೋಟಿ. ಕೆಕೆಆರ್‌ಟಿಸಿಗೆ ೭೭೭ ಕೋಟಿ,ಎನ್‌ಡಬ್ಲೂಕೆಆರ್‌ಟಿಸಿಗೆ ೧೩೮೬ ಕೋಟಿ ನಷ್ಟವಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಶಕ್ತಿ ಯೋಜನೆಯ ಪೂರ್ತಿ ಮೊತ್ತ ಪಡೆಯಬೇಕಿದೆ. ಶೇ ೪೦ ರಷ್ಟು ಬಸ್‌ಗಳು ನಷ್ಟದಲ್ಲೇ ಓಡುತ್ತಿವೆ. ಶೇ ೩೦ರಷ್ಟು ಬಸ್‌ಗಳು ಯಾವುದೇ ಲಾಭ-ನಷ್ಟ ಇಲ್ಲದೆ ಓಡುತ್ತಿವೆ. ಶೇ ೩೦ರಷ್ಟು ಬಸ್‌ಗಳು ಮಾತ್ರ ಲಾಭದಲ್ಲಿವೆ. ಸಾರಿಗೆ ಇಲಾಖೆಯಲ್ಲಿ ಪ್ರತಿದಿನ ೯.೪೫ ಕೋಟಿ ರೂ. ಖರ್ಚು ಇದೆ. ಏನಾದರೂ ದೂರುಗಳಿದ್ದರೆ ತಿಳಿಸಿ ಸರಿಪಡಿಸೋಣ ಎಂದು ಹೇಳಿದರು.
ನಷ್ಟ ಸರಿದೂಗಿಸಲು ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಪುನಶ್ವೇತನಕ್ಕೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಇಂಧನ ಬೆಲೆ ಹೆಚ್ಚಳದೊಂದಿಗೆ ಸಿಬ್ಬಂದಿ ಹಾಗೂ ವಾಹನ ಬಿಡಿಭಾಗಗಳ ಹೆಚ್ಚಳದಿಂದಾಗಿ ಆರ್ಥಿಕ ಹೊರೆ ಉಂಟಾಗಿದ್ದರಿಂದ ಕಳೆದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ.೧೫ರಷ್ಟು ಹೆಚ್ಚಿಸಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ೨೦೨೪-೨೫ನೇ ಸಾಲಿನಲ್ಲಿ ಮೀಸಲಿಟ್ಟಿದ್ದ ೯,೯೭೮ ಕೋಟಿ ಅನುದಾನ ಪೈಕಿ ಇನ್ನೂ ೨ ಸಾವಿರ ಕೋಟಿ ಬಿಡುಗಡೆಯಾಗಬೇಕಿದೆ.ಅನುದಾನ ಮಂಜೂರಾದ ಬಳಿಕ ಸಾರಿಗೆ ನಿಗಮಗಳಿಗೆ ನೀಡಲಾಗುವುದು ಎಂದು ಉತ್ತರಿಸಿದರು.
ಶಕ್ತಿ ಯೋಜನೆಗೆ ೯,೯೭೮ ಕೋಟಿ ರೂಪಾಯಿ ಖರ್ಚಾಗಿದೆ. ೪೪೮ ಬಿಎಂಟಿಸಿ ಬಸ್ ಖರೀದಿ ಮಾಡಿದ್ದೇವೆ. ೨೦೧೬ರ ಬಳಿಕ ೧೦ ಸಾವಿರ ಮಂದಿಯನ್ನು ನೇಮಕ ಮಾಡಿಕೊಂಡಿದ್ದೇವೆ. ಹೊಸದಾಗಿ ೫,೩೬೦ ಬಸ್ ಖರೀದಿಸಲಾಗಿದೆ. ಬಸ್?ಗಳು ಮೊದಲು ೧.೪೦ ಸಾವಿರ ಟ್ರಿಪ್ ಸಂಚರಿಸುತ್ತಿದ್ದವು.
ಈಗ ೧.೯೦ ಲಕ್ಷ ಟ್ರಿಪ್ ಪ್ರತಿದಿನ ಸಂಚರಿಸುತ್ತಿವೆ. ೪೦ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಗುತ್ತಿದೆ. ಆರೋಗ್ಯ ಯೋಜನೆಗೆ ಒಂದು ತಿಂಗಳಿಗೆ ಸಿಬ್ಬಂದಿಯಿಂದ ೬೫೦ ರೂ. ಪಡೆಯಲಾಗುತ್ತಿದೆ. ಸಿಬ್ಬಂದಿಯ ಇಡೀ ಕುಟುಂಬಕ್ಕೆ ಚಿಕಿತ್ಸೆ ನೀಡಲು ಇದು ಸಹಾಯವಾಗಿದೆ ಎಂದು ಹೇಳಿದರು.
ಕಳೆದ ವರ್ಷ ೨೦೨೪ರ ಡಿಸೆಂಬರ್‌ನಲ್ಲಿ ಎನ್‌ಡಬ್ಲ್ಯುಕೆಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಎಮ್. ಪ್ರಿಯಾಂಗಾ ಅವರು ಆರ್ಥಿಕ ಇಲಾಖೆಗೆ ಬಾಕಿ ಇರುವ ೪೧೪ ಕೋಟಿ ರೂ. ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದರು.

Leave a Reply

Your email address will not be published. Required fields are marked *